Sunday, 1 August 2010

ತಿರುಕ್ಕುಱಳ್: ಅಧ್ಯಾಯ 69-78



Thirukkural in Kannada
ತಿರುಕ್ಕುಱಳ್ (ಹೊಸಗನ್ನಡ ಅನುವಾದಗಳೊಂದಿಗೆ)



ಅರ್ಥ ಭಾಗ: ಅಧ್ಯಾಯ: 69-78

ಅಧ್ಯಾಯ 69. ರಾಯಭಾರ


681. ಪ್ರೀತಿಯುಳ್ಳವನಾಗಿರುವುದು, ತಕ್ಕ ವಂಶೋದ್ಭವನಾಗಿರುವುದು, ಅರಸನು ಮೆಚ್ಚುವ ಗುಣಗಳನ್ನು ಪಡೆದಿರುವುದು- ಇವು
         ರಾಯಭಾರವನ್ನು ನಡೆಸುವವನ ಲಕ್ಷಣಗಳು.
682. ಪ್ರೀತಿ, (ತನ್ನ ವ್ಯವಹಾರದಲ್ಲಿ) ಅರಿವು, ವಿಚಾರಮಾಡಿ ಆಡುವ ಮಾತುಗಾರಿಕೆ- ಇವು ಮೂರು ದೂತನಲ್ಲಿ ಅನಿವಾರ್ಯವಾದ ಗುಣಗಳು.
683. (ದೂತನಾದವನು) ಬೇರೆ ಅರಸರಲ್ಲಿಗೆ ಹೋಗಿ ತನ್ನರಸನ ವಿಜಯ ಸಾಧನೆಗಳನ್ನು ವಿಶದಪಡಿಸುವ ಜಾಣ್ಮೆಯನ್ನು ತೋರುವುದರಿಂದ,
         ರಾಜ್ಯ ಶಾಸ್ತ್ರ ಬಲ್ಲವರಲ್ಲೆ ಪಂಡಿತನೆನಿಸಿಕೊಳ್ಳುತ್ತಾನೆ.
684. (ಸ್ವಾಭಾವಿಕ) ಅರಿವು, ಆಕರ್ಷಕ ನೋಟ, ಸತತ ಪ್ರಯತ್ನದಿಂದ ಬಂದ ಕಲಿಕೆ- ಈ ಮೂರರ ಹೊಂದಾಣಿಕೆಯುಳ್ಳವನು, ದೂದು ಹೇಳುವ
         ಕೆಲಸಕ್ಕೆ ತೊಡಗಬಹುದು.
685. ಹೊರನಾಡಿನ ಅರಸರಿಗೆ ಹೇಳುವುದನ್ನು ಸಂಗ್ರಹವಾಗಿ, ಅಹಿತವಾದ ವಿಷಯಗಳನ್ನು ಬಿಟ್ಟು, ನಗೆಸೂಸುವಂತೆ ಹೇಳಿ ತನ್ನರಸನಿಗೆ
