Sunday 1 August 2010

ತಿರುಕ್ಕುಱಳ್: ಅಧ್ಯಾಯ 109-118



Thirukkural in Kannada
ತಿರುಕ್ಕುಱಳ್ (ಹೊಸಗನ್ನಡ ಅನುವಾದಗಳೊಂದಿಗೆ)



ಕಾಮ ವಿಭಾಗ: ಅಧ್ಯಾಯ: 109-118

ಆಧ್ಯಾಯ 109. ಕಾಮಿನಿಯ ಸೌಂದರ್ಯಬಾಧೆ


1081.     (ಇವಳು) ದೇವಕನ್ನಿಕೆಯೋ, ಆಯ್ದುತಂದ ವಿಶಿಷ್ಟವಾದ ನವಿಲೋ, ದಟ್ಟವಾದ ಕೇಶ ರಾಶಿಯಿಂದ ಅಲಂಕರಿಸಲ್ಪಟ್ಟ ಮಾನವ ಸ್ತ್ರೀಯೋ, (ಎಂದು) ನನ್ನ ಹೃದಯವು ಭ್ರಮಿತವಾಗಿದೆ.
1082.     ಸೌಂದರ್ಯದ ರಾಶಿಯಾದ ಈ ಹೆಣ್ಣು ನನ್ನ ನೋಟಕ್ಕೆ ಪ್ರತಿಯಾಗಿ ಬೀರಿದ ನೋಟವು-ದೇವಕನ್ನಿಕೆಯು ಆಕ್ರಮಣ ನಡೆಸಲು ತಾನೇ ಸೈನ್ಯದೊಂದಿಗೆ ಎದುರಾಗುತ್ತಿರುವಂತೆ ತೋರುತ್ತಿದೆ.
1083.     ಈ ಹಿಂದೆ ಕಾಲನನ್ನು ಕಣ್ಣು ಅರಿಯೆನು. ಈಗ ಕಂಡು ಅರಿತೆನು; ಅದು ಹೆಣ್ತನದ ಸಹಾಯದಿಂದ ಹೋರಾಟ ನಡೆಸುವ ಕಣ್ಣುಳ್ಳದು ಎಂದು.
1084.     ಹೆಣ್ಣಿಗೆ ಸಹಜವಾದ ಗುಣದಿಂದ ಶೋಭಿಸುವ ಈ ಬಾಲೆಯ ಕಣ್ಣುಗಳು ತಮ್ಮನ್ನು ಕಂಡವರ ಪ್ರಾಣವನ್ನೇ ಹೀರುವಂತೆ ಹೋರಾಟ ನಡೆಸುತ್ತಿವೆ.
1085.     ಕಾಲನೋ, ಕಣ್ಣೋ, ಹರಿಣಿಯೋ?- ಈ ಎಳೆಯ ಹೆಣ್ಣಿನ ನೋಟದಲ್ಲಿ ಈ ಮೂರು ಭಾವಗಳೂ ತುಂಬಿಕೊಂಡಿವೆ.
1086.     ಈ ಎಳೆವೆಣ್ಣಿನ ಕೊಂಕಿ ಬಾಗಿದ ಹುಬ್ಬುಗಳು, ಕೊಂಕದೆ ಅವಳ ಕಣ್ಣುಗಳನ್ನು, ತನ್ನ ಮರೆಯಲ್ಲಿ ಅಡಗಿಸಿಕೊಂಡರೆ, ಅವು ನನಗೆ ನಡುಕ ಹುಟ್ಟಿಸುವಂಥ ವೇದನೆಗೆ ಗುರಿ ಮಾಡಲಾರವು.
1087.     ಈ ಎಳೆವೆಣ್ಣಿನ ನಿಮಿರಿನಿಂತ ಕಠಿಣ ಕುಚಗಳ ಮೇಲೆ ಮರೆಮಾಡಿದ ವಸ್ತ್ರವು ಮದಿಸಿದಾನೆಯ ಮೇಲೆ ಹೊದೆಸಿದ ಮುಖ ವಸ್ತ್ರವನ್ನು ಹೋಲುತ್ತಿದೆ.
1088.     ಯುದ್ದ ಕಣದಲ್ಲಿ ಎದುರಾಳಿಗಳು ಕೇಳಿ ಭಯ ಪಡುವಂಥ ನನ್ನ ಪರಾಕ್ರಮವು, ಇವಳ ಪ್ರಕಾಶಮಾನ ಕಣ್ಣುಗಳ ದಾಳಿಯಿಂದ ಸೋಲನ್ನು ಅನುಭವಿಸುತ್ತಿದೆಯಲ್ಲ!
1089.     ಹರಿಣವನ್ನು ಹೋಲುವ ಕಣ್ಣೋಟವೂ ಲಜ್ಜೆಯೂ ಉಳ್ಳ ಇವಳಿಗೆ (ಈ ಎಳೆವೆಣ್ಣಿಗೆ) ಇತರ ಆಭರಣಗಳಿಂದ ಲಂಕರಿಸಲೇಕೆ?
1090.     ಮದ್ಯವು ತನ್ನನ್ನು ರುಚಿ ನೋಡಿದವರಿಗಲ್ಲದೆ ಕಾಮದಂತೆ ಕಂಡವರಿಗೆಲ್ಲ ಮಾದಕತೆಯನ್ನು ತರುವುದಿಲ್ಲ.

