Sunday 1 August 2010

ತಿರುಕ್ಕುಱಳ್: ಅಧ್ಯಾಯ 119-128



Thirukkural in Kannada
ತಿರುಕ್ಕುಱಳ್ (ಹೊಸಗನ್ನಡ ಅನುವಾದಗಳೊಂದಿಗೆ)



ಕಾಮ ವಿಭಾಗ: ಅಧ್ಯಾಯ: 119-128

ಅಧ್ಯಾಯ 119. ವಿವರ್ಣ ವೇದನೆ


1181. ನನ್ನನ್ನು ಪ್ರೀತಿಸಿದ ನಲ್ಲನಿಗೆ ನನ್ನಿಂದ ಅಗಲಿರಲು ಅನುಮತಿ ನೀಡಿದೆ ಆದರೆ ವಿವರ್ಣವಾದ ನನ್ನ ಸ್ಥಿತಿಯನ್ನು ಮತ್ತೆ
         
ಯಾರಿಗೆ ಹೇಳಿಕೊಳ್ಳಲಿ?
1182. ಅವರು (ಇನಿಯರು) ಕೊಟ್ಟರು ಎನ್ನುವ ಗರ್ವದಿಂದ ವೈವರ್ಣ್ಯವು ನನ್ನ ಒಡಲಿನ ಮೇಲೇರಿ, ಸವಾರಿ ಮಾಡುತ್ತಿದೆ.
1183. ಅವರು ಕಾಮವೇದನೆಯನ್ನೂ, ವೈವರ್ಣ್ಯವನ್ನೂ ನನಗೆ ಕೊಟ್ಟು ಅದಕ್ಕೆ ಪ್ರತಿಯಾಗಿ (ನನ್ನ) ಸೌಂದರ್ಯ, ನಾಚಿಕೆಗಳನ್ನು
         
ಕಸಿದುಕೊಂಡರು.
1184. ನಾನು ಅವರ ಇನಿಮಾತುಗಳನ್ನೇ ನೆನೆಯುತ್ತೆನೆ; ಅವರ ಸ್ವಭಾವ ಗುಣಗಳನ್ನು ಕುರಿತು (ಸಖಿಯರೆದುರು) ಹೇಳುತ್ತಿರುತ್ತೇನೆ;
         
ಆದರೂ ವಿವರ್ಣತೆ ನನ್ನನ್ನಾವಂಸುತ್ತಿದೆ. ಇದೇನು ವಂಚನೆಯೋ ತಿಳಿಯದಾಗಿದೆ.
1185. ಅದೋ ನೋಡು! ನನ್ನ ಇನಿಯನು ಅಗಲಿ ಹೋಗುತ್ತಿದ್ದಾನೆ! ಇದೋ ನೋಡು! ನನ್ನ ಶರೀರವು ವೈವರ್ಣ್ಯವನ್ನು ತಾಳುತ್ತಿದೆ!
1186. ಬೆಳಕಿನ ನಾಶವನ್ನೇ ಎದುರು ನೋಡುವ ಇರುಳಿನಂತೆ, ಇನಿಯನ ಅಪ್ಪುಗೆಯ ನಡಲಿಕೆಯನ್ನೇ ಎದುರು ನೋಡುತ್ತಿದೆ ವೈವರ್ಣ್ಯವು.
1187. ನಾನು (ನಲ್ಲನನ್ನು) ಅಪ್ಪಿಕೊಂಡೆ, ಹಾಗೆಯೇ ತುಸು ಪಕ್ಕಕ್ಕೆ ಸರಿದೆ. ಅಷ್ಟರಲ್ಲಿಯೇ ವಶಪಡಿಸಿಕೊಳ್ಳುವ ಆತುರದಿಂದ ವಿವರ್ಣ್ಯವು
         
ನನ್ನನ್ನು ಆವರಿಸಿಕೊಂಡಿತು.
1188. (ನೋಡುವವರು) ಇವಳು (ಚಿಂತೆಯಿಂದ) ವಿವರ್ಣಳಾಗಿದ್ದಾಳೆ ಎನ್ನುವರಲ್ಲದೆ, ಅವರು (ನನ್ನನ್ನು) (ನಿರ್ದಯ ಮನಸ್ಕರಾಗಿ)
         
ತೊರೆದು ಹೋದರು ಎಂದು ಹೇಳುವವರು ಯಾರೂ ಇಲ್ಲ.
1189. ನನ್ನನ್ನು ವಿರಹಕ್ಕೆ ಒಪ್ಪಿಸಿದ ನಲ್ಲನು ಇಂದು ಕುಶಲವಾಗಿರುವರು ಎಂದಾದಲ್ಲಿ ನನ್ನ ಶರೀರವು ನಿಜವಾಗಿ ವೈವರ್ಣ್ಯವನ್ನು ತಾಳಲಿ.
1190. ನನ್ನನ್ನು ನಯವಾದ ಮಾತುಗಳಿಂದ ಒಪ್ಪಿಸಿ (ವಿರಹಕ್ಕೆ ಕಾರಣನಾದ) ನಲ್ಲನ ನಿರ್ದಯತೆಯನ್ನು ಇತರರು ದೂರುವುದಿಲ್ಲ
         
ಎನ್ನುವುದಾದರೆ, ನಾನು ವಿವರ್ಣಳಾಗಿದ್ದೇನೆಂಬ ಆಕ್ಷೇಪವನ್ನು ಹೊರುವುದೇ ಲೇಸು!

ಅಧ್ಯಾಯ 120. ಏಕಾಂತ ದುಃಖ

1191. ತಾವು ಪ್ರೀತಿಸಿದ ಇನಿಯರ ಪ್ರೇಮವನ್ನು ಪಡೆದ ಕಾಮಿನಿಯರು, ಕಾಮ ವೇದನೆಯೆಂಬ ಬೀಜವಿಲ್ಲದ ಹಣ್ಣನ್ನು ಸವಿದ
         
ಅದೃಷ್ಟಶಾಲಿಗಳು.
1192. ಒಲಿದ ನೆಲ್ಲೆಗೆ ಪ್ರಿಯತಮನು ಒಲಿದು ಅರ್ಪಿಸುವ ಪ್ರೀತಿಯು, ತನ್ನ ನಿರೀಕ್ಷೆಯಲ್ಲಿ ಬಾಳುವ ಮಾನವ ಕುಲಕ್ಕೆ ಮಳೆ ಸುಖ
         
