Sunday, 1 August 2010

ತಿರುಕ್ಕುಱಳ್: ಅಧ್ಯಾಯ 21-30Thirukkural in Kannada
ತಿರುಕ್ಕುಱಳ್ (ಹೊಸಗನ್ನಡ ಅನುವಾದಗಳೊಂದಿಗೆ)ಧರ್ಮ ಭಾಗ: ಅಧ್ಯಾಯ: 21-30

ಅಧ್ಯಾಯ 21. ಕೆಟ್ಟ ಕೆಲಸಗಳ ಭಯ


201. ಕೆಟ್ಟ ಕೆಲಸವನ್ನು ಮಾಡುವ ಉದ್ಧಟತನಕ್ಕೆ ದುಷ್ಟರು ಹೆದರುವುದಿಲ್ಲ. ಶಿಷ್ಟರು ಹೆದರುತ್ತಾರೆ.
202. ಕೆಟ್ಟ ಕೆಲಸಗಳಿಂದ ಕೆಟ್ಟದೇ ಫಲಿಸುವುದು; ಆದರಿಂದ ಕೆಟ್ಟ ಕೆಲಸಗಳನ್ನು ಬೆಂಕಿಯನ್ನು ಕಂಡರೆ ಹಿಮ್ಮೆಟ್ಟುವಂತೆ ಹೆದರಬೇಕು.
203. ತನ್ನ ಹೆಗಳಿಗೆ ಕೂಡ ಕೆಟ್ಟದನ್ನು ಮಾಡದೆ ಇರುವುದೇ, ಅರಿವುಗಳೆಲ್ಲೆಲ್ಲಾ ಮಿಗಿಲಾದ ಅರಿವು ಎಂದು ಹೇಳುತ್ತಾರೆ.
204. ಮರೆತೂ ಪರರಿಗೆ ಕೇಡು ಎಣಿಸಬಾರದು; ಹಾಗೆ ಎಣಿಸಿದರೆ ಧರ್ಮವು ಕೇಡೆಣಿಸಿದವನಿಗೇ ಕೇಡನ್ನು ಎಣಿಸುತ್ತದೆ.
205. ತಾನು ಇಲ್ಲದವನೆಂದು (ದರಿದ್ರನೆಂದು) ಕೆಟ್ಟ ಕಾರ್ಯಗಳನ್ನು ಮಾಡ ಬಾರದು; ಹಾಗೆ ಮಾಡಿದರೆ ಮತ್ತಷ್ಟು ದರಿದ್ರನಾಗುತ್ತಾನೆ.
206. ದುಃಖಕ್ಕೆ ಕಾರಣವಾದ ಕೆಟ್ಟ ಕಾರ್ಯಗಳು ತನ್ನನ್ನು ಬಾಧಿಸಬಾರದು ಎಂದು ಇಚ್ಛಿಸುವವನು, ಇತರರಿಗೂ ತಾನು ಕೆಟ್ಟದನ್ನು
         ಮಾಡದಿರಬೇಕು.
207. ಎಷ್ಟು ಮುಂದಿ ಹಗೆಗಳಿದ್ದರೂ ತಪ್ಪಿ ಬಾಳಬಹುದು; ದುಷ್ಕೃತ್ಯ ಎಂಬ ಹಗೆ ಮಾತ್ರ ಬೆಂಬಿಡದೆ ಬಂದು ಕೊಲ್ಲುವುದು.
208. ಒಬ್ಬನ ನೆಲಳು ಅವನ ಪಾದದಡಿಯಲ್ಲಿಯೇ ಸೇರಿಕೊಂಡಿರುವಂತೆ ಅವನ ದುಷ್ಕೃತ್ಯಗಳೂ ಅವನನ್ನು ಬೆಂಬಿಡದೆ ಅಳಿವಿಗೆ
         ಕಾರಣವಾಗುವುದು.
209. ಒಬ್ಬನು ತನ್ನ ಹಿತ ಬಯಸುವವನಾದರೆ, ಎಷ್ಟೇ ಅಲೊಅವಾದರೂ ಕೇಡಿನ ಪಾಲಿನಲ್ಲಿ ಪಾಲ್ಗೊಳ್ಳದಿರಲಿ.
210. ತಪ್ಪಾದ ಹಾದಿಯಲ್ಲಿ ನಡೆದು ಕೆಟ್ಟ ಕಾರ್ಯಗಳನ್ನು ಮಾಡುವುದಿಲ್ಲ ಎಂದಾದರೆ, ಅವನಿಗೆ ಕೇಡಿಲ್ಲ ಎಂಬುದನ್ನು ಅರಿತುಕೊಳ್ಳಬೇಕು.