ಅಧ್ಯಾಯ 110. ಸಂಕೇತ ಪರಿಜ್ಞಾನ

1091.     ಇವಳ (ಈ ಎಳೆವೆಣ್ಣಿನ) ಕಪ್ಪು ಹಚ್ಚಿದ ಕಣ್ಣುಗಳಲ್ಲಿ ಎರಡು ಬಗೆಯಾದ ನೋಟವಿದೆ. ಒಂದು ಯಾತನೆಯುಂಟು ಮಾಡಿದರೆ ಮತ್ತೊಂದು ಯಾತನೆಯನ್ನು ಪರಿಹರಿಸುವುದು
1092.     ತನ್ನ ಕಣ್ಣುಗಳಿಂದಲೇ ನನ್ನನ್ನು ಅಪಹರಿಸಿರುವ ಈ ಎಳೆವೆಣ್ಣಿನ ಕಿರು ನೋಟವು, ಸಂಭೋಗ ಸುಖದಲ್ಲಿ ಕೇವಲ ಅರ್ಧಭಾಗಮಾತ್ರವಲ್ಲ ಅದಕ್ಕಿಂತ ಅಧಿಕ ಸುಖವನ್ನು ನೀಡುವುದು.
1093.     ನನ್ನನ್ನು ನೋಡಿದಳು; ನೋಡಿ ನಾಚಿ ತಲೆ ತಗ್ಗಿಸಿದಳು; ಅದು ಅವಳು ಪೋಷಿಸುವ ಪ್ರೇಮಲತೆಗೆ ಸುರಿದ ನೀರಿನಂತೆ.
1094.     ನಾನು ನೋಡುವಾಗ ಅವಳು ನೆಲವನ್ನು ನೋಡುವಳು; ನಾನು ನೋಡದಿರುವಾಗ (ನನ್ನನ್ನು) ನೋಡಿ ಕುಡಿನಗೆ ಸೂಸುವಳು.
1095.     ನನ್ನನ್ನು ನೇರವಾಗಿ ನೋಡದಿರುವುದು ಮಾತ್ರವಲ್ಲದೆ, ಒಂದು ಕಣ್ಣನ್ನು ಅರೆ ಮುಚ್ಚಿದ ಹಾಗೆ ಮಾಡಿ, ಕಡೆಗಣ್ಣ ನೋಟದಿಂದ ನೋಡಿ ನಗುವಳು.
1096.     ಹೊರ ನೋಟಕ್ಕೆ ಅವರು ಅಪರಿಚಿತರಂತೆ (ಕುಪಿತ) ಸಂಭಾಷಣೆ ನಡೆಸಿದರೂ, ಅದು ನಿಜವಾಗಿ ವೈರವಿಲ್ಲದ ಪ್ರಣಯ ಸಲ್ಲಾಪ ಎಂಬುದು ಒಡನೆಯೇ ತಿಳಿಯುವುದು.
1097.     ಹೊರ ನೋಟಕ್ಕೆ ಅಪರಿಚಿತರ ರೀತಿಯಲ್ಲಿ ಆಡುವ ಕಠಿಣ ಮಾತುಗಳೂ ಹಗೆಗಳಂತೆ ಕಾಣುವ ನೋಟವೂ ಪ್ರಣಯಿಗಳ ಅಂತರಂಗವನ್ನು  ಕುರಿತ  ಸಂಕೇತವೇ ಆಗುವುದು.
1098.     ನಾನು ನೋಡುವಾಗ (ಅವಳು) ಪ್ರೇಮಾರ್ದ್ರಳಾಗಿ ಮೈದು ನಗೆ ಸೂಸುವಳು; ಲತಾಂಗಿಯಾದ ಅವಳಲ್ಲಿ ಆಗ ಒಂದು ಬಗೆಯ ಚೆಲುವು ಅರಳುವುದು.
1099.     ಅಪರಿಚಿತರಂತೆ ಸಾಮಾನ್ಯ ನೋಟದಿಂದ ನೋಡುವುದು ಪ್ರಣಯಿಗಳಲ್ಲಿ ಸಾಮಾನ್ಯ.
1100.     ಕಣ್ಣೊಡನೆ ಕಣ್ಣುಗಳು ಒಂದಾಗಿ ಕೂಡಿ ಒಲವು ಸಂಭಾಷಣೆ ನಡೆಸಿದಲ್ಲಿ ಬರಿಯ ಬಾಯಿ ಮಾತುಗಳಿಂದ ಯಾವ ಪ್ರಯೋಜನವೂ ಇರುವುದಿಲ್ಲ.