ನೀಡಿದಂತೆ.
1193. ತಾವೊಲಿದ ಇನಿಯರಿಂದ ಅನುರಾಗದ ಸುಖ ಪಡೆದ ಕಾಮಿನಿಯರಿಗೆ ಮಾತ್ರ ತಾವು ಕೂಡಿ ಬಾಳಿ ಸುಖಿಸುತ್ತೇವೆಂಬ
         
ಗರ್ವವಿರುತ್ತದೆ.
1194. ತಾವೊಲಿದ ಇನಿಯನ ಅನುರಾಗಕ್ಕೆ ಪಾತ್ರರಾಗದ ಪ್ರೇಯಸಿಯರು ಪತಿವ್ರತೆಯರಿಂದ ಪ್ರಶಂಸೆಗೆ ಪಾತ್ರರಾದರೂ ನತದೃಷ್ಟರೇ!
1195. ನನು ಮೆಚ್ಚಿ ಒಲಿದವನು ನನ್ನನ್ನು ಮೆಚ್ಚಿ ಒಲಿಯದಿದ್ದರೆ ಅವನು ನಮಗೇನು ಸಂತೋಷ ಕೊಡಬಲ್ಲನು?
1196. ಕಾಮವು ಒಂದು ಪಕ್ಕವಾಗಿದ್ದರೆ, ದುಃಖವುಂಟು ಮಾಡೂವುದು. ಕಾವಡಿಯ ಭಾರದಂತೆ ಎರಡು ಪಕ್ಕದಲ್ಲೂ ಸಮವಾಗಿ
         
ಇದ್ದರೆ ಅದು ಸವಿಯುಂಟು ಮಾಡೂವುದು.
1197. ಕಾಮನು ಒಬ್ಬರ ಪಕ್ಷದಲ್ಲಿಯೇ ನೆಲೆಯಾಗಿ ನಿಂತು ನೋವು ವ್ಯರ್ಥಗಳನ್ನು ತಂದೊಡ್ಡುತ್ತಿರುವನು! ಅದು ಅವನಿಗೆ
         
ಗೊತಾಗದಷ್ಟು ನಿರ್ದಯನೆ ಅವನು?
1198. ಇನಿಯನ ಇನಿಮಾತುಗಳನ್ನು ಕಿವಿಯಾರ ಕೇಳದೆ ಲೋಕದಲ್ಲಿ ಬಾಳುವ ಕಾಮಿನಿಯರಿಗಿಂತ ಕಲ್ಲೆದೆಯವರು ಬೇರಿಲ್ಲ!
1199. ನನ್ನ ಪ್ರೀಯಿಗೆ ಪಾತ್ರರಾದವರು ನನ್ನನ್ನು ಪ್ರೀತಿಸದಿದ್ದರೂ ಅವರ ಪರವಾದ ಹೊಗಳಿಕೆಯು ನನ್ನ ಕಿವಿಗೆ ಇಂಪಾಗಿರುವುದು.
1200. ಪ್ರೀತಿರಹಿತರಾಗಿ ನಿನ್ನನ್ನಗಲಿ ದೂರ ಹೋದವನ ಬಳಿ ನಿನ್ನ ವೇದನೆಯನ್ನು ಹೇಳಿಕೊಳ್ಳಲು ಆತುರಪಡುತ್ತಿರುವೆಯಲ್ಲ ಮನಸ್ಸೆ!
         
ಅದಕ್ಕಿಂತ ನಿನ್ನ ದುಃಖವನ್ನು ಹೆಚ್ಚಿಸುವ ಕಡಲನ್ನೆ ಅರಿಸುವುದು ಒಳಿತು!

ಅಧ್ಯಾಯ 121. ನೆನೆದವರ ಶೋಕ

1201. (ಮನಸ್ಸಿನಲ್ಲಿ) ನೆನೆದರೆ ಸಾಕು, ತೀರದ ಅತಿಶಯವಾದ ಅನಂದವನ್ನು ಕಾಮವು ಊಟುಮಾಡುವುದರಿಂದ (ಅದು)
         
ಕಳ್ಳಿಗಿಂತ ಸವಿತಾದುದು.
1202. ತಾವು ಪ್ರೀತಿಸುವವರನ್ನು ನೆನೆಯುವುದರಿಂದ, ವಿರಹದಿದುಂಟಾಗುವ ಸಂಕಟವು ಇಲ್ಲವಾಗುವುದು; ಅದರಿಂದ ಎಲ್ಲಾ ವಿಧದಲ್ಲಿಯೂ
         
ಕಾಮವೆಮಧುರವಾದುದಲ್ಲವೇ?
1203. ನನಗೆ ನೀನು ಬರುವ ಹಾಗ ತೋರಿ ಹಾಗೆ ಅಡಗಿ ಹೋಗುತ್ತಿದೆ. ಹಾಗೇ ಇನಿಯನೂ ನನ್ನನ್ನು ನೆನೆಯುವಂತೆ ನಟಿಸಿ ನೆನೆಯದೆ
         
ಇರುವರೋ ಏನೋ!
1204. ಹಾಯ್! ನನ್ನ ಹೃದಯದಲ್ಲಿ ನಾನೊಲಿದ ನಲ್ಲನು ನೆಲೆಸಿರುವಂತೆ, ಅವನ ಹೃದಯದಲ್ಲಿ ಕೂಡ ನಾನು ನೆಲಸಿರಬಹುದಲ್ಲವೆ?
1205. ತಮ್ಮ ಹೃದಯದಲ್ಲಿ ನಾನು ಪ್ರವೇಶಿಸದಂತೆ ಕಾವಲಿಟ್ಟವರು, ನನ್ನ ಹೃದಯದೊಳಗೆ ಸತತವಾಗಿ ಬರಲು ಅವರಿಗೆ ನಾಚಿಕೆ
         
ಎನಿಸುವುದಿಲ್ಲವೆ?
1206. ಅವರೊಂದಿಗೆ ಸಂಪರ್ಕ ಹೊಂದಿದ (ಮಧುರ) ದಿನಗಳನ್ನು ನೆನೆಯುತ್ತಿರುಉದರಿಂದ ನಾನಿನ್ನೂ ಜೀವಿಸಿದ್ದೇನೆ. (ಇಲ್ಲವಾದರೆ)
         