ಅಧ್ಯಾಯ 22. ಉಪಕಾರ ತಿಳುವಳಿಕೆ

211. ಉಪಕಾರಕ್ಕೆ ಪ್ರತ್ಯುಪಕಾರದ ಹಂಗಿಲ್ಲ; ಮಳೆಯನ್ನು ಸುರಿಸುವ ಮೋಡಗಳಿಗೆ ಈ ಲೋಕದ ಮಾನವರು ಏನು ಉಪಕಾರ ತಾನೆ
         ಮಾಡಬಲ್ಲರು?
212. ತಾನು ಶ್ರಮದಿಂದ, ಸಂಪಾದಿಸಿ ಕೂಡಿಟ್ಟ ಹಣವೆಲ್ಲ ತಕ್ಕವರಿಗೆ ಉಪಕಾರ ಮಾಡುವುದಕ್ಕೇ ಇರುವುದು (ಎಂದು ತಿಳಿಯಬೇಕು)
213. ದೇವಲೋಕದಲ್ಲಿಯಾಗಲೀ, ಈ ಲೋಕದಲ್ಲಾಗಲೀ, ಉಪಕಾರಕ್ಕಿಂತ ಮಿಗಿಲಾದ ಒಳ್ಳೆಯ ಗುಣವನ್ನು ಪಡೆಯುವುದು ಕಷ್ಟ.
214. ಉಪಕಾರದ ನಡೆವಳಿಯನ್ನು ಅರಿತವನು ಮಾತ್ರ ತನ್ನ ಬಾಳನ್ನು ಸಾರ್ಥಕ ಪಡಿಸಿಕೊಳ್ಳುತ್ತಾನೆ; ಉಳಿದವರೆಲ್ಲ (ಬದುಕಿದ್ದೂ)
         ಸತ್ತ ಹಾಗೆಯೇ.
215. ಉಪಕಾರದಿಂದ ಲೋಕ ಕಲ್ಯಾಣವನ್ನು ಬಯಸುವ ಹಿರಿಯ ಅರಿವುಳ್ಳವನ ಸಿರಿಯು, ಊರಿನ ಕೆರೆಯ ನೀರು ತುಂಬಿಕೊಂಡು
         ಜನರಿಗೆ ಉಪಕಾರ ಮಾಡಿದುದಕ್ಕೆ ಸಮಾನವಾದುದು.
216. ಉಪಕಾರ ಮಾಡಲಾದ ಧರ್ಮಗುಣವುಳ್ಳವನ ಬಳಿ ಸಿರಿ ನೆಲೆಸಿದರೆ, ಫಲಿಸುವ ಮರವು ಊರ ನಡುವೆ ಇದ್ದು ಹಣ್ಣು ಬಿಟ್ಟಂತೆ.
217. ಉಪಕಾರವೇ ಮೊದಲಾದ ಹಿರಿಯ ಗುಣವುಳ್ಳವನ ಬಳಿ ಐಶ್ವರ್ಯವು ಬಂದು ನೆಲಸಿ ನಿಂತರೆ, ರೋಗರುಜಿನಗಳನ್ನು ಪರಿಹರಿಸುವ
         ಸಂಜೀವಿನಿ ಮರದಂತೆ (ಹತ್ತು ಜನರಿಗೆ ಪ್ರಯೋಜನ ದೊರೆಯುವುದು)
218. ಕರ್ತವ್ಯದರಿವಿನ ದೃಷ್ಟಿಯುಳ್ಳವರು, ಸಿರಿಯನ್ನು ಕೆಳೆದುಕೊಂಡ ಸಂಕಟ ಕಾಲದಲ್ಲೂ ಉಪಕಾರ ಮಾಡಲು ಹಿಂಜರಿಯುವುದಿಲ್ಲ.
219. ಉಪಕಾರ ಮಾಡುವ ಧರ್ಮಗುಣವುಳ್ಳವನು ಬಡವನಾಗಿದ್ದಲ್ಲಿ, ಅವನು ಮಾಡ ಬೇಕಾದ ಉಪಕಾರವನ್ನುಮಾಡಲಾರದೆ ದುಃಖಿಸುವ
         ಸ್ಥಿತಿಗೆ ಬರುವನು.
220. ಉಪಕಾರದ ನಡವಳಿಕೆಯಿಂದ ಒಬ್ಬನಿಗೆ ಕೇಡು ಒದುಗುವುದು ಎಂದಾದರೆ, ಅವನು ತನ್ನನ್ನು ಮಾರಿಕೊಂಡಾದರೂ ಅದನ್ನು
         ಸಂಪಾದಿಸತಕ್ಕದು.

ಅಧ್ಯಾಯ 23. ಕೊಡುಗೆ

221. ಬಡತನದಲ್ಲಿರುವವರಿಗೆ ಒಂದು ವಸ್ತುವನ್ನು ನೀಡಿದರೆ ಅದೇ ನಿಜವಾದ ಕೊಡುಗೆ; ಉಳಿದವರಿಗೆ ಕೊಡುವುದು ಎಲ್ಲ ಪ್ರತಿ ನಿರೀಕ್ಷಿಯಿಂದ
         ಕೊಟ್ಟ ಕೊಡುಗೆ ಎನಿಸಿಕೊಳ್ಳುವುದು.
222. ಬೇರೆಯವರಿಂದ ಬೇಡಿ ಪಡೆದುಕೊಳ್ಳುವುದು ಒಳ್ಳೆಯ ಮಾರ್ಗವೆಂದು ಹಲವರು ಹೇಳಿದರೂ ಅದು ಪಾಪಕರ; ಕೊಡುವುದರಿಂದ
         ಮೇಲುಲೋಕ (ಸ್ವರ್ಗ) ವು ತನಗೆ ಇಲ್ಲ ಎಂದರೂ ಈಯುವುದೇ ಒಳ್ಳೆಯ ಮಾರ್ಗ.
223. ತನ್ನಲ್ಲಿ ಏನು ಇಲ್ಲವಾದರೂ ಆ ದುಃಖವನ್ನು ಯಾರಲ್ಲಿಯೂಹೇಳಿಕೊಳ್ಳದೆ ಇತರರಿಗೆ ಕೊಡುವ ಗುಣವು ಕುಲವುಳ್ಳವನ
         ಲಕ್ಷಣವೆನಿಸಿಕೊಳ್ಳುವುದು.
224. ಬೇಡುವವರ ಆರ್ತತೆಯ ಅಹಿತರವಾದುದು; ಅವರ ಮನಸ್ಸು ತೃಪ್ತಿಯಾಗಿ ಮುಖವು ನಗೆಯಿಂದ ಅರಳುವವರೆಗೂ ಕೊಡುಗೈಯಿಂದ
         ಕೊಡಬೇಕು.
225. ತಪೋಬಲವೆಂದರೆ ಹಸಿವನ್ನು ಅಡಗಿಸಿಕೊಳ್ಳುವ ಶಕ್ತಿ. ಆದರೆ ಹಸಿವಿನಿಂದ ಕೆಂಗೆಟ್ಟವರಿಗೆ ಉಣವಿತ್ತು ಅವರ ಹಸಿವನ್ನು
         ಕಳೆಯುವುದರಿಂದ ಅದು ಎರೆಡನೆಯದು.
226. ಆರ್ತರಾದವರ ಕಡು ಹಸಿವನ್ನು ತೀರಿಸಬೇಕು; ಅದೇ ಪಡೆದವನು ತನ್ನ ಸಿರಿಯನ್ನು ಕೂಡಿಡುವ ನೆಲೆ.
227. ತಾನು ಪಡೆದ ಸೊತ್ತನ್ನು ಇತರರೊಡನೆ ಪಾಲ್ಗೊಂಡು ಉಣ್ಣುವವನನ್ನು ಹಸಿವೆನ್ನುವ ಕ್ರೂರ ಬಾಧೆ ತಟ್ಟುವುದಿಲ್ಲ.
228. ತಾವು ಗಳಿಸಿರುವ ಸೊತ್ತನ್ನು ಬಚ್ಚಿಟ್ಟು ಕಳೆಯುವ ಕಲ್ಲು ಮನಸ್ಸಿನವರು ಕೊಟ್ಟು ನಲಿಯುವ ಸುಖವನ್ನು ಅರಿಯಲಾರರೆ?
229. ಕೂಡಿಟ್ಟುದನ್ನು ಇತರರಿಗೆ ಕೊಡದೆ ತಾವೇ ತನಿಯಾಗಿ ಉಂಟು ಅನುಭವಿಸುವುದು, ಬೇಡಿ ಉಣ್ಣುವುದಕ್ಕಿಂತ ಕೀಳು.
230. ಸಾಯುವುದಕ್ಕಿಂತ ಸಂಕಟಕರವಾದುದು ಬೇರೆ ಇಲ್ಲ; ಆದರೆ ಕೊಡಲು ಸಾಧ್ಯವಾಗದಿರುವ ಕಡೆ ಆ ಸಾವೇ ಸುಖಕರವೆನಿಸುವುದು.