         ಒಳ್ಳೆಯದಾಗುವಂತೆ ಮಾಡುವವನೇ ದೂತನೆನಿಸಿಕೊಳ್ಳುವನು.
686. (ರಾಜನೀತಿ ಮೊದಲಾದುವುಗಳನ್ನು) ಕಲಿತು, (ಹಗೆಗಳ ಬಿರುನೋಟಕ್ಕೆ) ಹೆದರದೆ, ಹೇಳುವುದನ್ನು ಮನಮುಟ್ಟುವಂತೆ ಹೇಳಿ, ಕಾಲಕ್ಕೆ
         ತಕ್ಕ ತಿಳುವಳಿಕೆ ಹೊಂದಿರುವವನೇ ದೂತನೆನಿಸಿಕೊಳ್ಳುವನು.
687. ತನ್ನ ಕರ್ತವ್ಯವನ್ನು ಚೆನ್ನಾಗಿ ಬಲ್ಲವನಾಗಿ, ಅದನ್ನು ನೆರವೇರಿಸಲು ತಕ್ಕ ಕಾಲವನ್ನು ನಿರೀಕ್ಷಿಸಿ, ತಕ್ಕ ಸ್ಥಳವನ್ನೂ ಬಲ್ಲವನಾಗಿ,
         ವಿಚಾರಮಾಡಿ, ದೂತ ಕಾರ್ಯವನ್ನು ನೆರವೇರಿಸ ಬಲ್ಲವನು ದೂತರಲ್ಲಿಯೇ ಶ್ರೇಷ್ಠನೆನಿಸಿಕೊಳ್ಳುವನು.
688. ಶುದ್ಧವಾದ ನಡತೆ, ಪರರ ಸಹಕಾರ, ವಿದೆಗಾರಿಕೆ- ಈ ಮೂರರ ವಾಸ್ತವತೆಯನ್ನು ತಿಳಿದಿರುವುದೇ ದೂತ ಕಾರ್ಯ ಮಾಡುವವನ
         ಲಕ್ಷಣಗಳು.
689. ದೋಷವುಳ್ಳ ಮಾತುಗಳನ್ನು ಬಾಯಿತಪ್ಪಿಯೂ ಹೇಳದಿರುವ ನಿಶ್ಚಲಧೋರಣೆಯುಳ್ಳವನೇ ಅರಸನು ಹೇಳಿಕಳಿಸಿದ ಮಾತುಗಳನ್ನು
         ಇತರ ಅರಸರಿಗೆ ಹೇಳಲು ಸಮರ್ಥನಾದವನು.
690. ತನಗೆ (ತನ್ನ ಕೆಲಸದಲ್ಲಿ) ಸಾವು ಸಂಭವಿಸಿದರೂ ಹೆದರದೆ, ಅರಸನಿಗೆ ಒಳ್ಳೆಯದು ಉಂಟಾಗುವಂತೆ ಮಾಡುವವನೇ
         ದೂತನೆನಿಸಿಕೊಳ್ಳುವನು.

