Sunday 1 August 2010

ತಿರುಕ್ಕುಱಳ್: ಅಧ್ಯಾಯ 79-88



Thirukkural in Kannada
ತಿರುಕ್ಕುಱಳ್ (ಹೊಸಗನ್ನಡ ಅನುವಾದಗಳೊಂದಿಗೆ)



ಅರ್ಥ ಭಾಗ: ಅಧ್ಯಾಯ: 79-88

ಅಧ್ಯಾಯ 79. ಸ್ನೇಹ


781. ಸ್ನೇಹಕ್ಕಿಂತ ಪಡೆಯಲು ಕಷ್ಟವಾದ ವಸ್ತು ಯಾವುದಿದೆ? ಹಾಗೆ ಪಡೆದುಕೊಂಡ ಸ್ನೇಹಕ್ಕಿಂತ ಶತ್ರುಗಳ ಸಂಚನ್ನು ಮುರಿಯಲು ಮಿಗಿಲಾದ ರಕ್ಷಣೆ (ಅರಸನಿಗೆ) ಬೇರೆ ಯಾವುದೆ?
782. ತುಂಬಿದ ಅರಿವುಳ್ಳವರ ಗೆಳೆತನ ಬಿದಿಗೆಯ ಚಂದ್ರನು ವರ್ಧಿಸಿದಂತೆ; ಅರಿವುಗೇಡಿಗಳ ಕೆಳೆತನ ಪೂರ್ಣ ಚಂದ್ರ ತೇಯುತ್ತ ಕ್ಷಯಿಸುವಂತೆ.
783. ಒಳ್ಳೆಯ ಗ್ರಂಥಗಳನ್ನು ಓದುತ್ತ ಓದುತ್ತ ಮನಸ್ಸು ಆನಂದಿಂದ ವಿಕಾಸವಾಗುವಂತೆ, ಸದ್ಗುಣೆಗಳ ಸ್ನೇಹವೂ ಪಳಗಿದಂತೆಲ್ಲ ಹೆಚ್ಚು ಸಂತೃಪ್ತಿಯನ್ನು ತರುವುದು.
784. ಸ್ನೇಹ ಮಾಡುವುದು ಬರಿಯ ಸಂತೋಷಕ್ಕಾಗಿ ಅಲ್ಲ; ಸ್ನೇಹಿತರಾದವರು ದಾರಿತಪ್ಪಿದಾಗ ಮುಂದೆ ನಿಂತು ಅವರ ತಪ್ಪುಗಳನ್ನು ನಿಷ್ಠುರವಾಗಿ ಎತ್ತಿ ಹೇಳಬೇಕು.
785. ನಿಕಟವಾದ ಒಡನಾಟವಾಗಲೀ, ಪರಸ್ಪರ ಬಳಕೆಯಾಗಲೀ ಸ್ನೇಹಕ್ಕೆ ಅಗತ್ಯವಿಲ್ಲ; ಒಬ್ಬರನ್ನೊಬ್ಬರು (ಅಂತರಂಗದಲ್ಲಿ) ಅರಿತು ನಡೆದುಕೊಳ್ಳುವುದರಿಂದ ಸ್ನೇಹದ ಹಕ್ಕನ್ನು ಪಡೆಯುಬಹುದು.
786. ಕಂಡಾಗ ಮುಖದಲ್ಲಿ ಮಾತ್ರ ನಗೆ ಸೂಸುವ ಕೆಳೆತನವು ಕೆಳೆ ಎನಿಸಿಕೊಳ್ಳುವುದಿಲ್ಲ; ಪ್ರೀತಿಯಿಂದ ಹೃದಯವರಳಿಸಿ ಸಕ್ಕಾಗ ಅದು ಸ್ನೇಹವೆನಿಸಿಕೊಳ್ಳುವುದು.
787. ಆಪ್ತನಾದವನ್ನು ಕೇಡಿನ ಮಾರ್ಗದಿಂದ ತಪ್ಪಿಸಿ, ಅವನನ್ನು ಸನ್ಮಾರ್ಗದಲ್ಲಿ ನಡೆಸಿ, ಆಪತ್ಕಾಲದಲ್ಲಿ ಅವನೊಡನಿದ್ದು ದುಃಖದಲ್ಲಿ ಪಾಲ್ಗೊಳ್ಳುವುದೇ ಸ್ನೇಹವೆನಿಸುವುದು.
788. (ಸಭೆಯಲ್ಲಿ) ತೊಟ್ಟ ಉಡುಗೆ ಚಾರಿದರೆ ಕೂಡಲೇ ಕೈ ಅದನ್ನು ಹಿಡಿದು ಕೊಳ್ಳುವಂತೆ, ಗೆಳೆಯನ ಸಂಕಟ ಕಾಲದಲ್ಲಿ ಕೂಡಲೇ ನೆರವಾಗಿ ಅವನ ಕಷ್ಟವನ್ನು ಪರಿಹರಿಸುವುದೇ ಗೆಳೆತನವೆನ್ನಿಸಿಕೊಳ್ಳುತ್ತದೆ.
789. ಗೆಳೆತನಕ್ಕೆ ಉನ್ನತವಾದ ನೆಲೆ ಯಾವುದೆಂದರೆ ಗೆಳೆಯನಿಂದ ಬೇರೆಯಾಗದೆ ಸಾಧ್ಯವಾದಾಗಲೆಲ್ಲ ಅವನ ಸಂಕಟದ ವೇಳೆಯಲ್ಲಿ ನೆರವಾಗಿ ನಿಲ್ಲುವುದು.
790. "ಇವರು ನಮಗೆ ಬಹಳ ಬೇಕಾದವರು, ನಾವು ಅವರಿಗೆ ಬಹಳ ಬೇಕಾದವರು". ಎಂದು ಪರಸ್ಪರ ಪ್ರಶಂಸಿಸಿಕೊಳ್ಳುವುದು ಸ್ನೇಹವನ್ನು ಕೀಳು ಮಾಡುತ್ತದೆ.