ಅಧ್ಯಾಯ 111. ಆಲಿಂಗನ ಸುಖ

1101.     ನೋಡುವುದು ಕೇಳುವುದು ರುಚಿ ನೋಡುವುದು, ವಾಸನೆಯನುಭವಿಸುವುದು, ಮುಟ್ಟಿ ನೋಡುವುದು ಸ್ಪರ್ಷ ಈ ಐಂದಿಂದ್ರಿಯಗಳ ಸುಖವೂ ಈ ಮಿನುಗುವ ಬಳೆಗಳ ಚೆಲುವೆಯಲ್ಲಿ ಇವೆ.
1102.     ಸಾಮಾನ್ಯವಾಗಿ ನೋವುಗಳಿಗೆ ದ್ದು ಬೇರೆ ಬಗೆಯಾದವು. ಆದರೆ ಒಡವೆಗಳಿಂದ ಅಲಂಕೃತಳಾದ ಈ ಚೆಲುವೆಯಾದರೋ ತನ್ನಿಂದ ಉಂಟಾದ ನೋವಿಗೆ ತಾನೇ ಮದ್ದಾಗಿ ಉಪಶಮನ ಮಾಡುವಳು.
1103.     ತಾವರೆಗಣ್ಣಿನ ವಿಷ್ಣುವಿನ ಲೋಕವು ತಾವು ಒಲಿದ ಎಳೆವೆಣ್ಣಿನ ಮೃದು ತೋಳ್ಗಳ ತೆಕ್ಕೆಯಲ್ಲಿನ ನಿದ್ದೆಯ ಸುಖಕ್ಕಿಂತ ಇನಿದಾದುದೆ?
1104.     ಅಗಲಿದರೆ ಸುಡುವುದು, ಸಮೀಪಿಸಿದರೆ ತಂಪೆರೆವುದು ಎನ್ನುವ ಈ ಕಿಚ್ಚನ್ನು ಎಲ್ಲಿಂದ ಪಡೆದಳೋ ಈ ಎಳೆವೆಣ್ಣು?
1105.     ಬಯಸಿದ ವಸ್ತುಗಳು ತಾವಾಗಿಯೇ ಬಂದು ಸೇರಿ ಸುಖ ಕೋಡುವಂತೆ ಈ ಕುಸುಮ ಶೋಭಿತ ಕೇಶರಾಶಿಯುಳ್ಳ ಕಾಮಿನಿಯ ತೋಳುಗಳು ನನಗೆ ಸುಖ ನೀಡುತ್ತಿವೆ.
1106.     ಪ್ರತಿ ಸಾರಿಯ ಅಪ್ಪುಗೆಯಲ್ಲೂ ನನ್ನ ಪ್ರಾಣವನ್ನು ಚಿಗುರಿಸುವ ಸ್ಪರ್ಶದಿಂದ ಹೊಸ ಚೇತನವನ್ನು ನೀಡುವುದರಿಂದ, ಈ ಮುಗ್ದೆಯ ತೋಳುಗಳು ಅಮೃತದಿಂದ ಕಡೆದಂತೆ ತೋರುತ್ತಿವೆ.
1107.     ಅಂದವಾದ ಹೇಮ ವರ್ಣದ ಈ ಬೆಡಗಿಯ ಅಪ್ಪುಗೆಯ ಸುಖವು ತಮ್ಮದೇ ಆದ ಮನೆಯಲ್ಲಿ ಇದ್ದು ಇತರರೊಡನೆ ತಾವು ಸಂಪಾದಿಸಿದ ವಸ್ತುಗಳನ್ನು ಹಂಚಿ ಕೊಂಡು ಅನುಭವಿಸಿದ ಆನಂದವನ್ನು ಹೋಲುವುದು.
1108.     (ಉಸಿರಾಡುವ) ಗಾಳಿಯೂ ಹಾದು ಹೋಗಲು ಎಡೆ ಇಲ್ಲದಂಥ ಬಿಗಿಯಪ್ಪುಗೆಯು, ಮೆಚ್ಚಿದ ಪ್ರಣಯಿಗಳಿಬ್ಬರಿಗೂ ಮಧುರವೆನಿಸುವುದು.
1109.     ಪ್ರಣಯ ಕಲಹ, ಮತ್ತೆ ಸಮಾಧಾನ, ಆನಂತರ ಪರಸ್ಪರ ಅಪ್ಪುಗೆಯಲ್ಲಿ ಕೂಡುವುದು- ಇವು ಪ್ರಣಯ ಜೀವಿಗಳು ಪಡೆದ ಫಲವಾಗಿರುವುದು.
1110.     ಓದಿಕೊಂಡಾಗಲೆಲ್ಲ ಜ್ಞಾನವು ಹೆಚ್ಚು ಹೆಚ್ಚುತ್ತ ಮುನ್ನಿನ ಅಜ್ಞಾನ ತೋರುವಂತೆ, ಶ್ರೇಷ್ಠ ಆಭರಣಗಳನ್ನು ತೊಟ್ಟ ಈ ಎಳೆವೆಣ್ಣನ್ನು ಸೇರುವಾಗಲೆಲ್ಲ ಪ್ರಣಯ ಭಾವವು ವ್ಯಕ್ತವಾಗುತ್ತ ಹೋಗುವುದು.

ಅಧ್ಯಾಯ 112 ಸೌಂದರ್ಯ ಪ್ರಶಂಸೆ

1111.     ಕೋಮಲ ಸ್ವಭಾವದ ಅನಿಚ್ಚೆ ಹೂವೇ ನೀ ಬಾಳು! ನಾನು ಪ್ರೀತಿಸುವ ಕೋಮಲೆ ನಿನಗಿಂತಲೂ ಸುಕುಮಾರ ಸ್ವಭಾವದವಳು.
1112.     ಇವಳ ಕಣ್ಣುಗಳು ಹಲವರು ಕಂಡು ಸಂತಸ ಪಡುವ ಹೂಗಳನ್ನು ಹೋಲುವುದೆಂದು ಭಾವಿಸಿ, ಆ ಹೂಗಳನ್ನು ಕಂಡಾಗ ಗೊಂದಲಕ್ಕೀಡಾಗುವೆಯಲ್ಲ ಓ ಮನಸ್ಸೆ!
1113.     ಬಿದಿರಿನಂಥ ತೋಳುಗಳುಳ್ಳ ಈ ಎಳೆವೆಣ್ಣಿಗೆ, ತಳಿರಿನಂಥ ಒಡಲು ಮುತ್ತಿನಂಥ ಹಲ್ಲು, ಸುವಾಸನೆಯುಳ್ಳ ಉಸಿರು, ಶೂಲದಂತೆ (ಚುಚುವ) ಕಾಡಿಗೆಗಣ್ಣು.
1114.     ಕುವಲಯ ಪುಷ್ಪಕ್ಕೆ ನೋಡುವ ಕಣ್ಣುಗಳಿದ್ದರೆ, ಇವಳನ್ನು ಕಂಡು ಈ ಚೆಲುವೆಯ ಕಣ್ಣುಗಳಿಗೆ ಸರಿದೊರೆಯಾಗಲಾರೆನೆಎಂದು ನಾಚಿ ತಲೆತಗ್ಗಿಸಿ ನೆಲವನ್ನು ನೋಡುವುದು.
1115.     ಈ ಚೆಲುವ ತನ್ನ ಸುಕುಮಾರತೆಯನ್ನು ಅರಿಯದೆ ಕಾಂಡದೊಡನೆ ಅನಿಚ್ಚ ಹೂವನ್ನು ಮುಡಿಯಲ್ಲಿ  ಮುಡಿದುಕೊಂಡಳು ; ಅದರಿಂದ ಅವಳ ಸುಕುಮಾರ ನಡುವು ಬಾಡಿ ಸೊರಗಿತು. ಅದರಿಂದ ಮಂಗಳ ವಾದ್ಯವು ಮೊಳಗಲಿಲ್ಲ.
1116.     ಚಂದ್ರನನ್ನೂ, ಈ ಎಳೆವೆಣ್ಣಿನ ಮುಖವನ್ನೂ ನಿರ್ಣಾಯಿಸಲಾದೆ ತಾರೆಗಳು ನೆಲೆತಪ್ಪಿ ಪರಿಭ್ರಮಿತಗೊಂಡಿವೆ.
1117.     ಮೊದಲು ಕ್ಷಯಿಸಿ ಆಮೇಲೆ ತುಂಬಿಕೊಂಡು ಬೆಳಗುವ ಚಂದ್ರನಲ್ಲಿರುವಂತೆ ಈ ಹೆಣ್ಣಿನ ಮುಖದಲ್ಲಿ ಕಳಂಕವುಂಟೆ?
1118.     ಚಂದ್ರನೇ, ನೀನು ವರ್ಧಿಸು! ಈ ಬೆಡಗಿಯ ಮುಖದಂತೆ ನೀನೂ ಬೆಳಗಬಲ್ಲೆಯಾದರೆ ನೀನೂ ನನ್ನ ಪ್ರೀತಿ ಪಾತ್ರನಾಗುವೆ.
1119.     ಓ ಚಂದ್ರನೇ, ಅಲರನೇತ್ರಯಾದ ಈ ಎಳೆವೆಣ್ಣಿನ ಮುಖವನ್ನು ನೀನು ಹೋಲಬಯಸುವುದಾದರೆ, ಇತರರು ನಿನ್ನನ್ನು ಕಾಣುವಂತೆ ತೋರಿಕೊಳ್ಳಬೇಡ. ನಿನ್ನ ಸುಂದರ ವದನವು ನನಗೆ ಮಾತ್ರ ಮೀಸರಾಗಿರಲಿ.
1120.     ಈ ಕೋಮಲೆಯ ಅಡಿಗಳಿಗೆ ಅನಿಚ್ಚ ಹೂವೂ, ಹಂಸತೊಲಿಕವೂ ನೆರುಂಜೆ ಮುಳ್ಳಿನಂತೆ ಇವೆ.