ಅಧ್ಯಾಯ 24. ಕೀರ್ತಿ

231. (ಕಷ್ಟದಲ್ಲಿರುವವರಿಗೆ) ಈವುದು, ಕೀರ್ತಿವಂತನಾಗಿ ಬಾಳುವುದು, ಇವಲ್ಲದೆ ಮಾನವನ ಬಾಳಿನಲ್ಲಿ ಬೇರೆ ಲಾಭವಿಲ್ಲ.
232. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರ ಕೀರ್ತಿಯನ್ನು ಲೋಕದಲ್ಲಿ ಎಲ್ಲರೂ ಹೋಗುತ್ತಾರೆ.
233. ಉನ್ನತವಾದ ಕೀರ್ತಿಯಲ್ಲದೆ, ಲೋಕದಲ್ಲಿ ಪ್ರತ್ಯೇಕವಾಗಿ ನಾಶವಿಲ್ಲದೆ ನೆಲೆ ನಿಲ್ಲುವಂಥ ವಸ್ತು ಬೇರೊಂದಿಲ್ಲ.
234. ಭೂಮಿಯುದ್ದಕ್ಕೂ, ನಿಡುಗಾಲ ನಿಲ್ಲುವ ಕೀರ್ತಿಯನ್ನು ಪಡೆದವರನ್ನಲ್ಲದೆ ಜ್ಞಾನಿಗಳನ್ನು (ದೇವತೆಗಳನ್ನು) ಕೀರ್ತಿಸದು ದೇವಲೋಕ.
235. ಕೀರ್ತಿಯಿಂದ ಗಳಿಸಿದ ಬಡತನ, ಶಾಶ್ವತವಾದ ಕೀರ್ತಿಯೊಡನೆ ಬರುವ ಸಾವು ಬಲ್ಲವರಿಗಲ್ಲದೆ ಬೇರೆಯವರಿಗೆ ಸಾಧ್ಯವಿಲ್ಲ.
236. ಹುಟ್ಟಿದರೆ ಹೊಗಳಿಕೆ (ಕೀರ್ತಿ) ಯೊಂದಿಗೆ ಹುಟ್ಟಬೇಕು. ಅದಿಲ್ಲವಾದರೆ ಹುಟ್ಟುವುದಕ್ಕಿಂತ ಹುಟ್ಟದಿರುವುದೇ ಲೇಸು.
237. ಕೀರ್ತಿ ಪಡೆಯುವಂತೆ, ಬಾಳದವರು, ತಮ್ಮ ಕುಂದಿಗೆ ತಾವೇ ನೊಂದು ಕೊಳ್ಳದೆ ತಮ್ಮನ್ನು ತೆಳೆಗುವ ಇತರರ ಮಾತಿಗೆ
         ನೊಂದುಕೊಳ್ಳುವುದು ಏಕೆ?
238. ತಮ್ಮ ನಂತರ ನಿಡುಗಾಲ ಉಳಿಯುವ ಕೀರ್ತಿ ಸಂತತಿಯನ್ನು ಗಳಿಸದೆ ಬಿಟ್ಟರೆ ಈ ಲೋಕದಲ್ಲಿ ಬಾಳುವವರಿಗೆ ಅದೇ ಕಳಂಕ
         ಎಂದು ಬಲ್ಲವರು ಹೇಳುತ್ತಾರೆ.
239. ಅಪಕೀರ್ತಿಯ ಶರೀರವನ್ನು ಹೊತ್ತುಕೊಮ್ಡಿರುವ ನೆಲದಲ್ಲಿ ಸಮೃದ್ಧ ಬೆಳೆಯೂ ಕುಂದಿ ನಾಶವಾಗಿ ಹೋಗುವುದು.
240. ಅಪಕೀರ್ತಿ ಅಳಿಯುವಂತೆ ಬದುಕುವವರೇ (ನಿಜವಾಗಿ) ಬಾಳುವವರು. ಅದಲ್ಲದೆ, ಕೀರ್ತಿ ಅಳಿಯುವಂತೆ ಬಾಳುವ ಜನರು
         (ಬದುಕಿದ್ದೂ) ಬಾಳದವರು.