ನಾನು ಹೇಗೆ ಜೀವಿಸಿರಲಿ?
1207. ನಾನವನನ್ನು ಮರೆತರೆ ಏನಾಗಬಲ್ಲೆ! (ಅದರಿಂದಲೇ) ನಾನು ಅವನನ್ನು ಮರೆಯಲಾರೆ! ಅವನನ್ನು ನೆನೆಸಿಕೊಂಡರೂ ಮನಸ್ಸು
         
ಸುಡುತ್ತದೆ!
1208. ನಾನವರನ್ನು ಎಷ್ಟು ನೆನೆಸಿಕೊಂಡರೂ ಕೂಡ, ಅವರು ಕೋಪಿಸಿಕೊಳ್ಳುವುದಿಲ್ಲ! ನನ್ನ ಕಾದಲರು ತೋರುವ ಕೃಪೆ ಅಷ್ಟೊಂದು.
1209. ನಾವಿಬ್ಬರೂ ಬೇರಲ್ಲ ಒಂದು ಅಗಲುವ ಮುಂದೆ ಹೇಳಿದ (ನನ್ನ) ಕಾಲದರ ಕ್ರೂರ ಸ್ವಭಾವವನ್ನು ನೆನೆದು ನನ್ನ ಪ್ರಿಯ ಜೀವವು
         
ವ್ಯರ್ಥವಾಗುತ್ತಿದೆ!
1210. ತಣ್ಣದಿರನೇ ನೀನು (ನೂರ್ಗಾಲ) ಬಾಳು! ನನ್ನ ಅಂತರಂಗವನ್ನಗಲದೆ, ನನ್ನನ್ನು ಬಿಟ್ಟು ಹೋದವರನ್ನು ನಾನು ಕಾಣುವ ತನಕ
         
ನೀನು ಮರೆಯಾಗಬೇಡ!

ಅಧ್ಯಾಯ 122. ಕನಸಿನ ನೆಲೆಯನ್ನು ಒರೆಯುವುದು.

1211. (ನಾನು ವಿರಹದಲ್ಲಿ ಸೊರಗಿ ಮಲಗಿರುವಾಗ) ಪ್ರಿಯತಮನ ಸಂದೇಶದೊಡನೆ ಬಂದ ಕನಸಿಗೆ ತಕ್ಕ ರೀತಿಯಲ್ಲಿ
         
ಸನ್ಮಾನವನ್ನು ಹೇಗೆ ಮಾಡೂವುದೇನೋ!
1212. ನನ್ನ ಕಪ್ಪಾದ ಮೀನ್ಗಣ್ಣುಗಳು ನನ್ನ ಕೋರಿಕೆಯಂತೆ ನಿದ್ರಾವಶವಾದರೆ, ಕನಸಿನಲ್ಲಿ ಸಂಧಿಸುವ ನನ್ನ ಪ್ರಿಯತಮನಿಗೆ ನಾನು
         
ವಿರಹವೇದನೆಯಲ್ಲಿ ಪಾರಾಗಿ ಉಳಿದಿರುವ ಸಂಗತಿಯನ್ನು ಸಾರಿ ಹೇಳುವನು.
1213. ನನಸಿದಲ್ಲಿ ನನ್ನನ್ನು ಪ್ರೀತಿಸದ ಪ್ರಿಯತಮನನ್ನು ಕನಸಿನಲ್ಲಿ ಕಾಣುವುದರಿಂದಲೇ ನಾನು ಜೀವಂತವಾಗಿ ಉಳಿದಿದ್ದೇನೆ.
1214. ನನಸಿನಲ್ಲಿ ನನ್ನನ್ನು ಪ್ರೀತಿಸದ ಪ್ರಿಯತಮನನ್ನು ಕನಸಿದಲ್ಲಿ ಆರಸಿ ಕರೆದುಕೊಂಡು ಬರುವುರಿಂದಲೇ ನನಗೆ
         
ಕನಸಿನಿಂದ ಕಾಮಸುಖವುಂಟಾಗುತ್ತಿದೆ.
1215. (ಹಿಂದೆ) ನನಸಿನಲ್ಲಿ ಪ್ರಿಯತಮನನ್ನು ಕಾಣುವಾಗ ಉಂಟಾದ ಮಧುರ ಅನುಭವವೇ ಕನಸಿನಲ್ಲಿ ಅವನನ್ನು ಕಾಣುವಾಗಲೂ
         
ನನಗೆ ಸಿಗುತ್ತಿದೆ!
1216. ನನಸು ಎನ್ನುವ ಸ್ಥಿತಿಯೊಂದು ಇಲ್ಲ ಎಂದಾದರೆ ಕನಸಿನಲ್ಲಿ ಕೊಡಿದ ನನ್ನ ಪ್ರಿಯತಮನು ನನ್ನನ್ನು ತೊರೆದು ಎಂದಿಗೂ
         
ಆಗುವುದಿಲ್ಲ.
1217. ನನಸಿನಲ್ಲಿ ಪ್ರೀತಿಯ ಕರುಣೆ ತೋರದ ಕಠಿಣ ಮನಸ್ಸುಳ್ಳ ಪ್ರಿಯತಮನು ಕಾಸಿನಲ್ಲಿ (ಮಾತ್ರ) ಬಂದು ನನ್ನನ್ನು ಪೀಡಿಸುವುದೇಕೆ?
1218. ನಾನು ನಿದ್ರಿಸಿರುವಾಗ (ಕನಸಿನಲ್ಲಿ ಬಂದು) ನನ್ನ ತೋಳ ಮೇಲೆ ಒರಗಿದವರು, ನನಗೆ ಎಚ್ಚರವಾದೊಡನೆಯೇ ತ್ವರೆಯಾಗಿ
         
ಬಂದು ನನ್ನ ಹೃದಯದಲ್ಲಿ ಸೇರಿಕೊಳ್ಳುವರು.
1219. ಪ್ರೇಮದ ಅನುಭವವಿಲ್ಲದೆ, ಕನಸಿನಲ್ಲಿ ಇನಿಯನನ್ನು ಕಾಣಲಾರದ ಬೆಡಗಿಯರು, ನನಸಿನಲ್ಲಿ ನನಗೆ ಪ್ರೇಮವನ್ನು ಕರುಣಿಸದ
         
ನಲ್ಲನ ಕಲ್ಲೆದೆಯನ್ನು ಕುರಿತು ನಿಂದಿಸಿ ಆಡುವರು.
1220. ನನಸಿನಲ್ಲಿ ನನ್ನನ್ನು ಅವರು ತೊರೆದು ಹೋದರೆಂದು ಊರವರು ನಿಂದಿಸಿ ಮಾತಾಡುವರಲ್ಲ! ನನ್ನ ಕನಸಿನಲ್ಲಿ ಅವರು
         
ಬಂದು ಹೋಗುವುದನ್ನು ಕಾಣಲಾರರೆ?