ಅಧ್ಯಾಯ 80. ಸ್ನೇಹ ಪರೀಕ್ಷೆ

791. ಪರೀಕ್ಷೆ ಮಾಡದೆ (ವಿಚಾರ ಮಾಡದೆ) ಬೆಳೆಸಿದ ಸ್ನೇಹಕ್ಕಿಂತ ಕೆಟ್ಟದು ಬೇರಿಲ್ಲ; ಸ್ನೇಹಶೀಲರಾದವರಿಗೆ ಒಮ್ಮ ಸ್ನೇಹ ಗಳಿಸಿದ ನಂತರ ಅದರಿಂದ ಬಿಡುಗಡೆಯಿಲ್ಲ.
792. ಹಲವು ಬಾರಿ ಪರೀಕ್ಷಿಸಿ ಸ್ನೇಹವನ್ನು ಕೈಗೊಳ್ಳದವನ ಗೆಳೆತನದ ಪರಿಣಾಮವೆಂದರೆ ತಾನು ಸಾಯುವ ತನಕ ದುಃಖವನ್ನು ಅನುಭವಿಸುವುದು.
793. ಒಬ್ಬನ ಗುಣವನ್ನೂ, ಕುಲೀನತೆಯನ್ನೂ, ಗುಣದೋಷಗಳನ್ನೂ, ಕುಂದದಿರುವ ಬಂಧುಗಳ ಸ್ವಭಾವವನ್ನು ಅರಿತು ಸ್ನೇಹವನ್ನು ಕೈಗೊಳ್ಳಬೇಕು.
794. ಒಳ್ಳೆಯ ಕುಲೀನನಾಗಿದ್ದು, ತನ್ನನ್ನು ಕುರಿತ ಬರುವ ನಿಂದೆಗಳಿಗೆ ನಾಚುವವನ ಸ್ನೇಹವನ್ನು ಏನಾದರೂ ಪ್ರತಿಫಲ ಕೊಟ್ಟಾದರೂ ಕೊಂಡುಕೊಳ್ಳಬೇಕು.
795. ಲೋಕಾಚಾರವಲ್ಲದ ಕೆಲಸವನ್ನು ಮಾಡೀದಾಗ ಪಶ್ಚಾತ್ತಾಪ ಪಡುವಂತೆ ನಿಂದಿಸಿ ಹೇಳುವ, ಲೋಕದ ನಡೆಯನ್ನು ಅರಿಯುವಂತೆ ಮಾಡುವ ಸ್ನೇಹವನ್ನು ಶೋಧಿಸಿ ಪಡೆದುಕೊಳ್ಳಬೇಕು.
796. ಕೇಡಿನಲ್ಲಿಯೂ ಒಂದು ಒಳ್ಳೆಯ ಗುಣವುಂಟು; ಅದು ಗೆಳೆಯರ ಗುಣ ಸ್ವಭಾವಗಳನ್ನು ಹಾಸಿ ಅಳೆಯುವ ತೋರುಗೋಲಾಗುವುದು.
797. ಒಬ್ಬನಿಗೆ ಲಾಭದಾಯಕವಾದ ವಿಷಯವೆಂದರೆ, ಮೂರ್ಖರ ಗೆಳೆತನವನ್ನು ತ್ಯಜಿಸಿ ದೂರವಿರುವುದು.
798. ಮನಸನ್ನು ಅಸ್ಥಿರಗೊಳ್ಳುವ ಆಲೋಚನೆಗಳನ್ನು ಮನಸ್ಸಿನಲ್ಲಿ ನೆನೆಯದಿರಬೇಕು; (ಅದೇ ರೀತಿ) ಸಂಕಟದ ಸಮಯದಲ್ಲಿ ಕೈಬಿಡುವಂಥವರ ಸ್ನೇಹವನ್ನು ಕೈಗೊಳ್ಳದಿರಬೇಕು.
799. ನಾವು ಕೆಟ್ಟ ಸಮಯದಲ್ಲಿ ಕೈಬಿಡುವವರ ಕೆಳೆಯನ್ನು ಸಾವು ನಮ್ಮನ್ನು ಸೆಳೆದೊಯ್ಯುವ ಸಮಯದಲ್ಲಿ ನೆನೆದರೂ ಕೂಡ ಮನಸ್ಸು ಸುಡುವುದು.
800. ನಿಷ್ಠಳಂಕಿಗಳ ಗೆಳೆತನವನ್ನು ಅಪ್ಪಿ ಸ್ವೀಕರಿಸಬೇಕು; ಲೋಕದೊಂದಿಗೆ ಒಪ್ಪಿಲ್ಲದವರ ಗೆಳೆತನವನ್ನು ಪ್ರತಿಫಲ ಕೊಟ್ಟಾದರೂ ಕೈಬಿಡಬೇಕು.