ಅಧ್ಯಾಯ 25. ಕರುಣೆ ತೋರುವುದು.

241. ಕರುಣೆಯ ಸಿರಿಯು ಸಿರಿಯೊಳಗೆ ಸಿರಿಯೆನಿಸಿಕೊಳ್ಳುವುದು; ಹಣವಂತಿಕೆಯ ಸಿರಿಯು ಕೀಳಾದವರಲ್ಲಿಯೂ ಇರುವುದು.
242. ಒಳ್ಳೆಯ ಮಾರ್ಗದಿಂದ ಪರಿಶೀಲಿಸಿ, ಕರುಣೆಯಿಂದ ಬಾಳಬೇಕು; ಹಲವು ಮಾರ್ಗಗಳಿಂದ (ಬೇರೆ ಬೇರೆ ಧರ್ಮಗಳಿಂದ) ವಿಚಾರ ಮಾಡೀ
         ನೋಡಿದರೂ ಕರುಣೆಯೇ ಬಾಳಿಗೆ ಆಧಾರ.
243. ಕರುಣೆ ತುಂಬಿದ ಹೃದಯವುಳ್ಳವರಿಗೆ ಇರುಳು ತುಂಬಿದ ನರಕದ ಭಯವಿಲ್ಲ.
244. ಲೋಕದಲ್ಲಿ ಜೀವಿಸುವ ಪ್ರಾಣಿಗಳನ್ನು ಕಾಪಾಡಿ ಕರುಣೆ ತೋರುವವರಿಗೆ ತಮ್ಮ ಪ್ರಾಣಕ್ಕಂಜಬೇಕಾದ ದುಷ್ಕರ್ಮಗಳು
         ಬಾಧಿಸುವುದಿಲ್ಲ.
245. ಕರುಣೆ ತೋರಿ ಬಾಳುವವರಿಗೆ ದುಃಖ ಬಾಧಿಸುವುದಿಲ್ಲ; ಗಾಳಿ ಬೀಸುತ್ತ, ಸಸ್ಯಸಮೃದ್ಧವಾಗಿರುವ, ಈ ವಿಸ್ತಾರವಾದ ಭೂಲೋಕವೇ
         ಇದಕ್ಕೆ ಸಾಕ್ಷಿ.
246. (ಹಿಂದಿನ ಜನ್ಮದಲ್ಲಿ) ಸಾರವಸ್ತುವಾದ ಧರ್ಮವನ್ನು ತೋರೆದು ಬಾಳಿನ ಗುರಿಯನ್ನು ಮರೆತವರೇ ಈ ಜನ್ಮದಲ್ಲಿ ಕರುಣೆ ತೋರೆದು
         ದುಷ್ಕೃತ್ಯಗಳಲ್ಲಿ ತೊಡಗುವರು ಎಂದು ಬಲ್ಲವರು ಹೇಳುತ್ತಾರೆ.
247. ಹಣವಿಲ್ಲದವರಿಗೆ ಈ ಲೋಕದ ಸುಖವು ಲಭ್ಯವಾಗದಿರುವಂತೆ (ಪ್ರಾಣಿಗಳಿಲ್ಲ) ಕರುಣೆ ಇಲ್ಲದವರಿಗೆ ಮೇಲು ಲೋಕದ ಸುಖವೂ
         ಲಭ್ಯವಾಗುವುದಿಲ್ಲ.
248. ಸಿರಿ ಬತ್ತಿದವರು ಎಂದಾದರೊಮ್ಮೆ ಮತ್ತೆ ವೃದ್ದಿ ಪಡೆವರು, ಕರುಣೆ ಬತ್ತಿದವರು ಮಾತ್ರ ಬಾಳಿನ ಪ್ರಯೋಜನದಿಂದ ದೂರವಾದವರೇ,
         ಅವರು ಯಾವ ಕಾಲದಲ್ಲೂ ಕೀರ್ತಿವಂತರಾಗುವುದು ಸಾಧ್ಯವಿಲ್ಲ.
249. ಕರುಣೆ ತೋರದವನು ಆಚರಿಸುವ ಧರ್ಮವನ್ನು ಪರೀಕ್ಷಿಸಿ ನೋಡಿದರೆ, ಅದು ಅರಿವಿಲ್ಲದ ಬುದ್ದಿಗೇಡಿಯೊಬ್ಬನು ಸತ್ಯದ ತಿರುಳನ್ನು
         ಕಂಡು ಗ್ರಹಿಸಿದಂತೆ.
250. ತನಗಿಂತ ಬಲಹೀನರಾದವರನ್ನು ಪೀಡಿಸಲು ಮುಂದುವರಿಯುವಾಗ, ತನಗಿಂತ ಬಲಶಾಲಿಯಾದವರ ಮುಂದೆ ತನ್ನನ್ನು ಇರಿಸಿಕೊಂಡು
         ನೆನೆದುಕೊಳ್ಳಬೇಕು.