ಅಧ್ಯಾಯ 123. ಸಂಜೆ ವೇಳೆಯನ್ನು ಕಂಡು ದುಃಖ ಪಡುವುದು.

1221. ಸಂಧ್ಯಾ ಸಮಯವೇ ನೀನು ನೂರ್ಗಾಲ ಬಾಳು! ನೀನು ಸಂಧ್ಯಾ ಕಾಲವೆ? ಅಲ್ಲ, ವಿರಹದಿಂದ ಸೊರಗಿದ ವಿವಾಹಿತ ಸ್ತ್ರೀಯರ
         
ಪ್ರಾಣವನ್ನು ಹೀರುವ ಪ್ರಳಯ ಕಾಲ ನೀನು!
1222. ಮರುಳು ಸಂಧ್ಯಾ ಸಮಯವೇ ನೀನು ನನ್ನಂತೆ ಮ್ಲಾನವಾಗಿ ದುಃಖಿಸುತ್ತರುವೆಯಲ್ಲ! ನಿನ್ನ ಒಡನಾಡಿಯೂ ನನ್ನ ಇನಿಯನಂತೆ
         
ಕಠಿಣ ಮನಸ್ಕನಾದ ನಿರ್ದಯಿಯೋ!
1223. (ಇನಿಯನೊಡಗೂಡಿ ಇರುವಾಗ) ಹನಿದೋರಿ ಹಸಿರು ಹೊದ್ದು ಬರುತ್ತಿದ್ದೆ ಸಂಧ್ಯಾ ಸಮಯವು ಇಂದು ಜುಗ್ಯ್ಪ್ಸೆ ತೋರಿ ದುಃಖವನ್ನು
         
ಹೆಚ್ಚಿಸಲು ಬರುತ್ತಿದೆ.
1224. ನನ್ನ ಇನಿಯನು ಇಲ್ಲದ ಸಮಯದಲ್ಲಿ ಸಂಧ್ಯೆಯು ವಧ್ಯಸ್ಥಾನಕ್ಕೆ ಕಟುಕನು ಬರುವಂತೆ ಆಗಮಿಸುತ್ತಿದೆ!
1225. ನಾನು ಪ್ರಾತಃಕಾಲ ಸಮಯಕ್ಕೆ ಮಾಡಿದ ಒಳಿತೇನು? (ನನ್ನನ್ನು ದುಃಖಕ್ಕೀಡು ಮಾಡುತ್ತಿರುವ) ಸಂಧ್ಯಾ ಸಮಯಕ್ಕೆ
         
ಮಾಡಿದ ಕೆಡುಕೇನು?
1226. ಸಂಧ್ಯಾ ಸಮಯವು (ಇಪ್ಪೊಂದು) ದುಃಖವುಂಟು ಮಾಡಬಲ್ಲುದೆಂಬುದನ್ನು ಇನಿಯನು ನನ್ನನ್ನು ಬಿಟ್ಟು ಅಗಲದೆ ನನ್ನ
         
ಬಳಿಯಲ್ಲೇ ಇರುವಾಗ ನಾನು ಅರಿಯಲಿಲ್ಲ.
1227. ಕಾಮವೇದನೆಯು, ಪ್ರಾತಃಕಾಲದಲ್ಲಿ ಮೊಗ್ಗಾಗಿ ಮೊಳೆತು, ಹಗಲೆಲ್ಲ ಬೆಳೆದು, ಸಾಯು ಸಮಯದಲ್ಲಿ (ಹೂವಾಗಿ)
         
ಅರಳಿಕೊಳ್ಳುವುದು.
1228. ಕುರುಂಬನ ಕೊಳಲದನಿಯು, ಕಿಚ್ಚಿನಂತೆ ವ್ಯಾಪಿಸುತ್ತ ಸಂಕಟಪಡಿಸುವ ಸಾಯುಕಾಲಕ್ಕೆದೂತನಾಗಿ, ನನ್ನನ್ನು ಕೊಲ್ಲಲು
         
ಬರುವ ಪಡೆಯನ್ನು ಹೋಲುತ್ತಿದೆ.
1229. ಸಂಧ್ಯಾ ಕಾಲವು, ಚಿತ್ತಭ್ರಮೆಯನ್ನು ಕವಿಸಿವ ರೋತಿಯಲ್ಲಿ ಹರಡುತ್ತಿರುವಾಗ ನನ್ನಂತೆ ಊರೆಲ್ಲವು ಚಿತ್ತ ವಿಕಲ್ಪದಿಂದ
         
ದುಃಖವನ್ನು ಅನುಭವಿಸುತ್ತಿದೆ.
1230. ಇನಿಯನ ವಿರಹದಿಂದ ಇದುವರೆಗೆ ನಶಿಸದೆ ಉಳಿದಿರುವ ನನ್ನ ಪ್ರಾಣವು, ಹಣದ ಗಳಿಕೆಯೇ ಮುಖ್ಯವಾಗಿ ಅಗಲಿದ
         
ಅವನನ್ನು ನೆನೆನೆನೆದು, ಕೃಶವಾಗಿ, ಮರುಳು ಹಿಡಿಸುವ ಸಂಧ್ಯೆಯ ಹೊತ್ತಿನಲ್ಲಿ ಹಾರಿಹೋಗುತ್ತಿದೆ!

ಅಧ್ಯಾಯ 124. ಅಂಗಗಳು ಕೃಶವಾಗುವುದು.