ಅಧ್ಯಾಯ 113. ಪ್ರಣಯದ ಮಹತ್ವ ಪ್ರಕಟನೆ

1121.     ಮಧುರ ವಚನಗಳನ್ನು ಪಲುಕುವ ಈ ಎಳೆವೆಣ್ಣಿನ ಧವಳ ದಂತಗಂಳಿದೊಸರುವ ಲಾಲಾರಸವು ಹಾಲಿನೊಂದಿಗೆ ಜೇನು ಬೆರೆತಂತಿರುವುದು.
1122.     ಈ ಎಳೆವೆಣ್ಣಿನೊಂದಿಗಿರುವ ನನ್ನ ಸ್ನೇಹವು ಒಡಲಿನೊಂದಿಗೆ ಪ್ರಾಣಕ್ಕೆ ರುವ ನಂಟಿನಂತೆ.
1123.     ನನ್ನ ಕಣ್ಣಿನ ಪಾಪಯೊಳಗಿನ ನೆರಳೇ ನೀ ತೊಲಗು; ನಾನು ಬಯಸುವ ಈ ಅಂದದ ಹುಬ್ಬಿನ ಬಾಲೆಗೆ ಸ್ಥಳವಿಲ್ಲ.
1124.     ಆರಿಸಿದ ಚೆಲುವಿನಾಭರಣಗಳನ್ನು ಧರಿಸಿದ ಈ ಸೊಬಗಿ ನನ್ನೊಡನೆ ಕೊಡುವಾಗ ಬಾಳಿಗೆ ಉಸಿರಿನಂತಿರುವಳು; ಅಗಲುವಾಗ ಅದಕ್ಕೆ ಸಾವಿನಂತಿರುವಳು.
1125.     ಮಿಂಚುವ ಹೋರ್ ಕಣ್ಣುಗಳ ಈ ಚೆಲುವೆಯ ಗುಣಗಳನ್ನು ನಾನು ಮರೆತರಲ್ಲವೆ ನೆನೆಯುವುದು! ಆದರೆ ನಾನು ಅವಳನ್ನು ಮರೆಯಲು ಸಾಧ್ಯವೇ ಇಲ್ಲ.
1126.     ನನ್ನ ನಲ್ಲನು ನನ್ನ ಕಣ್ಣಿನೊಳಗಿಂದ ಹೋಗುವುದಿಲ್ಲ. ನಾನು ಅರಿಯದೆ ರೆಪ್ಪೆಯಲುಗಿಸಿದರೆ ಕೂಡ ನೋಯುವುದಿಲ್ಲ. ಅಷ್ಟು ಸೂಕ್ಷ್ಮರಾದವರು ಅವರು.
1127.     ನನ್ನ ಪ್ರಿಯತಮನ ನನ್ನ ಕಣ್ಣಲ್ಲಿ ನೆಲಸಿರುವನು; ಅದರಿಂದ ಅವನನ್ನು ಮರೆಸುವುದೆಂದು ಹೆದರಿ ನಾನು ಕಣ್ಣಿಗೆ ಕಾಡಿಗೆಯನ್ನು ಕೂಡ ಹಚ್ಚುವುದಿಲ್ಲ.
1128.     ನನ್ನ ಪ್ರಿಯತಮನು ನನ್ನ ಹೃದಯದಲ್ಲಿ ನೆಲಸಿರುವನು; ಅದರಿಂದಲೇ ಎಲ್ಲಿ ಅವರನ್ನು ಸುಡುವುದೋ ಎಂದು ನೆನೆದು ಬಿಸಿ ತಿನಿಸುಗಳನ್ನು ತಿನ್ನಲು ನಾನು ಅಂಜುವೆನು.
1129.     ಕಣ್ಣು ಮುಚ್ಚಿದರೆ (ಪ್ರಿಯತಮನು) ಎಲ್ಲಿ ತಪ್ಪಿಸಿಕೊಳ್ಳುವನೋ ಎಂದು ತಿಳಿದು ಕಣ್ಣೆವೆ ಮುಚ್ಚದೆ ನೋಡುತ್ತಿದ್ದೇನೆ; ಅಷ್ಟು ಮಾತ್ರಕ್ಕೆ ಈ ಊರಿನ ಜನರು ಅವನನ್ನು ಪ್ರೀತಿಶೂನ್ಯನೆಂದು ಕರೆಯುವರು.
1130.     ನನ್ನ ಮನದನ್ನ ಸದಾ ನನ್ನ ಹೃದಯ ಮುಂದಿರದಲ್ಲಿ ನಂದದಿಂದ ವಾಸವಾಗಿರುವನು. (ಅದನ್ನು ಅರಿಯದೆ) ಈ ಊರಿನ ಜನರು ಅವನು ನನ್ನಿಂದ ದೂರ ಇದ್ದಾನೆಂದು ತಿಳಿದು ಪ್ರೀತಿ ಇಲ್ಲದವನೆಂದುಹೇಳುವರು.