ಅಧ್ಯಾಯ 26. ಮಾಂಸ ತ್ಯಾಜ್ಯ

251. ತನ್ನ ಮೈ ಮಾಂಸವನ್ನು ಬೆಳಸಿಕೊಳ್ಳಲು ಇತರ ಪ್ರಾಣಿಗಳ ಮೈಮಾಂಸವನ್ನು ತಿನ್ನುವವನು ಹೇಗೆ ತಾನೆ ಕರುಣೆಯಿಂದ ಬಾಳಬಲ್ಲನು?
252. ಸಿರಿಯನ್ನು ಅನುಭವಿಸುವ ಫಲ ಅದನ್ನು ಕಾಪಾಡಿಕೊಳ್ಳಲಾರದವರಿಗೆ ಇಲ್ಲ; ಅದೇ ರೀತಿ, ಮಾಂಸ ತಿನ್ನುವವರಿಗೆ ಕರುಣೆಯಿಂದ
         ಉಂಟಾಗುವ ಫಲವೂ ಇಲ್ಲ.
253. ಒಂದು ಪ್ರಾಣಿಯ ಒಡಲಿನ ಸವಿಯನ್ನು ಉಂಟವರ ಮನಸ್ಸು, ಕೊಲೆಗತ್ತಿಯನ್ನು ಕೈಯಲ್ಲಿ ಹಿಡಿದ ಕಟುಕರ ಮನಸ್ಸಿನಂತೆ
         ಒಳ್ಳೆಯದನ್ನು ಎಣಿಸುವುದಿಲ್ಲ.
254. ಕರುಣೆ ಯಾವುದೆಂದರೆ ಒಂದು ಪ್ರಾಣಿಯನ್ನು ಕೊಲ್ಲದಿರುವುದು; ಕರುಣೆಯಲ್ಲದ್ದು ಯಾವುದೆಂದರೆ-ಕೊಲ್ಲುವುದು. ಆ ಕೊಂದ
         ಒಡಲಿನ ಮಾಂಸವನ್ನು ತಿನ್ನುವುದು ಧರ್ಮವಲ್ಲದ್ದು.
255. ಮಾಂಸವನ್ನು ಉಣ್ಣದಿರುವುದೇ ಪ್ರಾಣಿಗಳ ಉಸಿರ ನೆಲೆ. ಮಾಂಸವನ್ನು ತಿಂದರೆ, ನರಕವೂ ಕೊಡ ಅಂಥವರನ್ನು ಬಾಯಿ ತೆರೆದು
         ಹೊರಗೆ ಬಿಡುವುದಿಲ್ಲ.
256. ಮಾಂಸವನ್ನು ತಿನ್ನಬೇಕೆಂದ ಕಾರಣದಿಂದ ಲೋಕದ ಜನರು ಒಂದು ಪ್ರಾಣಿಯನ್ನು ಕೊಲ್ಲುವುದಿಲ್ಲ ಎಂದಾದರೆ, ಹಣದಾಸೆಗೆ ಅದನ್ನು
         ಮಾರುವವರೂ ಇಲ್ಲವಾಗುತ್ತಾರೆ.
257. ಮಂಸವನ್ನು ತಿನ್ನದಿರಬೇಕು; ವಿಚಾರ ಮಾಡಿ ನೋಡಿದರೆ, ಅದು ಬೇರೊಂದು ಪ್ರಾಣಿಯ ಒಡಲ ಹುಣ್ಣು ಎಂದು ಗೊತ್ತಾಗುವುದು.
258. ದೋಷಮುಕ್ತವಾದ ಅರಿವುಳ್ಳವರು ಒಂದು ಪ್ರಾಣಿಯ ಒಡಲಿಂದ ಹರಿದು ಬಂದ ಮಾಂಸವನ್ನು ತಿನ್ನುವುದಿಲ್ಲ.
259. ತುಪ್ಪ ಮೊದಲಾದ ದ್ರವ್ಯಗಳನ್ನು ಸುರಿದು ಮಾಡುವ ಸಾವಿರ ಯಾಗಗಳಿಗಿಂತ ಒಂದು ಪ್ರಾಣಿಯ ಒಡಲನ್ನು ಹರಿದು ತಿನ್ನುದಿರುವುದು
         ಮೇಲು.
260. ಕೊಲ್ಲದವನನ್ನೂ ಮಾಂಸ ತ್ಯಾಜ್ಯ ಮಾಡಿದವನನ್ನೂ ಎಲ್ಲಾ ಪ್ರಾಣಿಗಳೂ (ಭಕ್ತಿಯಿಂದ) ಕೈಜೋಡಿಸಿ ನಮಸ್ಕರಿಸುವುದು.