1231. ನಮ್ಮನ್ನು ವಿರಹ ದುಃಖವು ಬಾಧಿಸುವಂತೆ, ಬಹು ದೂರ ಅಗಲಿ ಹೋದ ನಿನ್ನ ಪ್ರಿಯತಮಯನ್ನು ನೆನೆದು ಅತ್ತು
         
ಸೊರಗಿರುವ ನಿನ್ನ ಕಣ್ಣುಗಳು; ಸೌಂದರ್ಯವನ್ನು ಕಳೆದುಕೊಂಡು, ನರುಗುಂಪಿನ ಹೊಗಳನ್ನು ಕಂಡು ನಾಚಿಗೊಳ್ಳುತ್ತಿವೆ.
1232. ಹಳದಿ ಬಣ್ಣವನ್ನು ತಾಳಿ ಕಂಬಿನ ಸುರಿಸುವ ನಿನ್ನ ಕಣ್ಣುಗಳು, ನಾವು ಕೋರಿದ ಪ್ರಿಯತಮನು ಪ್ರೀತಿ ತೋರದ  ನಿಲುವನ್ನು
         
ಸಾರಿ ಹೇಳುವಂತಿವೆ.
1233. ವಿವಾಹ ಬಂಧನದಿಂದ ಕೂಡಿದ್ದ ದಿನಗಳಲ್ಲಿ ಉಬ್ಬಿ ಪುಷ್ಪವಾಗಿದ್ದ ನಿನ್ನ ತೋಳುಗಳು, ಈಗ ಪ್ರಿಯತಮನ ವಿರಹವನ್ನು
         
ಸೂಚಿಸುತ್ತಿವೆಯೇ ಎಂಬಂತೆಕೃಶಗೊಂಡಿವೆ.
1234. ಬಾಳ ಸಂಗಾತಿಯಾಗಿದ್ದ ಇನಿಯನ ಅಗಲಿಕೆಯಿಂದ ಹಿಂದಿನ ಕಾಂತಿಯನ್ನು ಕಳೆದುಕೊಂಡು ಬಾಡಿದ ನಿನ್ನ ತೋಳುಗಳು,
         
ಪುಷ್ಪವಾದ ಮಾಂಸಲ ಭಾಗವಿಲ್ಲದೆ ತೊಟ್ಟ ಚಿಮ್ಮದ ಬಳೆಗಳು ಸಡಿಲಗೊಂಡು ಜಾರುತ್ತಿವೆ!
1235. ಬಳೆಗಳು ಸಡಿಲವಾಗಿ ಹಿಂದಿನ ಚೆಲುವಳಿದು ಬಾಡಿದ ನಿನ್ನ ತೋಳುಗಳು (ನಿನ್ನ ದುಃಖವನ್ನು ಗ್ರಹಿಸದೆ) ನಿರ್ದಯನಾದ
         
ಇನಿಯನ ಹೃದಯದ ಕಾಠಿಣ್ಯವನ್ನು ಸಾರಿ ಹೇಳುತ್ತಿವೆ.
1236. ಬಳೆಗಳು ಸಡಿಲವಾಗುವಂತೆ ತೋಳುಗಳು ಕೃಶವಾದುದರಿಂದ, ನೀನು ನನ್ನ ಇನಿಯನನ್ನು ನಿರ್ದಯನೆಂದು ಹೇಳುವುದನ್ನು
         
ಕೇಳಿ ನಾನು ದುಃಖಪಡುತ್ತಿದ್ದೇನೆ.
1237. ನನ್ನ ಹೃದಯವೇ! ನಿರ್ದಯನಾದ ಇನಿಯನಿಗೆ ನನ್ನ ಕೃಶವಾದ ತೋಳುಗಳ ಗೋಳನ್ನು ಒರೆದು ಪುಣ್ಯವನ್ನು
         
ಕಟ್ಟಿಕೊಳ್ಳಲಾರೆಯಾ?
1238. ಅಪ್ಪಿಕೊಂಡ ನನ್ನ ಕೈಗಳನ್ನು ಸಡಿಲಿಸಿದೊಡನೆಯೇ ಚಿನ್ನದ ಬಳೆಗಳನ್ನು ತೊಟ್ಟ ಕಾಮಿನಿಯ ನೊಸಲು (ಅಲ್ಪ ವಿರಹವನ್ನೂ
         
ಸಹಿಸಲಾರದೆ) ವಿವರ್ಣವಾಯಿತು.
1239. ಆಲಿಂಗನದ ಎಡೆಯಲ್ಲಿ ತಣ್ಣೆಲರು ನುಸುಳಿ ಮ್ಬಂದೊಡನೆಯೇ (ಅದನ್ನು ಸಹಿಸಲಾರದೆ), ಕಾಮಿನಿಯ ನೀಲಮೇಘವನ್ನು
         
ಹೋಲುವ ಕಣ್ಣುಗಳು ವಿವರ್ಣವನ್ನು ತಾಳಿದುವು.
1240. ಕಾದಲೆಯ ಕಾಂತಿಯುಕ್ತವಾದ ನೊಸಲು ವಿವರ್ಣವಾದುದನ್ನು ಕಂಡು, ಅವಳ ಕಣ್ಣುಗಳ ವೈವರ್ಣ್ಯವೂ ದುಃಖವನ್ನು ತಾಳಿತ್ತಲ್ಲವೆ?

ಅಧ್ಯಾಯ 125. ಸ್ವಗತ ಸಂಭಾಷಣೆ

1241. ಮನಸ್ಸೇ, ಸಹಿಸಲಾರದ  ವಿರಹ ಯಾತನೆಯನ್ನು ಪರಿಹರಿಸುವ ಮದ್ದೊಂದನ್ನು ನೀನು ಆಲೋಚಿಸಿ ಹೇಳಲಾರೆಯಾ?
1242. ನನ್ನ ಮನಸ್ಸೇ ನೀನು ಬಾಳು! ಅವರು ಪ್ರೀತಿತಿಲ್ಲದವರಾಗಿರುವಾಗ ನೀನು ಮಾತ್ರ ಅವರಿಗಾಗಿ ವ್ಯಥೆ ಪಡುತ್ತಿರುವುದು
         
ನಿನ್ನ ಮೂರ್ಖತನವಲ್ಲವೆ!
1243. ಮನಸ್ಸೇ, ನನ್ನೊಡನಿದ್ದು ನೀನು ಅವರನ್ನು ನೆನೆದು ದುಃಖಿಸುವುದೇಕೆ ದಾರುಣವಾದ ಯಾತನೆಯನ್ನುಂಟು
         
ಮಾಡಿದ ಅವರಲ್ಲಿ (ಸ್ವಲ್ಪ ಮಾತ್ರವೂ) ಪ್ರೇಮ ಸ್ಮರಣೆ ಇಲ್ಲವಲ್ಲ!
1244. ಮನಸ್ಸೇ! ನೀನು ಅವರ ಬಳಿ ಸಾರುವಾಗ ನನ್ನ ಕಣ್ಣುಗಳನ್ನೂ ಕರೆದುಕೊಂಡು ಹೋಗು! ಅವರನ್ನು ಕಾಣಬೇಕೆಂಬ ತವಕದಿಂದ
         