ಅಧ್ಯಾಯ 114. ಲಜ್ಜಾತ್ಯಾಗವನ್ನು ಪ್ರಕಟಿಸುವುದು

1131. ಇನಿಯಳಲ್ಲಿ ಕಾಮ ಸುಖವನ್ನು ಅನುಭವಿಸಲಾರದೆ ಸಂಕಟಪಟ್ಟವರಿಗೆ ರಕ್ಷಣೆಯಾದ ತಾಳೆಗುದುರೆಯೇರುವದಲ್ಲದೆ ನನಗೆ ಬೇರೆ ಆಶ್ರಯವಿಲ್ಲ.
1132. (ಲ್ಲೆಯ ವಿರಹ ತಾಪದ ) ನೋವನ್ನು ತಾಳಲಾರದೆ ನನ್ನ ಒಡಲೂ ಪ್ರಾಣವೂ ನಾಚಿಕೆಯನ್ನು ತೋರೆದು ತಾಳೆಗುದುರೆಯನ್ನು ಏರುವುದು.
1133. ಹಿಂದೆ ನಾನು ಲಜ್ಜೆಯಿಂದ ಕೂಡಿದ ಪುರುಷತ್ವವನ್ನು ಆಶ್ರಯಿಸಿದ್ದು (ಪ್ರಣಯಿನಿಯ ವಿರಹದಿಂದ  ಸಂಕಟಪಡುತ್ತಿರುವ) ಇಂದು ಕಾಮಾತಿಶಯ ಹೊಂದವವರು ಏರುವ ತಾಳೆಗುದುರೆಯನ್ನು ಆಶ್ರಯಿಸಿದ್ದೇನೆ.
1134. ಲಜ್ಜೆಯಿಂದ ಕೂಡಿದ ನನ್ನ ಪುರುಷತ್ವವೆಂಬ ನಾವೆಯನ್ನು ಕಾಮವೆನ್ನುವ ಕಡು ಪ್ರವಾಹವು ಸೆಳೆದುಕೊಂಡು ಹೋಗುತ್ತಿದೆ.
1135. ಮಾಲೆಯಂತೆ ವರಸೆಯಾಗಿ ಕಿರು ಬಳೆಗಳನ್ನು ತೊಟ್ಟ ಈ ಚೆಲುವೆ ನನಗೆ ತಾಳೆಗುದುರೆಯೊಂದಿಗೆ ಸಂಧ್ಯಾ ಸಮಯದಲ್ಲಿ ದುಃಖಿಸುವ ಪರಿಸ್ಥಿತಿಯನ್ನು ತಂದೊಡ್ಡಿದಳು.
1136. ಈ ಎಳೆವೆಣ್ಣಿಗಾಗಿ ಬಳಲಿ ನನ್ನ ಕಣ್ಣುಗಳು ಮುಚ್ಚುವುದಿಲ್ಲ. ಅದರಿಂದ ನಡು ರಾತ್ರಿಯಲ್ಲೂ ತಾಳೆಗುದುರೆಯನ್ನು ಏರುವುದನ್ನು ನೆನೆಯುತ್ತಿರುತ್ತೇನೆ.
1137. ಕಡಲಿನಂತೆ ಕಾಮ ವೇದನೆಯನ್ನು ಅನುಭವಿಸಿಯೂ ತಾಳೆಗುದುರೆಯನ್ನು ಏರದಿರುವ ಹೆಣ್ಣಿನ ಜನ್ಮಕ್ಕಿಂತಲೂ ಮಿಗಿಲಾದುದು (ಈ ಲೋಕದಲ್ಲಿ) ಬೇರೆ ಇಲ್ಲ.
1138. ಹೆಂಗಸರು ಸ್ತ್ರೀ ಸಹಜವಾದ ಲಜ್ಜೆತಾಂಬಿ ಹೆಣ್ತನವನ್ನು ಕಾಪಾಡಿಕೊಳ್ಳುವವರು, ತುಂಬ ಕರುಣೆಗೆ ಪಾತ್ರರು ಎಂದು ನೆನೆಯದೆ ಕಾಮವು ತನ್ನನ್ನು ಮರೆ ಮಾಚದೆ, ಬಹಿರಂಗವಾಗಿ ತೋರ್ಪಡಿಸಿಕೊಳ್ಳುವುದು.
1139. ತಾನು ಅಡಗಿದ್ದರೆ ಎಲ್ಲರೂ ತನ್ನನ್ನು ತಿಳಿಯಲಾರರು ಎಂದುಕೊಂಡೇ ನನ್ನ ಕಾಮವು ಊರಿನ ಬೀದಿಯಲ್ಲಿ ಭ್ರಮಿಸಿ ಅಲೆದಾಡುತ್ತಿದೆ.
1140. ನಾನು ಅನುಭವಿಸುತ್ತಿರುವ ವಿರಹವೇದನೆಯನ್ನು ತಾವು ಕಂಡರಿಯದಿರುವುದರಿಂದಲೇ, ನನ್ನ ಕಣ್ಣೆದುರೇ ಕೆಲವರು ನನ್ನನ್ನು ಕಂಡು ನಗುತ್ತಿದ್ದಾರೆ! ಮೂರ್ಖರು!