ಅಧ್ಯಾಯ 70. ರಾಜರನ್ನು ಸೇರಿ ನಡೆದುಕೊಳ್ಳುವ ರೀತಿ

691. ವಿಚಿತ್ರವಾಗಿ ವರ್ತಿಸುವ ರಾಜರನ್ನು ಸೇರಿ ಬಾಳುವ ಮಂತ್ರಿಗಳು, (ಚಳಿಯಲ್ಲಿ) ಬೆಂಕಿ ಕಾಯಿಸುವವರಂತೆ, ಹೆಚ್ಚು ನಿಕಟವಾಗಿರದೆಯೂ,
         ಹೆಚ್ಚು ದೂರವಾಗಿರದೆಯೂ ಇರಬೇಕು.
692. ಅರಸರನ್ನು ಕೂಡಿಬಾಳುವವರು ಅರಸರು ಬಯಸಿದ ವಸ್ತುಗಳನ್ನು ತಾವು ಬಯಸದಿದ್ದಲ್ಲಿ, ಅರಸರಿಂದಲೇ ನೆಲೆಯಾದ ಐಶ್ವರ್ಯವನ್ನು
         ಪಡೆದು ಬಾಳುತ್ತಾರೆ.
693. (ಅರಸನನ್ನು ಸೇರಿ ಬಾಳುವವರು) ತಮ್ಮನ್ನು ಕಾದುಕೊಳ್ಳಬೇಕಾದರೆ, ತೀವ್ರವಾದ ತಪ್ಪುಗಳು ಸಂಭವಿಸದಂತೆ ಎಚ್ಚರಿಕೆಯಿಂದಿರಬೇಕು.
         ಒಮ್ಮೆ (ಅರಸನ) ಸಂಶಯಕ್ಕೆ ಈಡಾದರೆ, ಅದನ್ನು ತಿಳಿಯಾಗುವಂತೆ ಬಗೆಹರಿಸುವುದು ಯಾರಿಗೂ ಸಾಧ್ಯ.
694. ಬಲಶಾಲಿಗಳಾದ ಅರಸರ ಸಮ್ಮುಖದಲ್ಲಿ, ಬೇರೊಬ್ಬರೊಂದಿಗೆ ಕಿವಿಯಲ್ಲಿ ಪಿಸುಗುಟ್ಟುವುದಾಗಲೀ, ನಗೆಯಾಡುವುದಾಗಲೀ
         ಮಾಡದಂತೆ ನಡೆದುಕೊಳ್ಳಬೇಕು.
695. ಅರಸರು, ರಹಸ್ಯವಾಗಿ ಮಾತನಾಡುವಾಗ ಮಂತ್ರಿಗಳುಯಾವ ವಿಷಯವನ್ನಾಗಲೀ, ಕದ್ದು ಕೇಳದೆ, ಪ್ರಶ್ನೆಗಳ ಮಳೆಸುರಿಸದೆ, ಆ
         ವಿಷಯವನ್ನು ಅವರೇ ಪ್ರಕಟವಾಗಿ ಹೇಳುವಾಗ ಕೇಳಿ ತಿಳಿದುಕೊಳ್ಳುವುದೇ ಧರ್ಮ.
696. ಅರಸರ ಸಂಜ್ಞೆಯನ್ನು ಅರಿತು, ತಕ್ಕ ಕಾಲವನ್ನು ಎದುರುನೋಡಿ, ಅಹಿತವಾಗದಂತೆ, ಅಪೇಕ್ಷೆಪಡುವ ಸಂಗತಿಗಳನ್ನು (ಅವರಿಗೆ)
         ಇಷ್ಟವಾಗುವಂತೆ ಹೇಳಬೇಕು.
697. ಅರಸರು ಇಷ್ಟಪದುವಂಥ ಸಂಗತಿಗಳನ್ನು (ಮಾತ್ರ) ಹೇಳಿ, ಅನುಪಯುಕ್ತ ವಿಷಯಗಳನ್ನು ಅವರೇ ಕೇಳಿದರೂ ಯಾವಾಗಲೇ ಆಗಲಿ,
         ಹೇಳದಿರಬೇಕು.
698. ಅರಸನು "ನನಗಿಂತ ಕಿರಿಯನು, ಹತ್ತಿರದ ಸಂಬಂಧಿ" ಎಂದು ಅವನನ್ನು ಕೀಳು ಮಾಡದೆ, ಅರಸನ ಸ್ಥಾನಕ್ಕೆ ಮನ್ನಣೆಯಿತ್ತು ನೆಲೆಯಾದ
         ವಿವೇಚನೆಯಿಂದ ನಡೆದುಕೊಳ್ಳಬೇಕು.
699. ದೃಢವಾದ ಮನಸ್ಸುಳ್ಳವರು, ತಾವು ಅರಸರಿಗೆ ಬೇಕಾದವರೆಂದು ನೆನೆದು ಅವರಿಗೆ ಇಷ್ಟವಾಗದಂಥ ಕೆಲಸಗಳನ್ನು ಮಾಡುವುದಿಲ್ಲ.
700. ನಾವು ಅರಸರಿಗೆ ತುಂಬ ಸಲಿಗೆಯುಳ್ಳವರೆಂದು ಭಾವಿಸಿ, ಪ್ರಯೋಜನವಿಲ್ಲದ ಕೆಲಸಗಳನ್ನು ಮಾಡಿದರೆ, ಅಂಥ ಸಲಿಗೆ ಕೇಡನ್ನು
         ತರುತ್ತದೆ.