ಇವು ನನ್ನನ್ನು ಹಿಡಿದು ತಿನ್ನುತ್ತಿವೆ.
1245. ಮನಸ್ಸೇ! ನಾವು ಪ್ರೀತಿ ತೋರಿದರೂ, ನಮ್ಮನ್ನು ಪ್ರೀತಿಸದ ಅವರು ನಿರ್ದಯರೆಂದು ಅವರನ್ನು ಕೈಬಿಡಲು ಸಾಧ್ಯವೆ?
1246. ಮನಸ್ಸೆ! ಹಿಂದೆ ನೀನು ಕಾಮಾತುರತೆಯಿಂದ ಕೂಡಿ ರಮಿಸಲು ಬಂದ ಇನಿಯನನ್ನು ಕಂಡಾಗಲೆಲ್ಲ ಹುಸಿ ಮುನಿಸಿನಿಂದ
         
ದೂರ ಸರಿಯುತ್ತದ್ದೆ! ಈಗ ಆಗಲಿಕೆಯಲ್ಲೂ ಅದೇ ಹುಸಿ ಮುನಿಸನ್ನು ಪ್ರಕಟಿಸುತ್ತಿರುವೆಯಲ್ಲ!
1247. ಮೃದು ಮನಸ್ಸೇ, ಅವರ ಮೇಲಿನ ಮೋಹವನ್ನು ತೊರೆದುಬಿಡು; ಇಲ್ಲವೇ ನಾಚಿಕೆಯನ್ನು ಬಿಟ್ಟುಬಿಡು, ಇವೆರಡನ್ನೂ
         
ಒಟ್ಟಿಗೇ ಸಹಿಸಿಕೊಳ್ಳೂವ ಶಕ್ತಿ ನನ್ನಲ್ಲಿ ಇಲ್ಲವಾಗಿದೆ.
1248. ಮನಸ್ಸೇ! ವಿರಹದಲ್ಲಿ ತೊಳಲಿದ ನಮ್ಮನ್ನು ಇನಿಯನು ಬಂದು ಕರುಣೆ ತೋರಿ ರಮಿಸಲಿಲ್ಲವೆಂದು ಕೊರಗುವ ನೀನು,
         
ದೂರವಾದ ಅವರ ಹಿಂದೆಯೇ ಸಾರುತ್ತಿರುವೆಯಲ್ಲ! ನೀನೊಂದು ಪೆದ್ದು!
1249. ಮನಸ್ಸೇ! ಇನಿಯನು ನಿನ್ನಲ್ಲಿಯೇ ನೆಲಸಿರುವಾಗ, ಅವರನ್ನು ನೆನೆದು ನೀನು ಯಾರ ಬಳಿಗೆ ಸಾರುತ್ತಿರುವೆ?
1250. ನಮ್ಮೊಡನೆ ಕೂಡಿರಲಾರದೆ ತೊರೆದು ಹೋದ ಪ್ರಿಯತಮನನ್ನು ಅಂತರಂಗದಲ್ಲಿ ಅಡಗಿಸಿಟ್ಟುಕೊಂಡುದರಿಂದ,
         
ಮೊದಲು ಕಳಿದುಕೊಂಡ ಅಂಗಲಾವಣ್ಯದೊಂದಿಗೆ, ಮನನಲ್ಲಿವೂ ನಾಶವಾಗುತ್ತಿದೆ.

ಅಧ್ಯಾಯ 126. ಸಂಯಮ ಸಡಿಲಿಕೆ

1251. ಲಜ್ಜೆಯೆನ್ನುವ ಕೀಲಿ ಹಾಕಿದ ಸಂಯಮದ ಬಾಗಿಲನ್ನು ಕಾಮವೆಂಬ ಕೊಡಲಿಯು ಒಡೆದು ಹಾಕುತ್ತದೆ. (ಕಾಮವು ಲಜ್ಜೆಯನ್ನು
         
ಅತಿಕ್ರಮಿಸಿ ಸಂಯಮವನ್ನೂ ಸಡಿಲಿಸುತ್ತದೆ ಎಂದು ಭಾವ)
1252. ಎಲ್ಲರೂ ವಿಶ್ರಾಂತಿ ಹೊಂದಿರುವ ನಡು ರಾತ್ರಿಯಲ್ಲೂ ನನ್ನ ಮನಸ್ಸನ್ನು (ಹಿಂಸಿಸಿ) ದುಡಿಸಿಕೊಳ್ಳುತ್ತಿರುವ ಕಾಮಕ್ಕೆ
         
ಕಣ್ಣಿಲ್ಲವೆಂಬುದು ದಿಟ!
1253. ನಾನೋ ಕಾಮವನ್ನು (ಮನಸ್ಸಿನಾಳದಲ್ಲಿ) ಮರೆಸಿಕೊಳ್ಳಲೆತ್ತಿಸುತ್ತಿದ್ದೇನೆ. ಆದರೆ ಅದು ಯಾವ ಸೂಚನೆಯೂ ಇಲ್ಲದೆ
          (
ಸೀನಿನಂತೆ) ತನ್ನನ್ನು ಒಮ್ಮೆಲೇ ಹೊರಗೆ ತೋರ್ಪಡಿಸಿಕೊಳ್ಳುತ್ತಿದೆ.
1254. ನಾನೋ ಇದುವರೆಗೆ ಸಂಯಮದಿಂದ ಇರುವುದಾಗಿ ತಿಳಿದುಕೊಂಡಿದ್ದೆ; ಆದರೆ ನನ್ನ ಕಾಮವು ಮರೆಯನ್ನು ಹಿರಿದು
         
ಬಹಿರಂಗವಾಗಿ ಬಯಲು ಮಾಡಿಕೊಳ್ಳುತ್ತಿದೆ.
1255. ತಮ್ಮನ್ನು ಹಗೆಯಂತೆ ಅಗಲಿದ ಪ್ರಿಯತಮನ ಹಿಂದೆ ಹೋಗದೆ, ಅಭಿಮಾನವನ್ನು ಕಾಪಾಡಿಕೊಳ್ಳುವುದು
         