ಅಧ್ಯಾಯ 115. ವದಂತಿಯನ್ನು ಕುರಿತು ಆಡುವುದು

1141. (ನಮ್ಮಿಬ್ಬರ ಪ್ರಣಯದ ವಿಷಯವಾಗಿ) ವದಂತಿ ಎದ್ದು ನಮ್ಮ ಅಮೂಲ್ಯವಾದ ಪ್ರಾಣವು ಉಳಿದುಕೊಂಡಿತು. ಅದನ್ನು ನಮ್ಮ  ಪುಣ್ಯ ವಶದಿಂದ ಹಲವರು ಅರಿಯರು!
1142. ಹೂವಿನಂತಹ ಕಣ್ಗಳ ಚೆಲುವೆಯ ಸೌಂದರ್ಯದ ಬೆಲೆಯನ್ನು ಅರಿಯದ ಈ ಊರಿನ ಜನರು ವದಂತಿ ಹಬ್ಬಿಸಿ ಅವಳು ನನಗೆ ಸುಲಭಳಾಗುವಂತೆ ಮಾಡಿ ಉಪಕಾರ ಮಾಡಿದರು.
1143. ಊರಿನ ಜನರು ತಿಳಿದ ವದಂತಿಯು ನಮಗೆ ಅನುಕೂಲವಾಗಿಯೇ ಇದೆ ಅಲ್ಲವೆ? ಅದು ನಮಗೆ ಅಲಭ್ಯವಾದುದನ್ನು ಲಭ್ಯವಾಗಿ ಮಾಡಿದೆ.
1144. ವದಂತಿಯಿಂದ ನಮ್ಮ ಕಾಮವು ವೃದ್ಧಿಸುತ್ತಿದೆ; ಅದಿಲ್ಲವಾಗಿದ್ದರೆ ಕಾಮವು ಸೊರಗಿ ನಶಿಸಿಹೋಗುವುದು.
1145. ಕಳ್ಳು ಕುಡಿಯುವಾಗ, ಕುಡಿದಂತಲ್ಲಿ ಮತ್ತೆ ಮತ್ತೆ ಬಯಸುವಂತೆ ಕಾಮವು ವದಂತಿಯಿಂದ ಪ್ರಕಟವಾದಂತೆಲ್ಲ ಅದು ನನಗೆ ಮತ್ತಷ್ಟು ಇನಿದಾಗಿ ತೋರುವುದು.
1146. ನಾನು ನನ್ನ ಇನಿಯನನ್ನು ಕಂಡದ್ದು ಒಂದು ದಿನ ಮಾತ್ರ; ಆದರೆ ಅದರಿಂದ ಉಂಟಾದ ವದಂತಿ ಮಾತ್ರ ಚಂದ್ರನನ್ನು ರಾಹು (ಸರ್ಪ) ನುಂಗಿದ ಸುದ್ದಿಯಂತೆ ಲೋಕವೆಲ್ಲಾ ವ್ಯಾಪಿಸಿಬಿಟ್ಟಿದೆ.
1147. (ನನ್ನ) ಕಾಮ ವೇದನೆಯು ಊರವರ ವದಂತಿಯೆಂಬ ಸಾರದಿಂದಲೂ, ತಾಯಿಯ (ಕಟು) ಮಾತೆಂಬ ನೀರಿನಿಂದಲೂ ಸಮೃದ್ಧವಾಗಿ ಬೆಳೆಯುತ್ತಿದೆ.
1148. ವದಂತಿಯ ಮೂಲಕ ಕಾಮವನ್ನು ಆರಿಸುತ್ತೇವೆ ಎನ್ನುವುದು ತುಪ್ಪದಿಂದ ಬೆಂಕಿಯನ್ನು ಆರಿಸುವೆವು ಎಂದಂತೆ.
1149. ಅಂಜಬೇಡ ಎಂದು ಹೇಳಿದ ನನ್ನ ಮನದನ್ನನೇ ಇಂದು ಹಲವರು ನಾಚಿಕೆ ಪಡುವಂತೆ ನನ್ನನ್ನಗಲಿ ಹೋಗಿರುವಾಗ, ಹಬ್ಬಿದ ವದಂತಿಗೆ ನಾನು ನಾಚಿಕೆ ಪಡಲು ಸಾಧ್ಯವೇ?
1150. ನಾವು ಬಯಸುವ ವದಂತಿಯನ್ನು ಈ ಊರಿನ ಜನರು ಎತ್ತಿ ಡುತ್ತಿದ್ದಾರೆ; ಅದರಿಂದ ಇನ್ನು ಮೇಲೆ ಇನಿಯನು ತಾನು ಬಯಸಿದರೆ, ನನ್ನನ್ನು ತನ್ನೊಡನೆ ಕರೆದು ಕೊಂಡು ಹೋಗಲು ಸಮ್ಮತಿಸುವನು.