ಅಧ್ಯಾಯ 81. ಸಲಿಗೆ

801. ಸಲಿಗೆ ಎಂದರೆ, ಬಹಳ ಕಾಲದ ಗಾಢವಾದ ಗೆಳೆತನದ ಹಕ್ಕಿನಿಂದ ಮಾಡುವ ಕೆಲಸಗಳಲ್ಲಿ ಸ್ವಲ್ಪವೂ ವಿರೋಧವಿಲ್ಲದೆ ಬಂದಾಗಿರುವುದೇ.
802. ಗೆಳೆಯರಾದವರು ಸಲಿಗೆಯ ಹಕ್ಕಿನಿಂತ ಮಾಡೂವ ಕೆಲಸಗಳೇ ಗೆಳೆತನದ ಮುಖ್ಯವಾದ ಅಂಗಗಳು. ಅದುದರಿಂದ ಕೆಲಸಗಳಿಗೆ ಕೋಪಿಸಿಕೊಳ್ಳದೆ ಪರಸ್ಪರ ಒಪ್ಪಿಕೊಂಡು ಸಂತೋಷಪಡುವುದೇ ತಿಳಿದವರ ಲಕ್ಷಣ (ಧರ್ಮ)
803. ಸ್ನೇಹಿತರು ಸಲಿಗೆಯ ಹಕ್ಕಿನಿಂದ ಮಾಡಿದ ಕಾರ್ಯಗಳನ್ನು ಮಾಡಿದ ರೀತಿಯಲ್ಲೆ ಒಪ್ಪಿಕೊಳ್ಳುದ ಹೊದರೆ, ಅವರಲ್ಲಿರುವ ನಿಡುಗಾಲದ ಸ್ನೇಹದಿಂದೇನು ಲಾಭ?
804. ಗೆಳೆತನದ ಸಲಿಗೆಯಿಂದ ಸ್ನೇಹಿತರು ತಮ್ಮನ್ನು ಕೇಳದೆಯೇ ಏನಾದರೊಂದು ಕೆಲಸ ಮಾಡಿದಲ್ಲಿ, ಅದನ್ನು ತಿಳಿದವರು ಸಂತೋಷದಿಂದ ಒಪ್ಪಿಕೊಳ್ಳುವರು.
805. ಸ್ನೇಹಿತರಾದವರು ಮನಸ್ಸು ನೋಯುವಂಥ ಕೆಲಸವೇನಾದರೂ ಮಾಡಿದರೆ, ಅದಕ್ಕೆ ಅಜ್ಞಾನ ಮಾತ್ರವಲ್ಲದೆ, ಕೆಳೆತನದ ಗಾಢವಾದ ಸಲಿಗೆಯೂ ಕಾರಣವೆಂದು ತಿಳಿಯಬೇಕು.
806. ಸ್ನೇಹದ ಎಲ್ಲೆಯನು ಮೀರದೆ ಅದರ ಪರಿಧಿಯಲ್ಲಿ ನಿಂತರು, ಸ್ನೇಹಿತರಿಂದ ಕೇಡುಂಟಾದ ಸಮಯದಲ್ಲಿಯೂ ಅವರ ಗೆಳೆತನವನ್ನು ಬಿಡುವುದಿಲ್ಲ.
807. ಬಹುಕಾಲದ ಗಾಢ ಸ್ನೇಹದಲ್ಲಿ ಬಂದ ಸ್ನೇಹಿತರು, ತಮ್ಮಲ್ಲಿ ಪಳಗಿದವರೇ ತಮಗೆ ನಾಶವನ್ನು ತಂದರೂ ಅವರಲ್ಲಿರುವ ಪ್ರೀತಿಯನ್ನು ತ್ಯಜಿಸುವುದಿಲ್ಲ.
808. ತಮ್ಮ ಸಲಿಗೆಯ ಗೆಳೆಯರ ದೋಷಗಳನ್ನು ಇತರರು ಹೇಳಿದರೂ ಅದನ್ನು ಮನಸ್ಸಿಗೆ ಹಾಕಿಕೊಳ್ಳದೆ ಇರುವವರು, ಸ್ನೇಹಿತರು ತಪ್ಪು ಮಾಡಿದ ದಿನವೇ ಶುಭ ದಿನವೆಂದು ಬಗೆಯುತ್ತಾರೆ.
809. ಗಾಢತ್ವವು ಕೆಡದಂತೆ, ಬಹುಕಾಲದಿಂದ ಬೆಸೆದು ಬಂದ ಗೆಳೆತನದ ಸಂಬಂಧವನ್ನು ಕೈಬಿಡದೆ ಉಳಿಸಿಕೊಂಡು ಬಂದವರನ್ನು ಲೋಕವು ಪ್ರೀತಿಯಿಂದ ಕೊಂಡಾಡುತ್ತದೆ.
810. ತಮ್ಮ ಸಲಿಗೆಯ ಸ್ನೇಹಿತರ ಗಾಢವಾದ ಗೆಳೆತನದಿಂದ ವಿಮುಖರಾಗದವರನ್ನು ಅವರ ಶತ್ರುಗಳೂ ಕೊಂಡಾಡುತ್ತಾರೆ.

ಅಧ್ಯಾಯ 82. ಕೆಟ್ಟ ಸ್ನೇಹ

811. ಪ್ರೀತ್ಯಾಧಿಕ್ಯದಿಂದ ಹೀರಿಕೊಳ್ಳುವಂತೆ ಕಂಡರೂ ದುರ್ಜನರ ಕೆಳೆತನವುವೃದ್ಧಿಯಾಗುವುದಕ್ಕಿಂತ ನಶಿಸಿ ಹೋಗುವುದು ಒಳ್ಳೆಯದು.
812. ತಮಗೆ ಪ್ರಯೋಜನವಿರುವಾಗ ಸ್ನೇಹಮಾಡಿ, ಪ್ರಯೋಜನವಿಲ್ಲದಾಗ ದೂರಮಾಡುವ, ಹೊಂದಿಕೆ ಇಲ್ಲದವರ ಕೆಳೆಯನ್ನು ಹೊಂದಿದ್ದರೇನು?
813. ಬರುವ ಲಾಭದಿಂದ ಅಳೆದು ನೋಡುವ ಸ್ನೇಹಿತರು, ಪಡೆದ ಸೊತ್ತನ್ನು ಸೆಳೆಯುವ ವೇಶ್ಯಯರಿಗೂ, ಕಳ್ಳರಿಗೂ ಸಮಾನರು.
814. ಹೋರಾಟದ ಕಣದಲ್ಲಿ ತಿಳಿಬಿಟ್ಟು ಓಡುವ ಶಿಕ್ಷಣವಿಲ್ಲದ ಕುದುರೆಯಂಥವರ ಗೆಳೆತನಕ್ಕಿಂತಲೂ (ಗೆಳೆತನವೇ ಇಲ್ಲದ) ಏಕಾಂತ ಜೀವನವೇ ಮೇಲು.
815. ಆಪತ್ಕಾಲದಲ್ಲಿ ತಮ್ಮ ರಕ್ಷಣೆಗಾಗಿ ಇಟ್ಟುಕೊಂಡರೂ, ರಕ್ಷಣೆ ಮಾಡದಿರುವ ಕೀಳು ಜನರ ಸ್ನೇಹವನ್ನು ಹೊಂದುವುದಕ್ಕಿಂತಲೂ ಹೊಂದದಿರುವುದೇ ಲೇಸು.
816. ಅರಿವಿಲ್ಲದವರ ಅಧಿಕವಾದ ಸಲಿಗೆಯ ಸ್ನೇಹಕ್ಕಿಂತಲೂ, ಅರಿವುಳ್ಳವರ ನಿರ್ಲಕ್ಷ್ಯ ಮನೋಭಾವವು ಕೋಟಿಪಾಲು ಪ್ರಯೋಜನವನ್ನುಂಟು ಮಾಡುವುದು.
817. ಮನಸ್ಸಿನಲ್ಲಿ ಪ್ರೇಮವಿಲ್ಲದೆ, ನಗಿಸಿ ಕಾಲ ಕಳೆಯುವವರ ಸ್ನೇಹದಲ್ಲಿ ಪಡೆದುಕೊಳ್ಳುವ ಪ್ರಯೋಜನಕ್ಕಿಂತ ಹಗೆಗಳಿಂದ ಬರುವ ಲಾಭ ಹತ್ತು ಕೋಟಿ ಪಾಲು ಮೇಲು.
818. ತಾವು ಮಾಡಬಲ್ಲ ಕೆಲಸವನ್ನ್ನು ಮಾಡಲಾಗದೆ ಕೆಡೀಸುವವರ ಸ್ನೇಹವನ್ನು ಅವರಿಗೆ ತಿಳಿಯದ ಹಾಗೆ ಮೌನವಾಗಿ ಕೈಬಿಡಬೇಕು.
819. ನಡೆ ಬೇರೆ ನುಡಿ ಬೇರೆಯಾಗಿರುವವರ ಸ್ನೇಹವು ಒಬ್ಬನಿಗೆ ಕನಸಿನಲ್ಲಿ ಕೂಡ ದುಃಖವನ್ನು ತರುವುದಾಗುತ್ತದೆ.
820. ಪ್ರತ್ಯೇಕವಾಗಿರುವಾಗ ಅತಿಯಾದ ಒಲವು ತೋರಿ, ಸಭೆಯಲ್ಲಿ ಹಳಿಯುವವರ ಸ್ನೇಹವನ್ನು ಸ್ವಲ್ಪವೂ ಬಯಸದೆ ಕೈಬಿಡಬೇಕು.