ಕಾಮವೇದನೆಗೊಳಗಾದವರಲ್ಲಿ ಸಾಧ್ಯವಿಲ್ಲ.
1256. ಪ್ರೇಯಸಿಯನ್ನು ತೊರೆದು ಹೋದ ಇನಿಯನ ಹಿಂದ ಸಾರಲು ಬಯಸಿದ ನೆಲೆಯಲ್ಲಿರುವ ನನ್ನ ದುರ್ಬರವಾದ ಕಾಮ
         
ವೇದನೆಯು ಎಷ್ಟು ಸುಕುಮಾರವಾದುದೋ!
1257. ಇನಿಯನು ಪ್ರೇಮಾತುರನಾಗಿ ನನಗೆ ಇಷ್ಟವಾಗುವಂತಹ ಎಸಕಗೆಳನ್ನು ಮಾಡುವವನಾದರೆ, ನಾನು ನಾಚಿಕೆಯನ್ನು
         
ತೊರೆದು ಇರಬಲ್ಲೆನು.
1258. ನಮ್ಮ ಕೆಣ್ತಿನದ ಸಂಯಮ ಎಂಬ ಕೋಟೆಯನ್ನು ಭೀತಿಸಬಲ್ಲ ಪಡೆಯುದರೆ, ಕಪಟ ನಾಟಕ ಸೂತ್ರಧಾರಿಯಾದ ಪ್ರಿಯತಮನ
         
ರಮಿಸುವ ಮೇಲ್ವಾತಗಳಲ್ಲವೆ?
1259. ಅವರನ್ನು ದ್ವೇಷಿಸುತ್ತೇನೆಂದುಕೊಂಡು ಅವರಿಂದ ದೂರ ಸಾರಿದೆ; ಆದರೆ ನನ್ನ ಮನಸ್ಸು ಅವರೊಡನೆ ಕೂಡಲು
         
ತವಕಗೊಳ್ಳುತ್ತಿರುವುದನ್ನು ಅರಿತು ಬಿಳಿಸಾರಿ ಅಪ್ಪಿಕೊಂಡೆ.
1260. ಬೆಂಕಿಯಲ್ಲಿ ಕೊಬ್ಬನ್ನು ಇಟ್ಟ ಹಾಗಿರುವ ನನ್ನಂಥ ಹೃದಯವುಳ್ಳವರಿಗೆ ಅವರನ್ನು ಕೂಡಿ, ಮತ್ತೆ ಮುನಿಸಿಕೊಂಡು ಇರ್ಯ್ತ್ತೇನೆಂದು ಹೇಳಿಕೊಳ್ಳುವ ಶಕ್ತಿಯುಂಟೆ.

ಅಧ್ಯಾಯ 127. ಒಬ್ಬರನ್ನೊಬ್ಬರು ಬಯಸುವುದು.

1261. ನನ್ನ ಕಣ್ಣುಗಳು ಅವರು ಬರುವ ಹಾದಿಯನ್ನು ನಿರೀಕ್ಷಿಸಿ ಕಾಂತಿಗುಂದಿ ಅಂದಗೆಟ್ಟಿವೆ; ಬೆರಳುಗಳು ಅವರು ಹೋದ
         
ದಿನಗಳನ್ನು ಎಣಿಸಿ ಎಣಿಸಿ ಸವೆದುಹೋಗಿವೆ.
1262. ಸಖೀ, ಕಾದಲರನ್ನು ನಾನಿಂದು ಮರೆತರೆ, ನನ್ನ ತೋಳುಗಳು ಅಂದಗೆಟ್ಟು ಅಲಂಕರಿಸಿರುವ ಆಭರಣಗಳು ಕಳಚಿ
         
ಸಡಿಲಗೊಂಡು ಜಾರುತ್ತವೆ.
1263. ನನ್ನ ಪ್ರೀತಿಯನ್ನು ನೆಚ್ಚದೆ, ಯುದ್ಧದಲ್ಲಿ ಗೆಲವನ್ನು ನೆಚ್ಚಿ ಮನೋಬಲವನ್ನೇ ಬೆಂಬಲವಾಗಿಟ್ಟುಕೊಂಡು, ಹೊರ ನಾಡೀಗೆ
         
ಹೋದ ಇನಿಯನ ಪುನರಾಗ ಮನವನ್ನೇ ನಿರೀಕ್ಷಿಸುತ್ತ ಇನ್ನೂ ಉಸಿರು ಹಿಡಿದು ಬದುಕ್ಕಿದ್ದೇನೆ.
1264. ನನ್ನನ್ನಗಲಿ ದೂರವಾದವರು, ತುಂಬಿದ ಒಲವಿನೊಡನೆ ಮತ್ತೆ ಬರುವುದನ್ನು ನೆನೆ ನೆನೆದು, ನನ್ನ ಮನಸ್ಸು ಮೇಲೆ ಮೇಲೆ
         
ಉಬ್ಬಿ ನಲಿದಾಡುತ್ತಿದೆ.
1265. ಇನಿಯನನ್ನು ನಾನು ಕಣ್ಣು ತಣಿಯುವರೆಗೂ ಕಾಣುವವಳಾಗೆಬೇಕು; ಆಗಲಿ ನನ್ನ ನಳಿದೊಳುಗಳ ಪೇಲವತೆಯು
         
ಮಾಯವಾಗುವುದು.
1266. ನನ್ನ ಪ್ರಿಯನು ಒಂದು ದಿನ ನನ್ನೆಡೆಗೆ ಬರಲಿ; ನನ್ನ ವಿರಹದ ನೋವೆಲ್ಲ ತೀರುವಂತೆ ನಾನವನ ಪ್ರೇಮಾಮೃತವನ್ನು ಹೀರಿ
         
ಸವಿದು ನಲಿದಾಡುತ್ತೇನೆ!
1267. ನನ್ನ ಕಣ್ಣುಗಳಂತಿರುವ ಪ್ರಿಯತಮನು ಹಿಂತಿರುಗಿ ಬರುವವನಾದರೆ, ಅವನೊಡನೆ ಮುನಿಸಿಕೊಳ್ಳಲೇ, ಅಪ್ಪಿಕೊಳ್ಳಲೇ
         
ಇಲ್ಲವೇ ಎರಡನ್ನೂ ಮಾಡಲೇ?
1268. ಅರಸನು ಕಾರ್ಯಮುಖನಾಗಿ ಯುದ್ಧದಲ್ಲಿ ಬೇಗ ಜಯಗಳಿಸಲಿ; ದಿನದ ಸಂಜೆ, ನಾನು ಮನವಿಯೊಡಗೂಡಿ ಸುಖಸಿ
         