ಅಧ್ಯಾಯ 27. ತಮಮ್

 261. ಬಂದ ನೋವನ್ನು ತಾಳಿಕೊಳ್ಳುವುದು, ಇತರ ಪ್ರಾಣಿಗಳಿಗೆ ದುಃಖವುಂಟು ಮಾಡದಿರುವುದು, ಇವೇ ತಪಸ್ಸಿನ ಲಕ್ಷಣವೆನಿಸಿಕೊಳ್ಳುವುದು.
262. ತಪಸ್ಸು ಎನ್ನುವುದು ಅದನ್ನು ಪೂರ್ವಜನ್ಮದಲ್ಲಿ ಸಾಧಿಸಿದವರಿಗೆ ಮಾತ್ರ ಲಭ್ಯವಾಗುವುದು. ಪೂರ್ವಸಿದ್ದಿ ಇಲ್ಲದವರು ಅದನ್ನು
         ಕೈಗೊಂಡರೆ ಅದು ಬಿಷ್ಫಲವಾಗುವುದು.
263. ಎಲ್ಲವನ್ನೂ ತೊರೆದು ತಪಸ್ಸಿಗೆ ಕುಳಿತವರಿಗೆ, ಆಹಾರ ಮೊದಲಾದವನ್ನು ನೀಡಿ ನೆರವಾಗಬೇಕೆಂದು ಬಯಸಿ ತಪಸ್ವಿಗಳಾಗದೆ
         ಉಳಿದವರು (ಆಂದರೆ ಗೃಹಸ್ಧರು) ತಪಸ್ಸನ್ನು ಮರೆತಿದ್ದಾರೆಯಾ?
264. ಒಲ್ಲದವರನ್ನು ಅಡಗಿಸುವುದಾಗಲೀ. ಒಲಿದವರನ್ನು ಮೇಲೆತ್ತುವುದಾಗಲೀ, ನೆನೆದ ಮಾತ್ರಕ್ಕೆ ತಪೋಬಲದಿಂದ ಸಾಧ್ಯವಾಗುವುದು.
265. ತಪಸ್ಸಿನಿಂದ ಬೇಡಿದ ಫಲಗಳನ್ನು ಬೇಡಿದಂತೆಯೇ ಪಡೆಯಲು ಸಾಧ್ಯವಾಗುವುದರಿಂದ, ಆ ತಪಸ್ಸನ್ನು ಇಲ್ಲಿಯೇ (ಈ ಜನ್ಮದಲ್ಲಿಯೇ)
         ಸಾಧಿಸಿಕೊಳ್ಳಬೇಕು.
266. ತಪಸ್ಸು ಮಾಡುವವರು ತಮ್ಮ ಕರ್ಮಗಳನ್ನು ಸರಿಯಾದ ರೀತಿಯಲ್ಲಿ ಮಾಡುತ್ತಾರೆ. ಮತ್ತಲ್ಲದವರು, ಅತಿಯಾಶೆಗೊಳಗಾಗಿ ಹೀನ
         ಕೆಲಸಗಳನ್ನು ಮಾಡುತ್ತಾರೆ.
267. ಪುಟವಿಟ್ಟಂತೆಲ್ಲ ಚಿನ್ನವು ಹೆಚ್ಚು ಹೊಳೆಯುವುದು; ಅದರಂತೆ ತಪಸ್ಸಿಗಳು ಹೆಚ್ಚು ಕಷ್ಟಕ್ಕೀಡಾದಂತೆಲ್ಲ ಆತ್ಮಬಲ ವರ್ಧಿಸುತ್ತದೆ
268. ತಪೋಬಲದಿಂದ ಮೋಹವನ್ನು ಕತ್ತರಿಸಿಕೊಂಡು, ತನ್ನ ಪ್ರಾಣವನ್ನು (ಆತ್ಮ ಬಲವನ್ನು) ಸಂಪೂರ್ಣವಾಗಿ ಹತೋಟೆಯಲ್ಲಿಟ್ಟು
         ಕೊಂಡವನನ್ನು ಲೋಕದಲ್ಲಿರುವ ಜೀವಿಗಳೆಲ್ಲ ತಲೆಬಾಗಿ ವಂದಿಸುವುವು.
269. ತಪಸ್ಸಿನ ಬಲವನ್ನು ಸಾಧಿಸಿಕೊಂಡವರಿಗೆ ಮೃತ್ಯುವನ್ನು ಮೆಟ್ಟಿ ಗೆಲ್ಲುವುದೂ ಸಾಧ್ಯವಾಗುತ್ತದೆ.
270. ಈ ಲೋಕದಲ್ಲಿ ಇಲ್ಲದವರೇ ಹೆಚ್ಚು ಮಂದಿ, ಉಳ್ಳವರು ಕೆಲವೇ ಮಂದಿ; ಇದಕ್ಕೆ ಕಾರಣ ತಪಸ್ಸನ್ನಾಚರಿಸುವವರು ಕೆಲವೇ
         ಮಂದಿಯಾಗಿ ಬಹುಪಾಲು ಜನ ತಪಸ್ಸಿನಿಂದ ದೂರವಾಗಿರುವುದೇ.