ಅಧ್ಯಾಯ 83. ಕೂಡದ ಸ್ನೇಹ

821. ಮನಃಪೂರ್ವಕವಾಗಿ ಅಲ್ಲದೆ ಕೇವಲ ತೋರಿಕೆಗೆ ಹೊಂದಿಕೊಂಡವರ ಸ್ನೇಹವು ಸಮಯ ಬಂದಾಗ ಆಪತ್ತು ತರುವ ಬಲಿಗಲ್ಲಾಗುವುದು.
822. ಸ್ನೇಹಿತರಂತೆ ತೋರಿಸಿಕೊಂಡು, ಸ್ನೇಹಿತರಾಗದಿರುವವರ ಗೆಳೆತನವು, ಹೆಂಗಸರ ಮನಸ್ಸಿನಂತೆ, ಹೊರಗೊಂದು ಒಳಗೊಂದು ಆಗಿರುವುದು.
823. ಹಲವು ಒಳೆಯ ಗ್ರಂಥಗಳನ್ನು ಓದಿಕೊಂಡು ವಿದ್ಯಾವಂತರಾಗಿದ್ದರೂ ಮನಸ್ಸಿನಲ್ಲಿ ಒಳ್ಳೆಯವರಾಗಿರುವುದು, ಅಲ್ಪ ಮನಸ್ಕರಿಗೆ (ಹಗೆಗಳಿಗೆ) ಅಸಾಧ್ಯ.
824. ಕಂಡಾಗ ಮುಖದಲ್ಲಿ ಸ್ನೇಹದ ನಗೆ ಸೂಸುತ್ತ ಹೃದಯದಲ್ಲಿ ಕೆಟ್ಟದ್ದನ್ನು ಎಣಿಸುವ ವಂಚಕರನ್ನು ಕಂಡು ಹೆದರಿ ದೂರವಿರಬೇಕು.
825. ತಮ್ಮೊಡನೆ ಮನಸ್ಸಿನಲ್ಲಿ ಹೊಂದಾಣಿಕೆ ಇಲ್ಲದವರ ಯಾವೊಂದು ಮಾತಿನಲ್ಲೂ ವಿಶ್ವಾಸವಿಡಕೂಡದು.
826. ಹಗೆಗಳ ಮಾತು, ಸ್ನೇಹಿತರ ಮಾತಿನಂತೆ ಒಳ್ಳೆಯುದನ್ನೇ ಹೇಳಿದರೂ ಅದರಲ್ಲಿರುವ ಕೇಡಿನ ದನಿ, ಕೂಡಲೇ ಬಯಲಾಗುತ್ತದೆ.
827. ಬಿಲ್ಲಿನ ಡೊಂಕು ಅಥವಾ ಬಾಗುವಿಕೆಯು ಇನ್ನೊಬ್ಬರ ಪ್ರಾಣವನ್ನು ತೆಗೆಯುವುದರಿಂದ ಕೆಟ್ಟದ್ದನೇ ಸೂಚಿಸುವುದು; ಅದರಂತೆ, ಒಲ್ಲದವರ ಮಾತಿನ ವೆನಯ (ಡೊಂಕು) ಕೂಡ; ಅದನ್ನ್ಯ್ ಸ್ವೀಕರಿಸಬಾರದು.
828. (ಹಗೆಗಳು) ಕೈಮುಗಿದು ನಮಸ್ಕರಿಸುವಾಗಲೂ ಕೈಯೊಳಗೆ ಆಯುಧವನ್ನು ಅಡಗಿಸಿಟ್ಟುಕೊಂಡಿರುತ್ತಾರೆ; ಅವರು ಅತ್ತು ಸುರಿಸುವ ಕಾಣ್ಣೀರು ಕೂಡ ಅದೇ ಬಗೆಯದು (ವಂಚನೆಯಿಂದ ಕೂಡಿದುದು)
829. ಹೊರಗೆ ಮಿಗಿಲಾದ ಸ್ನೇಹವನ್ನು ತೋರಿಸುತ್ತ ಒಳಗೊಳಗೇ ತಮ್ಮನ್ನು ನಿಂದಿಸುವ ಹಗೆಗಳೊಡನೆ, ಅರಸನಾದವನು ತಾನೂ ಸ್ನೇಹವನ್ನು ಪ್ರಕಟಿಸಿ, ಒಳಗೇ ಸ್ನೇಹವು ನಶಿಸುವಂತೆ ವರ್ತಿಸಬೇಕು.
830. ಹಗೆಗಳು ಸ್ನೇಹಿತರಾಗುವ ಕಾಲ ಬಂದಾಗ, ಅರಸನು ಮುಖದಲ್ಲಿ ಸ್ನೇಹವನ್ನು ಪ್ರಕಟಿಸಿ, ಮನಸ್ಸಿನಲ್ಲಿ ಸ್ನೇಹವನ್ನು ತೊಡೆದು ಹಾಕಬೇಕು. ಸ್ವಲ್ಪ ಕಾಲದ ನಂತರ ಬಹಿರಂಗವಾಗಿಯೂ ಸ್ನೇಹವನ್ನು ಕೈಬಿಡಬೇಕು.