ಸಂಭ್ಯಮದಿಂದ ಔತಣ ನಡೆಸುತ್ತೇನೆ.
1269. ದೂರದ ನಾಡಿಗೆ ಹೋಗಿರುವ ಪ್ರಿಯನು ಬರುವ ಕಾಲವನ್ನು ನೆನೆಯುತ್ತೆ ವೇದನೆಗೊಳಗಾದ ನಲ್ಲೆಯರಿಗೆ, ಒಂದು ದಿನವು
         
ಏಳು ದಿನಗಳಂತೆ ಕಳೆಯುವುದು.
1270. ವಿರಹ ತಾಪವನ್ನು ತಾಳಲಾರದೆ, ನನ್ನ ಪ್ರಿಯತಮೆಯು ಹೃದಯವು ಒಡೆದು ಅಸುವಳಿದರೆ ಅವಳನ್ನು ಪಡೆದು, ಕೂಡಿ
         
ಸುಖಿಸಿ ಅನುಭವಿಸುವುದೇನು?

ಅಧ್ಯಾಯ 128. ಸಂಕೇತವನ್ನು ಗ್ರಹಿಸುವುದು

1271. ನೀನು ಹೇಳದೆಯೇ ಮರೆಮಾಚಿದರೂ, ನಿನ್ನದೆಯುಳವು ಮೀರಿ ನಿನ್ನ ಕಾಡೀಗೆ ಕಣ್ಣುಗಳು ಹೇಳಬಯಸುವ
         
ಸಂದೇಶವೊಂದು ಉಂಟು.
1272. ಕಣ್ಣುಂಬುವ ಚೆಲುವು, ಬಿದಿರಿನಂಥ ತೋಳುಗಳನ್ನು ಪಡೆದಿರುವ ನನ್ನ ಮುಗುಂದೆಗೆ, ಹೆಣ್ತನವು ತುಂಬಿ ಸೂಸುವ ಗುಣವು
         
ಮೆಗಿಲಾಗಿರುವುದು.
1273. (ಮಾಲೆಯಾಗಿ ಕೋದ) ರತ್ನಗಳಲ್ಲಿ ಕಾಂತಿ ಹೊಮ್ಮಿಸುವ ನೂಲಿನಂತೆ, ನನ್ನ ಪ್ರೇಯಸಿಯ ಚೆಲುವಿನಲ್ಲಿ ಕೂಡ ಕಾಂತಿ
         
ಸೂಸುವುದೊಂದು ವ್ಯಕ್ತವಾಗುತ್ತಿದೆ.
1274. ಮಿಗಿದ ಮೊಗ್ಗಿನಲ್ಲಿ ಅಡಗಿರುವ ಸುವಾಸನೆಯಂತಿರುವುದೊಂದು ನನ್ನ ಪ್ರೇಯಸಿಯ ನಗೆ ಮೊಗ್ಗಿನಲ್ಲಿ ವ್ಯಕ್ತವಾಗುತ್ತಿದೆ!
1275. ಒತ್ತಾಗಿ ಬಳೆಗಳನ್ನು ಧರಿಸಿದ ನನ್ನ ಚೆಲುವೆಯು ತನ್ನ ಭಾವನೆಗಳನ್ನು ಮರೆಸಿ ಮಾಡಿ ಹೋದ ಕಳ್ಳಸನ್ನೆಯಲ್ಲಿ, ನನ್ನ
         
ಅತೀವವಾದ ದುಃಖವನ್ನು ತೀರಿಸುವ ದಿವ್ಯೌಷಧವಿದೆ.
1276. ಬಹುಕಾಲದ ನಿರೀಕ್ಷೆಯ ನಂತರೆ, ಪ್ರಿಯತಮನೊಂದಿಗೆ ನಲಿದು ಕೂಡಿ ಪಡೆದ ಕಾಮಸುಖದಲ್ಲಿ ಕೂಡ, ಅವರು ವಿರಹದಲ್ಲಿ
         
ತೋರಿದ ಪ್ರೇಮಶೂನ್ಯವಾದ ಕಾಥಿಣ್ಯವನ್ನು ನೆನೆಯುವಂತೆ ಮಾಡುತ್ತಿದೆ.
1277. ತಣ್ಣನೆಯ ಕಡಲನ್ನಾಳುವ ಇನಿಯನ ಅಗಲಿಕೆಯನ್ನು ನಮಗಿಂತ ಮುಂದಾಗಿ ನನ್ನ ಬಳೆಗಳು ಗ್ರಹಿಸಿ, ಸಡಿಲವಾದುವು
         
ಅಲವೆ?
1278. ನನ್ನ ಪ್ರಿಯತಮನು ನಿನ್ನೆ ತಾನೇ ನನ್ನನ್ನು ಅಗಲಿ ಹೊರಟು ಹೋದರು ಆದರೆ, ಏಳು ದಿನಗಳು ಕಳೆದಂತೆ ನನ್ನೊಡಲು
         
ಪೇಲವಗೊಂಡಿದೆ.
1279. ಅಗಲಿ ದೂರ ಹೋಗುವ ನಿನ್ನ ನಿರ್ಧಾರವನ್ನು ತಿಳಿದೊಡನೆಯೇ (ಸಡಿಲವಾದ) ತನ್ನ ಬಳೆಗಳನ್ನು ನೋಡಿದಳು, ತನ್ನ
         
ನಳಿದೊಳುಗಳನ್ನು ನೋಡಿದಳು, ತನ್ನ ಮೆಲ್ಲಡಿಗಳನ್ನು ನೋಡಿದಳು. ಇಷ್ಟೇ ನನ್ನ ಗೆಳತಿ ಅಲ್ಲಿ ಮಾಡೀದ ಕುರಿಪುಗಳು.
1280. ತನ್ನ ಕಣ್ಣುಗಳಿಂದಲೇ ಪ್ರೇಮದ ವೇದನೆಯನ್ನು ಸೂಚಿಸಿ, ಇನಿಯನನ್ನು ಅಗಲದಂತೆ ಬೇಡುವ ಪ್ರೇಮಯಾಚನೆಯು,
         
ಹೆಣ್ತನದಲ್ಲೇ ಮಿಗಿಲಾದುದೆಂದು ಬಲ್ಲವರು ಹೇಳುವರು.

No comments:

Post a Comment