ಅಧ್ಯಾಯ 116. ವಿರಹವನ್ನು ತಾಳದಿರುವುದು

1151. ನನ್ನನು ಅಗಲಿ ಹೋಗುವುದಿಲ್ಲ ಎಂದಿದ್ದರೆ ನನಗೆ ಹೇಳು ಇಲ್ಲದೆ, ಅಗಲಿ ಬೇಗ ಹಿಂದಿರುಗುವುದು ಇದ್ದರೂ ಉಸಿರು ಹಿಡಿದು ಜೀವಿಸುವವರಿಗೆ ಹೇಳು.
1152. ಈ ಮೊದಲು ಅವರ ನೋಟವೇ ಸುಖವನ್ನು ಕೊಡುತ್ತಿತ್ತು. ಈಗ ಲಾದರೋ ಮುಂದೆ ಬರುವ ವಿರಹವನ್ನು ನೆನೆದು ಭಯದಿಂದ ಇನಿಯರ ಕೂಟವೂ ಯಾತನೆಯನ್ನು ಕೊಡುತ್ತಿದೆ!
1153. ಅಗಲಿಕೆ, ಯಾತನೆಗಳ ಅರಿವುಳ್ಳ ನಲ್ಲನಲ್ಲಿಯೂ ವಿರಹವು ಒಂದು ವೇಳೆ ನಿಜವಾದ ಪಕ್ಷದಲ್ಲಿ ಅವರ (ಮಾತಿನಲ್ಲಿ) ವಿಶ್ವಾಸವಿಡುವುದು ಅರಿದಲ್ಲವೆ?
1154. ಪ್ರೇಮವನ್ನು ಹರಿಸುತ್ತ 'ಭಯ ಪಡಬೇಡ' ವೆಂದು ಮೊದಲು ಭರವಸೆಯಿತ್ತವರು ಅಗಲಿದರೆ, ಅವರ ಭರವಸೆಯ ಮಾತಿನಲ್ಲಿ ವಿಶ್ವಾಸವಿಟ್ಟವರ ತಪ್ಪೇನು?
1155. ನನ್ನನ್ನು ಕಾದುಕೊಳ್ಳುವುದಾದರೆ, ನನ್ನ ಉಸಿರಿನೊಡನೆ ಬೆರೆತ ಪ್ರಿಯನ ಅಗಲಿಕೆಯು ಸಂಭವಿಸದಂತೆ ನಿಲ್ಲಿಸಬೇಕು. ಅವನು ಅಗಲಿದರೆ, ಮತ್ತೆ ನಮ್ಮಿಬ್ಬರ ಮಿಲನವು ದುಸ್ಸಾಧ್ಯವಾಗುವುದು.
1156. ನನ್ನನ್ನು ಅಗಲಿ ಹೋಗುವೆನೆಂದು ತಿಳಿಯ ಪಡಿಸುವಷ್ಟು ಅವನು ಕಲ್ಲೆದೆಯವನಾದರೆ, ಮತ್ತೆ ಹಿಂದಿರುಗಿ ಬಂದು ನನ್ನನ್ನು ಪ್ರೇಮಿಸುವನೆಂಬ ಆಶೆ ವ್ಯರ್ಥವೇ.
1157. ಕೃಶವಾಗಿ ನನ್ನ ಮುಂಗೈಯ ಗಂಟನಿಂದ ಕಳಚಿ ನಿಂತ ಬಳೆಯು ನನ್ನನ್ನು ಪ್ರಿಯನು ತೊರೆದು ಹೋಗುವ ಸುದ್ದಿಯನ್ನು ಸಾರದಿರುವುದೆ?
1158. ಕೆಳೆಯಿಲ್ಲದ ಊರಿನಲ್ಲಿ ಬಾಳುವುದು ಕಷ್ಟಕರ; ಅದಕ್ಕಿಂತಲೂ ಅಸಹನೀಯವಾದುದು ಇನಿಯನ್ನನ್ನು ಗಲಿ ಬಾಳುವುದು.
1159. ಬೆಂಕಿಯು ತನ್ನನ್ನು ಮುಟ್ಟಿದಾಗ ಮಾತ್ರ ಸುಡುವುದಲ್ಲದೆ ಕಾಮ ವೇದನೆಯಂತೆ ದೂರವಿದ್ದಾಗಲೂ ಸುಡಬಲ್ಲುದೆ?
1160. (ಇನಿಯನ್ನು) ವಿರಹವನ್ನು ಕುರಿತು ತಿಳಿಸುವಾಗ, ಅದನ್ನು ಸಹಿಸಿಕೊಂಡು, ಕಷ್ಟ ಪರುಪರೆಗಳನ್ನು ಮರೆತು, ಉಂಟಾದ ವಿರಹವನ್ನೂ ತಾಳಿಕೊಂಡು ಆಮೇಲೂ ಉಸಿರೊಡನೆ ಬಾಳುವ ಹೆಣ್ಣು ಕುಲದವರು ಹಲವರಿದ್ದಾರೆ! ವಿಚಿತ್ರ.

ಅಧ್ಯಾಯ 117. ವಿರಹದಿಂದ ಕೃಶವಾಗಿ ದುಃಖಿಸುವುದು

1161. ಈ ಕಾಮವೇದನೆಯನ್ನು, ಇತರರು ತಿಳಿಯಬಾರದೆಂದು ಮರೆಸುತ್ತಿದ್ದೇನೆ. ಆದರೆ ಇದು ಊಟೆಯ ನೀರಿನಂತೆ ತೋಡುತ್ತ ತೋಡುತ್ತ ಒಸರುತ್ತಲೇ ಹೋಗುವುದು.
1162. ಈ ಪ್ರಣಯ ಯಾತನೆಯನ್ನು ನನ್ನಿಂದ ಬಚ್ಚಿಡಲೂ ಸಾಧ್ಯವಾಗುತ್ತಿಲ್ಲ; ನನಗೆ ಯಾತನೆಯುಂಟು ಮಾಡಿದ ಇನಿಯನಿಗೆ ಹೇಳಿಕೊಳ್ಳುವೆ ಎಂದರೆ ನಾಚಿಕೆ ಅಡ್ಡಲಾಗಿ ಬರುತ್ತಿದೆ.
1163. ವೇದನೆಯನ್ನು ತಾಳಲಾರದೆ (ತತ್ತರಿಸುತ್ತಿರುವ) ನನ್ನ ಶರೀರದಲ್ಲಿ, ಪ್ರಾಣವೇ ಕಾವಡಿ ಕೋಲಾಗಿ, ಕಾಮ ವೇದನೆಯೂ ನಾಚಿಕೆಯೂ ತುಯ್ಯಲಾಡುತ್ತಿದೆ.
1164. ಕಾಮ ವೇದನೆಯೆಂಬ ಕಡಲು ಮಾತ್ರ ಮೊರೆಯುತ್ತಿದೆ. ಆದರೆ ಅದನ್ನು ದಾಟಿ ಸುರಕ್ಷಿತವಾಗಿ ಕೊಂಡೊಯ್ಯುವ ನಾವೆಯೇ ಇಲ್ಲವಾಗಿದೆ.
1165. ಪ್ರೇಮದಿಂದಲೇ ದುಃಖವನ್ನು ತಂದೊಡ್ಡಬಲ್ಲವರು ಹಗೆತನದಲ್ಲಿ ಏನು ತಾನೆ ಮಾಡಲಾರು?
1166. ಕಾಮವು ಸುಖವುಂಟು ಮಾಡುವಾಗ ಅದರ ಸುಖ ಕಡಲಿನಂತೆ; ಅದು ಸಂಕಟದಲ್ಲಿ ಸಿಲುಕಿಸುವಾಗ ಅದರ ದುಃಖವು ಕಡಲಿಗಿಂತ ಮಿಗಿಲು.
1167. ಕಾಮವೆನ್ನುವ ಕಡು ಪ್ರವಾಹವನ್ನು ಈಜಿಯೂ ಅದರ ತೀರವನ್ನು ನಾನು ಕಾಣಲಾರಳಾಗಿದ್ದೇನೆ; ನಟ್ಟೆರುಳಿನಲ್ಲೂ ನಾನು ಉಸಿರೊಡನೆ ಏಕಾಂಗಿಯಾಗಿದ್ದೇನೆ.
1168. ಪಾಪ! ಈ ರಾತ್ರಿಯು ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ಸುಖ ನಿದ್ರಯಿತ್ತು ತಾನು ಮಾತ್ರ ಎಚ್ಚರವಾಗಿದೆ! ಅದಕ್ಕೆ ನಾನಲ್ಲದೆ ಬೇರೆ ಸಂಗಾತಿ ಇಲ್ಲ!
1169. ಈ ವಿರಹದ ದಿನಗಳಲ್ಲಿ ದೀರ್ಘವಾಗಿ ಕಾಣುವ ಈ ಇರುಳು ನಿರ್ದಯನಾದ ನನ್ನಿನಿಯನ ಕಾಠಿಣ್ಯಕ್ಕಿಂತ ಹೆಚ್ಚು ಕಠಿಣವಾಗಿ ವರ್ತಿಸುತ್ತಿದೆ!
1170. ಮನಸ್ಸು ಹೇಗೋ ಹಾಗೆ ಕಣ್ಣುಗಳೂ ಪ್ರಿಯತಮನಿರುವೆಡೆಗೆ ವೇಗವಾಗಿ ತಲುಪುವುದಾದರೆ, (ಅಗಲಿಕೆಯ) ಕಣ್ಣೀರ ಹೊನಲಿನಲ್ಲಿ ಅವು ಈಜಬೇಕಿಲ್ಲ.