ಅಧ್ಯಾಯ- 28- ಅನುಚಿತ ನಡೆವಳಿಕೆ

 271. ವಂಚನೆಯ ಮನಸ್ಸುಳ್ಳವನ ಹುಸಿ ನಡೆವಳಿಕೆಯನ್ನು ಕಂಡು ಅವನ ಶರೀರ ದೊಳಗಿರುವ ಪಂಚಭೂತಗಳು ತಮ್ಮೊಳಗೇ ನಗುತ್ತವೆ.
272. ತಾನು ತಿಳಿದ ಅಪರಾಧಗಳಲ್ಲಿ ಮನಸ್ಸನ್ನು ತೊಡಗಿಸಿದರೆ, ಬಾನಿನೆತ್ತರದ ತೋರಿಕೆಯ ಬದುಕು ಇದ್ದರೂ ಅದು ಏನು ಫಲ
         ಸಾಧಿಸಬಲ್ಲುದು?(ಅದು ವ್ಯರ್ಥ ಬದುಕು ಎನಿಸಿಕೊಳ್ಳುತ್ತದೆ.
273. ಮನಸ್ಸನ್ನು ಇಂದ್ರಿಯಗಳ ಆಸೆಗಳಿಂದ ಅಡಗಿಸುವ ಬಲವಿಲ್ಲದವನು ಕೈಗೊಂಡ ಕಠಿಣ ತಪಸ್ಸು, ಹಸು ಚರ್ಮವನ್ನು ಹೊದ್ದುಕೊಂಡು
         ಹುಲ್ಲು ಮೇಯವಂತೆ, ಅಭಾಸಸಕರವಾದದ್ದು.
274. ತಪಶ್ಶಕ್ತೀಯ ಮರೆಯಲ್ಲಿ ಸಲ್ಲದ ಕೀಳು ಕೆಲಸಗಳನ್ನು ಮಾಡುವುದು, ಪೋದರ ಮರೆಯಲ್ಲಿ ಅವಿತುಕೊಂಡು ಬೇಡನು ಹಕ್ಕಿಗಳನ್ನು
         ಬಲೆಬೀಸಿ ಹಿಡಿದಂತೆ.
275. "ಆಶೆಗಳನ್ನು ತೊರೆದಿದ್ದೇವೆ" ಎಂದುಕೊಳ್ಳುವವರ ಹುಸಿ ನಡವಳಿಕೆಯು, "ನಾವು ಎಂಥ ತಪ್ಪು ಮಾಡಿದೆವು" ಎಂದು ಚಿಂತಿಸುವಂತೆ,
         ಹಲವು ತೆರದ ದುಃಖಗಳನ್ನು ಉಂಟು ಮಾಡುವುದು.
276. ಮನಸ್ಸಿನಲ್ಲಿ (ಆಶೆಗಳನ್ನು) ತೊರೆಯದೆ, ತೊರೆದವರಂತೆ ನಟಿಸುತ್ತ ವಂಚಿಸಿ ಬಾಳುವವರಿಗಿಂತ, ಕ್ರೂರ ಮನಸ್ಸಿನವರು ಬೇರೆ ಇಲ್ಲ.
277. ಹೊರಗೆ ತೋರಿಕೆಗೆ ಗುಲಗುಂಜಿ ಮಣಿಯಂತೆ ಕೆಂಪಾಗಿ ಕಂಡರೂ ಮನಸ್ಸಿನೊಳಗೆ ಆ ಮಣಿಯ ತಾದಿಯಲ್ಲಿರುವ ಕಪ್ಪಿನಂತೆ
         ತೋರಿಕೊಳ್ಳುವವರೂ ಈ ಲೋಕದಲ್ಲಿ ಇದ್ದಾರೆ.
278. ಮನಸ್ಸಿನೊಳಗೆ ಕೊಳೆ ತುಂಬಿಕೊಂಡು ಮಹಾಮಹಿಮರಂತೆ ನೀರಲ್ಲಿ ಮುಳುಗಿ ಏಳುವ ವಂಚನೆಯ ಬದುಕುಳ್ಳವರು ಈ ಲೋಕದಲ್ಲಿ
         ಹಲವರಿದ್ದಾರೆ.
279. ಬಾಣವು ನೋಡಲು ನೇರವಾಗಿದ್ದರೂ ಅದರ ಗುಣ ಕೊಂಕು, ಕ್ರೂರ. ವೀಣೆಯ ತೋರಿಕೆಯಲ್ಲಿ ದೊಂಕಾಗಿದ್ದರೂ ಅದು ಇಂಪು. ಅದೇ
         ರೀತಿಯಲ್ಲಿ ಜನರ ಗುಣಗಳನ್ನು ಅವರವರ ನಡವಳಿಕೆಯಿಂದ ಅರಿಯಬೇಕು.
280. ಲೋಕವು ನಿಂದಿಸುವ ಕೆಟ್ಟ ನಡವಳಿಕೆಯನ್ನು ಬಿಟ್ಟುಬಿಟ್ಟರೆ, ತಮ್ಮ ವೈರಾಗ್ಯವನ್ನು ಸೂಚಿಸಲು, ತಲೆ ಬೋಳಿಸಿಕೊಳ್ಳುವುದಾಗಲೀ,
         ಜಟೆ ಬೆಳೆಸುವುದಾಗಲೀ ಬೇಕಿಲ್ಲ.

ಅಧ್ಯಾಯ 29. ಕಳದಿರುವುದು

 281. ಇತರರ ದೃಷ್ಟಿಯಲ್ಲಿ ಕೀಳಾಗಬಾರದೆಂದು ಬಯಸುವವನು, ಅತಿ ಸಣ್ಣವಸ್ತುವವನ್ನೂ ವಂಚಿಸಿ ಕದಿಯದಿರುವಂತೆ ತನ್ನ ಮನಸ್ಸನ್ನು
         ಕಾಪಾಡಿಕೊಳ್ಳಬೇಕು.
282. ಮನಸ್ಸಿನಿಂದ ಕೆಟ್ಟದನ್ನು ನೆನೆಯುವುದೂ ಪಾಪವೇ; ಅದರಿಂದ ಹೆರರ ಒಡವೆಯನ್ನು ಅವರಿಗೆ ಗೊತ್ತಿಲ್ಲದಂತೆ "ಅಪಹರಿಸೋಣ" ಎಂಬ
         ಭಾವನೆ ಮನಸ್ಸಿನಲ್ಲಿ ಬಾರದಂತಿರಬೇಕು.
283. ಕಳವಿನಿಂದ ಉಂಟಾದ ಸಂಪತ್ತು, ಬೆಳೆಯುವಂತೆ ತೋರಿ ಕೊನೆಗೆ ಸಂಪೂರ್ಣ ನಾಶವಾಗುವುದು.
284. ಕಳವಿನಿಂದ ಹೆರರ ಸಂಪತ್ತನ್ನು ದಕ್ಕಿಸಿಕೊಳ್ಳುವುದರಲ್ಲಿ ಪಕ್ವವಾದ ಒಲವು ಪರಿಣಾಮದಲ್ಲಿ ಕೊನೆಯಿಲ್ಲದ ದುಃಖವನ್ನು ತರುವುದು.
285. ಪರರ ಒಡವೆಯನ್ನು ಕಬಳಿಸಲು ಎಣಿಸಿ ಅದರು ಮೈಮರೆವುದನ್ನೇ ಎದುರು ನೋಡುವವರ ಬಳಿ ಕರುಣೆಯಿಂದ ಪ್ರೀತಿ ತೋರುವ ಗುಣ
         ಇರುವುದಿಲ್ಲ.
286. ಕಳ್ಳತನದಿಂದ ಪರರ ಸೊತ್ತನ್ನು ವಂಚಿಸುವುದರಿಲ್ಲ ನುರಿತ ಒಲವುಳ್ಳವರು ವಿವೇಕದಿಂದ ಧರ್ಮಮಾರ್ಗದಲ್ಲಿ ನಡೆಯಲಾರರು.
287. ಕಳ್ಳತನಕ್ಕೆ ಕಾರಣವಾದ ಕತ್ತಲೆಯ ಅರಿವು (ವ್ಯಾಮೋಹ), ವಿವೇಕದ ಬಲವನ್ನು ಬಯಸುವವರಲ್ಲಿ ಇರುವುದಿಲ್ಲ.
288. ವಿವೇಕವುಳ್ಳವರ ಹೃದಯದಲ್ಲಿ ಧರ್ಮವು ನೆಲೆಯೂರಿರುವಂತೆ, ಕಳ್ಳರ ಹೃದಯದಲ್ಲಿ ವಂಚನೆಯು ನೆಲೆಯೂರಿರುತ್ತದೆ.
289. ವಂಚನೆಯಲ್ಲದೆ ಬೇರೆ ಒಳ್ಳೆಯ ಮಾರ್ಗಗಳನ್ನು ಅರಿಯದವರು, ವಿವೇಕವಲ್ಲದ ಕಾರ್ಯಗಳನ್ನು ಮಾಡಿ ಒಡನೆಯೇ ಕೆಟ್ಟು
         ನಾಶವಾಗುವವರು.
290. ಕಳ್ಳತನ ಮಾಡುವವರಿಗೆ ಭೂಮಿಯಲ್ಲಿ ಉಸಿರೊಂದಿಗೆ ಬಾಳುವ ನೆಲೆಯೂ ತಪ್ಪಿಹೋಗುತ್ತದೆ. ಕಳ್ಳತನ ಮಾಡದವರನ್ನು
         ದೇವಲೋಕವೂ ಆದರಿಸುತ್ತದೆ.