ಅಧ್ಯಾಯ 84. ದಡ್ಡತನ

831. ತನಗೆ ಕೆಡುಕಾದುದನ್ನು ಕೈಗೊಂಡು ತನಗೆ ಪ್ರಯೋಜನ ತರುವುದನ್ನು ಕೈಬಿಡುವುದೇ ದಡ್ಡತನ ಎನಿಸಿಕೊಳ್ಳುವುದು.
832. ತನ್ನ ನಡತಗೆ ಒಗ್ಗದ ಕೆಲಸಗಳನ್ನು ಬಯಸಿ ಕೈಗೊಳ್ಳುವುದು ದಡ್ಡತನದ ಪರಮಾವಧಿಯೆನಿಸುವುದು.
833. ಲಜ್ಜೆಗೇಡಿತನ, ಗೊತ್ತುಗುರಿ ಇಲ್ಲದಿರುವಿಕೆ, ಪ್ರೇಮಶೂನ್ಯತೆ, ಯಾವ ವಿಷಯದಲ್ಲೂ ಆಸಕ್ತಿ ಇಲ್ಲದಿರುವಿಕೆ- ಇವು ದಡ್ಡತನದ ಲಕ್ಷಣಗಳು.
834. ಹಲವು ಗ್ರಂಥಗಳನ್ನು ಓದಿ, ಗ್ರಹಿಸಿ, ಇತರರಿಗೆ ಅದನ್ನು ಬೋಧಿಸಿಯೂ ತಾನು ಮಾತ್ರ ತ್ರಿಕರಣ ಶುದ್ಧಿಯಿಂದ ದಡ್ಡನಿಗಿಂತ ಮಿಗಿಲಾದ ದಡ್ಡ ಬೇರಿಲ್ಲ.
835. ದಡ್ಡನಾದವನು ಏಳು ಜನ್ಮದಲ್ಲಿ ಉಂಟಾಗುವ ದುಃಖ, ನರಕ ಯಾತನೆಗಳನ್ನು ಒಂದೇ ಜನ್ಮದಲ್ಲಿ ತನಗುಂಟಾಗುವಂತೆ ಮಾಡಿಕೊಳ್ಳಬಲ್ಲನು.
836. ಕೆಲಸದ ವಿಧಾನವನ್ನು ಅರಿಯದ ದಡ್ಡನು ಒಂದು ಕೆಲಸವನ್ನು ಕೈಗೊಂಡರೆ, ಕೆಲಸವು ನಿಷ್ಫಲವಾಗುವುದು ಮಾತ್ರವಲ್ಲ, ಕೆಲಸದಿಂದ ಅವನು "ತಪ್ಪಿತಸ್ಥ" ನೆನಿಸಿ ಬೇಡಿ ತೊಡಿಸಿಕೊಳ್ಳುವನು.
837. ದಡ್ಡನಾದವನು ಹೇರಳವಾದ ಸಿರಿಯನ್ನು ಸಂಪಾದಿಸಿದಾಗ, ಅಪರಚಿತರು ಅದರ ಲಾಭ ಪಡೆದುಕೊಳ್ಳುವರು; ಹತ್ತಿರದ ಸಂಬಂಧಿಗಳು ಹಸಿವಿನಲ್ಲಿ ಬೀಳುವರು.
838. ದಡ್ಡನ ಕೈಯಲ್ಲಿರುವ ಒಡವೆಯೆಂಬುದು ಹುಚ್ಚನೊಬ್ಬನ ಕೈಯಲ್ಲಿ ಸಿಕ್ಕಿದ ಕಳ್ಳಿನಂತೆ.
839. ದಡ್ಡರೊಂದಿಗೆ ಮಾಡುವ ಗೆಳೆತನವು ಅತಿ ಮಧುರವಾಗಿರುತ್ತದೆ; ಏಕೆಂದರೆ ಅಗಲಿಕೆಯ ಸಮಯದಲ್ಲಿ ಯಾವೊಂದು ದುಃಖವನ್ನು ಅದು ಉಂಟು ಮಾಡುವುದಿಲ್ಲ.
840. ಬಲ್ಲವರ ಸಭೆಯಲ್ಲಿ ದಡ್ಡನಾದವನು ಹೊಗುವುದು, ಅಶುದ್ಧವಾದ ಕಾಲನ್ನು ತೊಳೆಯದೆ (ಮಲಗಲು) ಹಾಸಿಗೆಯ ಕಾಲಿಟ್ಟಂತೆ.