ಅಧ್ಯಾಯ 118. ದುಃಖಪೂರಿತ ನೇತ್ರಗಳು

1171. ಕಣ್ಣುಗಳು (ಅವನನ್ನು) ನನಗೆ ತೋರಿಸಿದುದರಿಂದ ಈ ತೀರದ ಕಾಮವೇದನೆಯು ಬೆಳೆಯಿತು; ನನಗೆ (ಅವನನ್ನು) ತೋರಿಸಿದ ಆ ಕಣ್ಣುಗಳೇ ಈಗ ಅಳುವುದೇಕೆ?
1172. ಮುಂದಾಗುವುದನ್ನು ಆಲೋಚನೆ ಮಾಡದೆ (ಅವನನ್ನು) ನೋಡಿ ಪ್ರೇಮ ಪರವಶವಾದ ಈ ಕಣ್ಣುಗಳು ಈಗ ಪ್ರೇಮಶೂನ್ಯವಾಗಿ ಸಹನೆಯಳಿದು ದುಃಖವನ್ನು ಅನುಭವಿಸುವುದು ಏಕೆ?
1173. ಅಂದು ನಲ್ಲನನ್ನು ತಾವೇ ಬಯಕೆಯಿಂದ ಮುಂದಾಗಿ ನೋಡಿದ ಈ ಕಣ್ಣುಗಳು ಇಂದು ಕಣ್ಣೀರು ಸುರಿಸುತ್ತಿವೆ; ಇದು ನಗೆಪಾಟಲಲ್ಲವೆ?
1174. ಈ ನನ್ನ ಕಾಡಿಗೆ ಕಣ್ಣುಗಳು ತಪ್ಪಿಸಿಕೊಳ್ಳಲು ಮಾರ್ಗವಿಲ್ಲದ, ತೀರದ ಕಾಮ ವೇದನೆಗೆ ನನ್ನನ್ನು ಗುರಿಮಾಡಿ, ಈಗ ಕಣ್ಣೀರು ಸುರಿಸಲಾರದೆ ಒಣಗಿ ಬರಡಾಗಿವೆ.
1175. ಕಡಲನ್ನೂ ಮಿಕ್ಕಿದ ಕಾಮ ವೇದನೆಯನ್ನು ತಂದೊಡ್ಡಿದ ನನ್ನ ಕಣ್ಣುಗಳು ಇಂದು ನಿದ್ರಿಸಲಾರದೆ ದುಃಖದಿಂದ ಕ್ಲೇಶಪಡುತ್ತಿವೆ.
1176. ನನಗೆ ಈ ಕಾಮ ವೇದನೆಯನ್ನುಂಟು ಮಾಡಿದ ಕಣ್ಣುಗಳು ತಾವೇ ಆ ಅವಸ್ಥೆಯಲ್ಲಿ ಪಾಡು ಪಡುತ್ತಿರುವುದು ನನಗೆ ಬಹಳ ಸಂತೋಷವನ್ನುಂಟು ಮಾಡಿದೆ ಹಾಯ್!
1177. ಅಂದು ಮನ ನಲಿದು, ಮೃದುವಾಗಿ ಬಯಕೆಯಿಂದ ಅವರನ್ನು ಒಂದೇ ಸಮನೆ ಕಂಡು ತಣಿದ ಕಣ್ಣುಗಳಲ್ಲಿ, ಇಂದು, ಅತ್ತು ಅತ್ತು ಒಳಗೆ ತುಂಬಿರುವ ನೀರೆಲ್ಲ ಇಂಗಿಹೋಗಲಿ.
1178. ಹೃದಯಪೂರ್ವಕವಾಗಿ ಪ್ರೀತಿಸದೆ, ಬರಿಯ ತೋರಿಕೆಗೆ ಪ್ರೀತಿಸಿದವರು ಒಬ್ಬರಿದ್ದಾರೆ; ಅವರನ್ನು ಕಾಣದೆ ನನ್ನ ಈ ಕಣ್ಣೂಗಳು ಅತೃಪ್ತವಾಗಿವೆ.
1179. ನನ್ನ ನಲ್ಲನು ಬಾರದಿರುವಾಗ ನಿರೀಕ್ಷೆಯಲ್ಲಿ ನಿದ್ರಿಸವು; ಬಂದಾಗಲೂ ಅಗಲುವರೆಂಬ ಭೀತಿಯಲ್ಲಿ ನಿದ್ರಿಸವು; ಇಬ್ಬಗೆಯಲ್ಲೂ, ಮಿಗಿಲಾದ ದುಃಖದಿಂದ ನನ್ನ ಕಣ್ಣುಗಳು ತಪ್ಪವಾಗಿವೆ.
1180. ಧ್ವನಿಗೈವ ನಗಾರಿಯಂತೆ ಮನಸ್ಸಿನ ವೇದನೆಯನ್ನು ಸಾರುತ್ತಿರುವ ಕಣ್ಣುಗಳಿರುವಾಗ, ನಮ್ಮ ಪ್ರಣಯ ರಹಸ್ಯವನ್ನು ಊರವರಿಗೆ ಅರಿತುಕೊಳ್ಳುವುದು ಕಷ್ಟವೇನಲ್ಲ!

No comments:

Post a Comment