ಅಧ್ಯಾಯ 30. ನಿಜ ಹೇಳುವುದು.

 291. ಯಾವೊಂದೂ ಕೆಡುಕಿಲ್ಲದ ಸೊಲ್ಲುಗಳನ್ನು ಆಡುವುದೇ ನಿಜ ಎನಿಸಿಕೊಳ್ಳುತ್ತದೆ.
292. ದೋಷವಿಲ್ಲದ ಒಳ್ಳೆಯತನವು, ಒಂದು ಸುಳ್ಳೀನಿಂದ ಫಲಿಸುವುದಾದರೆ, ಆಡಿದ ಸುಳ್ಳೂ ನಿಜದ ಸಾಲಿಗೇ ಸೇರುತ್ತದೆ.
293. ತನ್ನ ಮನಸ್ಸು ಅರಿತ ವಿಷಯಗಳಲ್ಲಿ ಒಬ್ಬನು ಸುಳ್ಳಾಡಬಾರದು; ಹಾಗೆ ಸುಳ್ಳಾಡಿದರೆ ಅವನ ಮನಸ್ಸೇ ಸಾಕ್ಷಿಯಾಗಿ ನಿಂತು ಅವನನ್ನು
         ಸುಡುತ್ತದೆ.
294. ಒಬ್ಬನು ಮನಸ್ಸಿನಿಂದ ಸುಳ್ಳಾಡದೆ ಒಳ್ಳೆಯ ರೀತಿಯಲ್ಲಿ ನಡೆದುಕೊಂಡರೆ, ಅವನು ಲೋಕದ ಜನರೆಲ್ಲರ ಮನಸ್ಸಿನಲ್ಲಿ
         ನೆಲೆಯಾಗುವನು.
295. ಒಬ್ಬನು ಮನಃಪೂರ್ವಕವಾಗಿ ನಿಜವಾಡುವುದಾದರೆ, ಅವನು ತಪಸ್ಸು ಮಾಡಿ, ದಾನಧರ್ಮಗಳನ್ನು ನಡೆಸುವವರಿಗಿಂತ ಮೇಲಾದವನು
         ಎನಿಸಿಕೊಳ್ಳುತ್ತಾನೆ.
296. ಸುಳ್ಳಾಡದೆ ಬಾಳುವುದಕ್ಕಿಂತ ಮಿಗಿಲಾದ ಕೀರ್ತಿ ಬೇರಿಲ್ಲ; ಅದು ಅವನಿಗೆ ಅರಿವಿಲ್ಲದಂತೆಯೇ ಎಲಾ ಧರ್ಮಗಳ ಫಲವನ್ನೂ
         ನೀಡುವುದು.
297. ಸುಳ್ಳಾಡದಿರುವುದನ್ನು ತಪ್ಪದೆ ನಡೆಸಿಕೊಂಡು ಬಂದಲ್ಲಿ ಬೇರೆ ಧರ್ಮಗಳನ್ನು ಆಚರಿಸದಿದ್ದರೂ ಬಾಧಕವಿಲ್ಲ.
298. ಬಹಿರಂಗ ಶುದ್ಧಿ ನೀರಿನಿಂದ ಉಂಟಾಗುತ್ತದೆ; ಅಂತರಂಗ ಶುದ್ಧಿ ಸತ್ಯವಂತಿಗೆಯಿಂದುಂಟಾಗುವುದು.
299. ಹೊರಗಿನ ಕತ್ತಲೆಯನ್ನು ಹೋಗಲಾಡಿಸುವ ಬೆಳಕು ಬೆಳಕಲ್ಲ; ಅರಿವುಳ್ಳ ಜ್ಞಾನಿಗಳಿಗೆ ಸುಳ್ಳಾಡದಿರುವುದೇ ನಿಜವಾದ ಬೆಳಕು.
300. (ಧರ್ಮಗ್ರಂಥಗಳ ಆಧಾರದಿಂದ) ನಾವು ನಿಜವೆಂದು ಕಂಡ ವಸ್ತುಗಳಲ್ಲಿ ಸತ್ಯಶೀಲತೆಗಿಂತ ಮೇಲ್ಮೆಯುಳ್ಳದು ಬೇರೆ ಯಾವುದೂ ಇಲ್ಲ.

No comments:

Post a Comment