ಅಧ್ಯಾಯ 85. ಅರಿವುಗೇಡಿತನ

841. ಅರಿವುಗೇಡಿತನವು ದಾರಿದ್ರ್ಯದೊಳಗೇ ಅತಿ ಕ್ರೂರವಾದುದು; ಮತ್ತಿತರ ಸಿರಿ ಮೊದಲಾದವುಗಳ ದಾರಿದ್ರ್ಯವನ್ನು ಲೋಕವು (ಅಷ್ಟಾಗಿ) ಗಣನೆಗೆ ತೆಗೆದುಕೊಳ್ಳುವುದಿಲ್ಲ.
842. ಅರಿವುಗೇಡಿಯು ಮನಃಪೂರ್ವಕವಾಗಿ ಒಂದು ವಸ್ತುವನ್ನು ಯಾರಿಗಾದರೂ ಕೊಟ್ಟರೆ, ಅದು ಅವನ ಒಳ್ಳೆಯ ಗುಣವನ್ನು ಸಾರುವುದಕ್ಕಿಂತ ಪಡೆಯುವವನ ಸತ್ಕರ್ಮವನ್ನು ಸಾರುವುದು.
843. ಅರಿವುಗೇಡಿಗಳುತಮಗೆ ತಾವೇ ತಂದೊಡ್ಡಿಕೊಳ್ಳುವ ಸಂಕಟ ಪರಿಸ್ಥಿತಿಯನ್ನು ಅವರ ಶತ್ರುಗಳೂ ಉಂಟುಮಾಡುವುದು ಅಸಾಧ್ಯ.
844. ಅರಿವುಗೇಡಿತನ ಯಾವುದೆಂದರೆ, ನಾನು "ಜ್ಞಾನಿ" ಎಂದು ಹೇಳಿಕೊಳ್ಳುವ ಅಹಂಕಾರವೇ.
845. ಮೂರ್ಖರು ತಾವು ಓದದಿರುವುದನ್ನು ಗ್ರಂಥಗಳನ್ನು ಓದಿರುವಂತೆ ನಟಸುವುದರಿಂದ ಅವರು ಓದಿರುವ ವಿಷಯಗಳಲ್ಲಿ ಕೂಡ ಇತರರಿಗೆ ಸಂಶಯ ಬರಲು ಕಾರಣವಾಗುತ್ತದೆ.
846. ತಮ್ಮ ದೋಷಗಳನ್ನು ತಿಳಿದು ಅವುಗಳನ್ನು ಮರೆಸಲು ಯತ್ನಿಸದಿದ್ದರೆ ತಮ್ಮ ಮಾನವನ್ನು ಬಟ್ಟೆಗಳಿಂದ ಮರೆಮಾಚುವುದು ಅರಿವುಗೇಡಿತನವಾಗುತ್ತದೆ.
847. ಬಹು ಮುಖ್ಯವಾದ ಉಪದೇಶವನ್ನು ವಿಷಯವನ್ನು ಕಾಪಾಡಿಕೊಳ್ಳಲಾರದೆ ನಿರ್ಲಕ್ಷ್ಯ ಮಾಡುವ ಅರಿವಿಲ್ಲದವನು, ತಾನೇ ತನಗೆ ದೊಡ್ಡ ಕುತ್ತನ್ನು ತಂದುಕೊಳ್ಳುತ್ತಾನೆ.
848. ಅರಿವುಗೇಡಿಯು ತಿಳಿದವರು ಒಳ್ಳೆಯದನ್ನು ಹೇಳಿದರೂ ಪಾಲಿಸನು; ತಾನೂ ಅದನ್ನು ಅರಿತುಕೊಳ್ಳಲಾರನು; ಇಂಥವನ ಬದುಕು ಸಾಯುವವರೆಗೂ ಒಂದು ಕುತ್ತಾಗಿ ಪರಿಣಮಿಸುವುದು.
849. ಅರಿವುಗೇಡಿಗೆ, ಅರಿವು ಮೂಡಿಸಲು ಹೋಗುವವನು ಕೊನೆಯಲ್ಲಿ ತಾನೇ ಬುದ್ಧಿಗೇಡಿಯಾಗಿ ಬಿಡುವನು; ಅರಿವಿಲ್ಲದವನು ತಾನು ಕಂಡ ರೀತಿಯಲ್ಲಿ ತಿಳಿದವನ ಹಾಗೆ ತೋರ್ಪಡಿಸಿಕೊಳ್ಳುವನು.
850. ಲೋಕದಲ್ಲಿ ಬಲ್ಲ ಹಿರಿಯ ಅನುಭವಿಗಳು ಇದೆ ಎನ್ನುವುದನ್ನು ಇಲ್ಲ ಎಂದು ಹೇಳುವವನು, ಭೂಮಿಯ ಮೇಲೆ ಸುಳಿದಾಡುವ ಪಿಶಾಚಿಕೆ ಸಮಾನ ಎಂದು ಭಾವಿಸಬೇಕು.