ಅಧ್ಯಾಯ 71. ಸಂಕೇತ ಪ್ರಜ್ಞೆ

701. ಅರಸನ ಅಭಿಪ್ರಾಯವನ್ನು, ಅವರು ವ್ಯಕ್ತಪಡಿಸದೆಯೇ ಮುಖಭಾವದಿಂದಲೇ ಸಂಕೇತವನ್ನು ಗ್ರಹಿಸುವವನು, ಲೋಕಕ್ಕೆ
         ಅಲಂಕಾರವಿದ್ದಂತೆ.
702. (ಯಾವ ರೀತಿಯ) ಸಂಶಯಕ್ಕೂಳಗಾಗದೆ, ಒಬ್ಬರ ಮನಸ್ಸಿನಲ್ಲಿರುವುದನ್ನು ಗ್ರಹಿಸಬಲ್ಲವನನ್ನು ದೈವಕ್ಕೆ ಸಮಾನವೆಂದೆಣಿಸಬೇಕು.
703. ಮುಖಕಣ್ಣುಗಳ ಇಂಗಿತದಿಂದಲೇ ಮನಸ್ಸನ್ನು ತಿಳಿಯಬಲ್ಲವರನ್ನು (ಅರಸನು) ತನ್ನ ಸೊತ್ತಿನಲ್ಲಿ ಏನನ್ನಾದರೂ ಕೊಟ್ಟು
         ಪಡೆದುಕೊಳ್ಳಬೇಕು.
704. ಒಬ್ಬರ ಮ್ನಸ್ಸಿನ ಇಂಗಿತವನ್ನು ಹೇಳದೆಯೇ ತಿಳಿದುಕೊಳ್ಳಬಲ್ಲವರನ್ನು ಉಳಿದವರೊಡನೆ ಹೋಲಿಸಿದಾಗ, ಶರೀರಧಾರಣೆಯಲ್ಲಿ
         ಸಮಾನರಾಗಿ ಕಂಡರೂ, ಅರಿವಿನಲ್ಲ ಅವರು ಬೇರೆಯೇ.
705. ಬರಿಯ ಇಂಗಿತ ಮಾತ್ರದಿಂದಲೇ, ಸೂಚನೆಯನ್ನು ಗ್ರಹಿಸದಿದ್ದ ಮೇಲೆ ಕಣ್ಣುಗಳು ದೇಹದಲ್ಲಿ ಇದ್ದೂ ಏನು ಪ್ರಯೋಜನ?
706. ತನ್ನ ಹತ್ತಿರದಲ್ಲಿರುವ ವಸ್ತುಗಳನ್ನು ಕನ್ನಡಿಯು ತೋರಿಸುವಂತೆ, (ಒಬ್ಬನ) ಮನಸ್ಸಿನಾಳದೊಳಗಿರುವುದನ್ನು (ಅವನ) ಮುಖವು
         ತೋರಿಸುತ್ತದೆ.
707. ಮುಖಕ್ಕಿಂತ ಮಿಗಿಲಾದ ಅರಿವುಳ್ಳದು ಉಂಟೆ? ಅದು, ಒಬ್ಬನು ಸಂತೋಷಿಸಲಿ, ಕೋಪಿಸಲಿ, ಅದನ್ನು ಮುಂದಾಗಿಯೇ ಒರೆಯುತ್ತದೆ.
708. (ಅರಸನಾದವನು) ತನ್ನ ಮನಸ್ಸಿನ ಒಳಹೊಕ್ಕು ಅರಿತು ಹೇಳಬಲ್ಲವರನ್ನು ಪಡೆದಿದ್ದಲ್ಲಿ, ಅವರ ಮುಂದೆ ಸುಮ್ಮನೆ ಮುಖವನ್ನು
         ನೋಡುತ್ತ (ಏನೊಂದೂ ಹೇಳದೆ) ನಿಂತರ ಸಾಕು.
709. ಕಣ್ಣಿನ ಭಾವಭೇದಗಳನ್ನು ಗ್ರಹಿಸಬಲ್ಲವನನ್ನು (ಅರಸನು) ಮಣ್ತ್ರಿಯಾಗಿ ಪಡೆದಿದ್ದಲ್ಲ, (ವಿರೋಧಿಗಳ ಮನಸ್ಸಿನಲ್ಲಿರುವ)
         ಹಗೆತನವನ್ನು, ಕೆಳೆತನವನ್ನು ಅವನಿಗೆ ಅವರ ಕಣ್ಣುಗಳೇ ಹೇಳಿ ಬಿಡುತ್ತವೆ.
710. 'ತಾನು ಸೂಕ್ಷ್ಮಮತಿ' ಎಂದು ಹೇಳುವ ಮಂತ್ರಿಗಳ ಅಳತೆಗೋಲು, ವಿಚಾರ ಮಾಡಿ ನೋಡಿದಲ್ಲಿ ಅವರ ಕಣ್ಣುಗಳಲ್ಲದೆ ಬೇರೆಯಲ್ಲ.

ಅಧ್ಯಾಯ 72. ಸಭಾ ಪರಿಜ್ಞಾನ

711. ಮಾತುಗಳ ಜೋಡಣೆಯನ್ನು ಅರಿತ ಶುದ್ದವಾದ ತಿಳುವಳಿಕೆಯುಳ್ಳವರು ಸಭೆಯ ಸ್ವಭಾವವನ್ನು ಅರಿತು ವಿಚಾರಮಾಡಿ ಮಾತನಾಡಲಿ.
712. ಮಾತಿನ ನಡಾವಳಿಯನ್ನು ಅರಿತ ಒಳ್ಳೆಯ ಗುಣಶಾಲಿಗಳು (ಸಭೆಯ) ಅವಕಾಶವನ್ನು ತಿಳಿದುಕೊಂಡು ಚೆನ್ನಾಗಿ ಗ್ರಹಿಸಿ ಮಾತನಾಡಲಿ.
713. ಸಭಾ ತಿಳುವಳಿಕೆಯಿಲ್ಲದೆ ಮಾತನಾಡಲು ತೊಡಗುವವರು ಮಾತಿನ ಬಗೆಯನ್ನು ಅರಿಯದವರು; ಅವರಲ್ಲಿ ವಿದ್ಯೆಯ ಬಲಿಮೆಯೂ
         ಇರುವುದಿಲ್ಲ.
714. ಜ್ಞಾನಿಗಳ ಸಭೆಯ ಮುಂದೆ ಜ್ಞಾನಿಗಳಂತೆಯೇ ವರ್ತಿಸಬೇಕು. ಮೂರ್ಖರ (ಬೆಳ್ಳಕ್ಕರಿಗರ) ಮುಂದೆ, ಬೆಪ್ಪುತನವನ್ನು ತೋರಿಸಬೇಕು.
715. ಒಳ್ಳೆಯದೆಂದು ಹೇಳಲ್ಪಡುವ ಎಲ್ಲಾ ಗುಣಗಳಲ್ಲೂ ಮಿಗಿಲಾದುದು ಬಲ್ಲವರ ಸಭೆಯಲ್ಲಿ ಮುಂದಾಗಿ ಹೋಗಿ ಮಾತನಾಡದಿರುವ
         ವಿನೀತಗುಣವೇ.
716. ಬಹುಮುಖ ಜ್ಞಾನವನ್ನು ಸಂಪಾದಿಸಿ ಚಿಂತಿಸುವವರ ಸಭೆಯಲ್ಲಿ ತಪ್ಪುಮಾಡುವುದು, ಒಳ್ಳೆಯ ಮಾರ್ಗದಲ್ಲಿ ನಡೆದು ಬಂದು
         ಇದ್ದಕ್ಕದ್ದಂತೆ, ನೆಲೆತಪ್ಪಿ ಕುಸಿದ ಹಾಗೆ.
717. ದೋಷಮುಕ್ತವಾದ ಮಾತುಗಳನ್ನು ಅರಿಯಬಲ್ಲ. ಬಲ್ಲವರ ಸಭೆಯಲ್ಲಿ ಹಲವು ವಿದೈಯರಿತವರ ಜ್ಞಾನವು ಚೆನ್ನಗಿ ಪ್ರಕಾಶಕ್ಕೆ
         ಬರುವುದು.
718. ತಾವು ತಿಳಿಯಬಲ್ಲ ಸಾಮರ್ಥ್ಯವುಳ್ಳವರ ಮುಂದೆ, ಹೇಳುವುದು, ಸ್ವಾಭಾವಿಕವಾಗಿ ಬೆಳೆಯುವ ಸಸಿಯ ಪಾತಿಯಲ್ಲಿ ನೀರನ್ನು
         ಸುರಿದಂತೆ.
719. ಒಳ್ಳೆಯ ಅರಿತವರ ಸಭೆಯಲ್ಲಿ ಚೆನ್ನಾಗಿ ಮನ ಮುಟ್ಟುವಂತೆ ಮಾತನಾಡಬಲ್ಲ ಸಾಮರ್ಥ್ಯವುಳ್ಳವರು, ಅರಿವಿಲ್ಲದವರ ಕೂಟದಲ್ಲಿ
         ಮರೆತಾದರೂ ಮಾತನಾಡಬಾರದು.
720. ತನಗೆ ಹಿತವರಲ್ಲದವರ ಮುಂದೆ, ಗೋಷ್ಠಿಯಲ್ಲಿ ಪಾಲ್ಗೊಳ್ಳುವುದು, ಅಂಗಳದಲ್ಲಿ ಅಮೃತವನ್ನು ಚೆಲ್ಲಿದಂತೆ. (ವ್ಯರ್ಥ).