ಅಧ್ಯಾಯ 86. ಹಗೆತನ

851. (ಲೋಕದಲ್ಲಿರುವ) ಜೀವಿಗಳು ಪರಸ್ಪರ ಹೊಂದಿಕೊಳ್ಳದಂತೆ ಬೇರ್ಪಡಿಸುವ ಕೆಟ್ಟ ಜಾಡ್ಯವೇ ಹಗೆತನವೆಂದು (ತಿಳಿದವರು) ಹೇಳುವರು.
852. ಒಬ್ಬನು ತನಗೆ ಆಗದವರ ಸಬಂಧದಲ್ಲಿ ಅಗಲಿಕೆಯನ್ನು ಬಯಸಿ ಅಹಿತವನ್ನು ಉಂಟು ಮಾಡಿದರೂ, ಅವರಲ್ಲಿ ಹಗೆತನ ಬೆಳೆಸಿ ಕೇಡುಂಟು ಮಾಡದಿರುವುದೇ ಮೇಲು.
853. ಹಗೆಯನವೆನ್ನುವ ದುಃಖಕರವಾದ ನೋವನ್ನು ಒಬ್ಬನು ನೀಗಿದಲ್ಲಿ, ಅಳಿವಿಲ್ಲದ ನೆಲೆಯಾದ ಕೀರ್ತಿಯನ್ನು ಪಡೆಯುವನು.
854. ಹಗೆತನವೆನ್ನುವ ಅತಿ ಸಂಕಟಕರವಾದ ದುಃಖವನ್ನು ತೊಡೆದು ಹಾಕುವುದರಿಂದ, ಸುಖ ಪ್ರಾಪ್ತಿಯಲ್ಲೀ ಮಿಗಿಲಾದ ಶಾಶ್ವತ  ಆನಂದವು ಲಭಿಸುತ್ತದೆ.
855. ಮನದಲ್ಲಿ ತೋರುವ ಹಗೆ ತನಕ್ಕೆ ಎಡೆಕೊಡದೆ. ಅದರೆದುರು ನಾಚಿ ತಲೆತಗ್ಗಿಸಿ ನಡೆಯುವವರನ್ನು ಗೆಲ್ಲಬೇಕೆಂಬ ಅಭಿಲಾಶೆಯುಳ್ಳವರಾದರೂ ಯಾರಿದ್ದರೆ?
856. ಹಗೆತನವನ್ನು ಸಾಧಿಸುವುದರಿಂದ ಸಂತೋಷವಿದೆ ಎಂದು ತಿಳಿಯುವವನ ಬಾಳುವೆಯು ಅತಿ ಶೀಘ್ರದಲ್ಲಿಯೇ ಸೋಲನ್ನು ಅಳಿವನ್ನು ಪಡೆಯುವುದು.
857. ಹಗೆತನವನ್ನೇ ಬಯಸುವ ಕೆಟ್ಟ ಅರಿವುಳ್ಳವರು, ಜಯ ಸಾಧಕವಾದ ಸತ್ಯವನ್ನು ಕಾಣಲಾರರು.
858. ಮನದಲ್ಲಿ ತೋರುವ ಹಗೆತನಕ್ಕೆ ನಾಚಿ, ಅದರೆದುರು ತಲೆತಗ್ಗಿಸಿ ನಡೆದರೆ ಅದೇ ಐಶ್ವರ್ಯ; ಹಗೆತನವನ್ನು ಬಯಸಿ ಕೈಕೊಂಡರೆ ಅದೇ ಕೇಡಿಗೆ ಕಾರಣ.
859. (ಒಬ್ಬನಿಗೆ) ಐಶ್ವರ್ಯವು ಬರುವಾಗ, ಹಗೆತನವನ್ನು ಕಾಣಲಾರನು (ಎಣಿಸುವುದಿಲ್ಲ). ಆದರೆ, ತನಗೆ ಕೇಡು ಬರುವ ಕಾಲದಲ್ಲಿ ಹಗೆತನವನ್ನು ವೃದ್ಧಿಪಡಿಸಿಕೊಳ್ಳುತ್ತಾನೆ.
860. ಒಬ್ಬನಿಗೆ ಹಗೆತನದಿಂದ ದುಃಖವನ್ನು ತರುವ ಕೇಡುಗಳೆಲ್ಲವೂ ಉಂಟಾಗುತ್ತದೆ. ಆದರೆ ಮನವರಳಿಸುವ ಪ್ರೀತಿಯಿಂದ ಸದ್ಭಾವನೆಯೆಂಬ ಹಿರಿಮೆಯುಂಟಾಗುತ್ತದೆ.

ಅದ್ಗ್ಯಾಯ 87. ಹಗೆತನದ ಹಿರಿಮೆ.

861. ತಮಗಿಂತ ಬಲಿಷ್ಠರಾದವರ ಮೇಲೆ ಎದುರಿಸಿ ಹೋಗುವುದನ್ನು ತಪ್ಪಿಸಿಕೊಳ್ಳಬೇಕು; ಬಲಹೀನರಾದವರ ಮೇಲೆ ಹಗೆತನವನ್ನು ಬಿಡದೆ ಸಾಧಿಸಬೇಕು.
862. (ಬಂಧು ಮಿತ್ರರ) ಪ್ರೀತಿ ಗಳಿಸದಿರುವವನು, ಬಲಿಷ್ಠವಾದ ನೆರವಿಲ್ಲದವನು, ತಾನೂ ಬಲಹೀನನಾಗಿರುವವನು, ಶತ್ರುವಿನ ಬಲವನ್ನು ಹೇಗೆ ಎದುರಿಸಬಲ್ಲನು?
863. ಒಬ್ಬನು ಅಂಜುಬುರುಕನಾಗಿ, ತಿಳಿವಳಿಕೆ ಇಲ್ಲದವನಾಗಿ, ಹೊಂದಿಕೊಂಡು ಹೋಗುವ ಗುಣವಿಲ್ಲದವನಾಗಿ, ಕೊಡುವ ಧಾರಾಳತೆ ಇಲ್ಲದವನಾಗಿದ್ದರೆ, ಅವನು ಹಗೆಗಳಿಗೆ ಸುಲಭನೂ ಸದರನೂ ಎನಿಸಿಕೊಳ್ಳುತ್ತಾನೆ.
864. ಕೋಪವನ್ನು ನೀಗದವನು, ತುಂಬಿದ ಗುಣವಿಲ್ಲದವನು ಅಂದರೆ ರಹಸ್ಯಗಳನ್ನು ಕಾಪಾಡಿಕೊಳ್ಳದವನು ಯಾವ ಕಾಲದಲ್ಲೂ ಯಾವೆಡೆಯಲ್ಲೂ ಯಾರಿಗಾದರೂ ಸದರವೆನಿಸಿಕೊಳ್ಳುವನು.
865. ನೀತಿ ಗ್ರಂಥಗಳಲ್ಲಿರುವ ಒಳ್ಳೆಯ ಮಾರ್ಗವನ್ನು ಕಾಣದವನು, ಸೂಕ್ತವಾದುದನ್ನು ಮಾಡದಿರುವವನು, ತನಗೆ ಬಂದ ನಿಂದೆಯನ್ನು ಲೆಕ್ಕಕ್ಕೆ ತರದವನು, ಸದ್ಗುಣಗಳಿಲ್ಲದವನು, ಹಗೆಗಳಿಗೆ (ಸದರವೆನಿಸಿ) ಸಂತೋಷವನ್ನುಂಟು ಮಾಡುವನು.
866. ನಿಜವರಿಯದೆ ಕೋಪ ತಾಳುವವನ, ಅತಿಯಾದ ಕಾಮ (ಆಶೆ) ವುಳ್ಲವನ ಹಗೆತನವನ್ನು, (ಹಗೆಗಳಾದವರು) ಬಯಸಿ ಸ್ವಾಗತಿಸುತ್ತಾರೆ.
867. ಒಂದು ಕೆಲಸದಲ್ಲಿ ತೊಡಗಿ ಅದನ್ನು ವಿರುದ್ಧವಾದ ದಿಕ್ಕಿನಲ್ಲಿ ಮುಗಿಸುವವನ ಹಗೆತನವನ್ನು ಹಣ ಕೊಟ್ಟಾದರೂ ಕೊಂಡುಕೊಳ್ಳಬೇಕು.
868. ಒಬ್ಬನು ಗುಣವಿಲ್ಲದವನಾಗಿ, ಅವನಲ್ಲಿ ಹಲವಾರು ದೋಷಗಳು ಇದ್ದರೆ ಅವನಿಗೆ ಕೆಳೆಯೇ ಇಲ್ಲವಾಗುವುದು. (ಅದರಿಂದ) ಅವನ ಹಗೆಗಳಿಗೆ ಸಂತೋಷವಾಗುವುದು.
869. ನ್ಯಾಯದ ತಿಳುವಳಿಕೆ ಇಲ್ಲದವರೂ, ಅಂಜುಕುಳಿ ಸ್ವಭಾವದವರೂ ಆದ ಹಗೆಗಳನ್ನು ಪಡೆದರೆ, ಅವರನ್ನು ಎದುರಿಸುವವರ ಸಂತೋಷಕ್ಕೆ ಕೋನೆಯೇ ಇಲ್ಲವಾಗುವುದು.
870. ಕಲಿಯದ ಅಜ್ಞಾನಿಯ ಹಗೆತನವನ್ನು ಸಾಧಿಸುವುದರಿಂದ ಬರುವ ಸುಲಭ ಸಂಪತ್ತನ್ನು ಬಯಸದಿರುವವನನ್ನು ಎಂದೂ ಕೀರ್ತಿಯೆಂಬ ಬೆಳಕು ಬಂದು ಸೇರುವುದಿಲ್ಲ.