ಅಧ್ಯಾಯ 73. ಸಭಾ ಕಂಪನವಿಲ್ಲದಿರುವುದು.

721. ಮಾತಿನ ಜೋಡಣೆಯನ್ನು ಅರಿತ ಪರಿಶುದ್ಧವಾದ ನಡೆಯುಳ್ಳವರು, ಸಭೆಯ ರೀತಿಯನ್ನು ಅರಿತವರಾಗಿ, ಬಲ್ಲವರ ಸಭೆಯಲ್ಲಿ
         (ಭೀತಿಯಿಂದ) ಬಾಯಿತಪ್ಪಿ ತಪ್ಪಾಗಿ ಮಾತನಾಡಲಾರರು.
722. ಕಲಿತವರ (ವಿದ್ವಾಂಸರ) ಮುಂದೆ ತಾವು ಕಲಿತುದನ್ನು ಮನಮುಟ್ಟುವಂತೆ ಹೇಳಬಲ್ಲದವರು, ಜ್ಞಾನಿಗಳಲ್ಲಿ ಜ್ಞಾನಿಗಳೆಂದು
         ಕರಯಲ್ಪಡುವರು.
723. ಯುದ್ಧ ರಂಗದಲ್ಲಿ ಧೈರ್ಯದಿಂದ ಹೋರಾಡಿ ಸಾಯುವವರು (ಲೋಕದಲ್ಲಿ) ಹಲವು ಮುಂದಿ ಇದ್ದಾರೆ; (ಆದರೆ) ಅರಿತವರ
         ಸಭಯಲ್ಲಿ ಅಂಜದೆ ಮಾತನಾಡಬಲ್ಲವರು ಕೆಲವೇ ಮುಂದಿ.
724. ಕಲಿತವರ ಮುಂದೆ ತಾವು ಕಲಿತುದನ್ನು ಮನಮುಟ್ಟುವಂತೆ ಹೇಳಿ, ಅಪಾರವಾಗಿ ಕಲಿತವರಿಂದ ಮಿಗಿಲಾಗಿ ಜ್ಞಾನವನ್ನು ಕೇಳಿ
         ತಿಳಿದುಕೊಳ್ಳಬೇಕು.
725. ಬೇರೆ ಅರಸರ ಸಭಯಲ್ಲಿ ಸಭಾಭೀತಿಯಿಲ್ಲದ ಸಮರ್ಪಕವಾದ ಉತ್ತರ ನೀಡಲು, ಯೋಗ್ಯವೆನಿಸಿದ ತರ್ಕ ಗ್ರಂಥಗಳನ್ನು ಅರಿತು ಅಭ್ಯಾಸ
         ಮಾಡಬೇಕು.
726. ವೀರೋಚಿತವಾಗ ದೃಷ್ಟಿಯುಳ್ಲವರಲ್ಲದವರಿಗೆ ಕತ್ತಿಯೊಡನೆ ಏನು ಸಂಬಂಧ? ಸೂಕ್ಷ್ಮಮತಿಗಳ ಸಭೆಗೆ ಅಂಜುವವರಿಗೆ, ಶಾಸ್ತ್ರ
         ಗ್ರಂಥಗಳೊಡನೆ ಏನು ನಂಟು?
727. (ಅರಿತವರ) ಸಭಯಲ್ಲಿ ಅಂಜುವವನ ಶಾಸ್ತ್ರಜ್ಞಾನವು, ಹಗೆಯೊಡನೆ ಹೋರಾಟ ನಡೆಸಲು ಹೋದ ಹೇಡಿಯ ಕೈಯಾಳಗಿನ ಕೂರಲಗಿನಂತೆ.
728. ಚೆನ್ನಾಗಿ ಅರಿತವರ ಸಭಯಲ್ಲಿ ಒಳ್ಳೆಯ ವಿಷಯಗಳನ್ನು (ಕೇಳುವವರ) ಮನಮುಟ್ಟುವಂತೆ ಹೇಳಲಾರದವರು, ಹಲವು ವಿಷಯಗಳನ್ನು
         ಕಲಿತೂ ಪ್ರಯೋಜನವಿಲ್ಲದವರೇ (ಆಗುತ್ತಾರೆ).
729. ಶಾಸ್ತ್ರಗ್ರಂಥಗಳನ್ನು ಓದಿಬಲ್ಲವರಾದರೂ, ಚೆನ್ನಾಗಿ ಬಲ್ಲವರ ಸಭೆಯಲ್ಲಿ (ಮಾತನಾಡಲು) ಹೆದುರುವವರು, ಕಲಿಯದವರಿಗಿಂತ, ಕಡೆ
         ಎಂದೆಣಿಸಲ್ಪಡುವರು.
730. ಸಭೆಗೆ ಅಂಜಿ ಮನಮುಟ್ಟುವಂತೆ ಹೇಳಲು ಅಶಕ್ತರಾದವರು, ಬದುಕ್ಕಿದ್ದೂ ಸತ್ತವರ ಸಮಾನರು.