ಅಧ್ಯಾಯ 88. ಹಗೆಯ ರೀತಿಯನರಿವುದು

871. ಹಗೆ ಎನ್ನುವ ಕೇಡಿನ ಸ್ವಭಾವವನ್ನು ಒಬ್ಬನು ಸಕ್ಕು ಹೊತ್ತು ಕಳೆಯುವ ಆಟವೆಂದು ಬಗೆಯಲಾಗದು.
872. ಬಿಲ್ಲನ್ನೇ ನೇಗಿಲಾಗಿ ಉಳುವವರ (ಯೋಧರ) ಹಗೆಯನ್ನು ಪಡೆದುಕೊಂಡರೂ, ಮಾತನ್ನೇ ನೇಗಿಲಾಗಿ ಉಳುವವರ (ಬುದ್ಧಿಮತಿಗಳ)ಹಗೆಯನ್ನು ಕೊಳ್ಳಬಾರದು.
873. ತಾನುಏಕಾಕಿಯಾಗಿದ್ದು ಹಲವು ಜನರ ಹಗೆತನವೆನ್ನೇ ಸಂಪಾದಿಸಿಕೊಳ್ಳುವವನು ಹುಚ್ಚರಿಗಿಂತ ಮಿಗಿಲಾದ ಅರಿವುಗೇಡಿಯಾಗುವನು.
874. ಹಗೆತನವನ್ನು ಸ್ನೇಹವಾಗಿ ಪರಿವರ್ತಿಸಿಕೊಂಡು ನಡೆದುಕೊಳ್ಳುವ ಗುಣವುಳ್ಳ ಅರಸನ ಹಿರಿಮೆಯೊಳಗೆ ಇಡೀ ಲೋಕವೇ ತಂಗಿರುತ್ತದೆ.
875. ತನಗೆ ಬೆಂಬಲವಾಗುವ ಸಹಾಯಕರೊಬ್ಬರು ಇಲ್ಲದೆ, ಹಗೆಯೂ ಎರಡು ಕಡೆಯಲ್ಲಿದ್ದು ತಾನು ಒಭ್ಭನೇ ಆಗಿರುವಾಗ, ಎರಡು ಹಗೆಗಳಲ್ಲಿ ಒಂದನ್ನು ತನ್ನ ಹಿತವನ್ನು ಬಯಸುವ ಬೆಂಬಲವಾಗಿ ಪಡೆದುಕೊಳ್ಳಬೇಕು.
876. ಹಗೆಯಾದವನನ್ನು ಮೊದಲು ಬಲಪರೀಕ್ಷೆ ಮಾಡಿ ತಿಳಿಯದಿದ್ದರೂ, ತನಗೆ ಆಪತ್ತು ಬಂದ ಕಾಲದಲ್ಲಿ ಅವನ ಸ್ನೇಹವನ್ನೂ ಗಳಿಸದೆ ಹಗೆತನವನ್ನೂ ಸಾಧಿಸದೆ ಮಧ್ಯವರ್ತಿಯಾಗಿರಬೇಕು.
877. ನೋವನ್ನು ಅರಿಯದ ಸ್ನೇಹಿತರಲ್ಲಿ ತಮ್ಮ ನೋವನ್ನು ತಾವಾಗಿಯೇ ಹೇಳಿಕೊಳ್ಳಬಾರದು; ಹಗೆಗಳ ಬಳಿ ತಮ್ಮ ದೌರ್ಬಲ್ಯವನ್ನು ವ್ಯಕ್ತಪಡಿಸಬಾರದು.
878. ಕೆಲಸ ಮಾಡುವ ರೀತಿಯನ್ನುರಿತು, ತನ್ನನ್ನು ಬಲಪಡಿಸಿಕೊಂಡು, ರಕ್ಷಿಸಿ ಕೊಂಡಲ್ಲಿ, ಹಗೆಗಳಲ್ಲುಂಟಾದ ಗರ್ವವು ತಾನಾಗಿಯೇ ನಾಶವಾಗುತ್ತದೆ.
879. ಮುಳ್ಳಿನ ಮರವನ್ನುಎಳೆಯದಾಗಿರುವಾಗಲೆ ಕತ್ತರಿಸಿ ಹಾಕಬೇಕು; ಅದು ಬಲವಾಗಿ ಬೆಳೆದ ನಂತರ, ಕಡಿಯಲು ಹೋದವರ ಕೈಯನ್ನೇ ಕತ್ತರಿಸುತ್ತದೆ.
880. ಹಗೆಗಳ ಸೊಕ್ಕನ್ನು ಮುರಿಯಲಾರದ ಅರಸರು ಉಸಿರಾಡಿಕೊಂಡಿರಲೂ ಕೂಡ ಅಸಮರ್ಥರು.

No comments:

Post a Comment