ಅಧ್ಯಾಯ 74. ನಾಡು

731. ಕೊರೆಯಿಲ್ಲದ ಕೃಷಿ ಸಂಪತ್ತು, ಯೋಗ್ಯರಾದ ಅರಿತವರು ಮತ್ತು ಕೇಡೀಲ್ಲದ ಸಂಪತ್ತುಳ್ಳ ವಣಿಜರೂ ಕೂಡಿಕೊಂಡಿರುವುದೇ
         ನಾಡೆನಿಸಿಕೊಳ್ಳುವುದು.
732. ಹೇರಳವಾದ ಸಂಪತ್ತಿನಿಂದ ಹೊರದೇಶದವರೂ ಬಯಸುವುದಾಗಿ ಕೇಡಿಲ್ಲದೆ ಮಿಗಿಲಾಗಿ ಬೆಳೆಯುವುದೇ ನಾಡೆನಿಸಿಕೊಳ್ಳುವುದು.
733. (ನೆರೆನಾಡ ಅರಸನು ದಾಳಿಯಿಡುವುದರಿಂದ) ಒಮ್ಮೆಲೇ ತನ್ನ ಮೇಲೆ ಬರುವ ಹೊರೆಯನ್ನು ಸಹಿಸಿಕೊಂಡು, ತನ್ನ ಅರಸರಿಗೆ, ಕಂದಾಯ
         ತರಿಗೆಗಳನ್ನು ಪೂರ್ತಿಯಾಗಿ ಸಲ್ಲಿಸಿಕೊಂಡು ಬರುವುದೇ ನಾಡು ಎನಿಸಿಕೊಳ್ಳುವುದು.
734. ಕಡುತರವಾದ ಹಸಿವೂ, ತೀರದ ರೋಗರುಜೀನಗಳೂ ಕೊಲ್ಲುವ ಹಗೆತನವೂ ಸೇರವಂತೆ, ಸ್ವಾಭಾವಿಕವಾಗಿ ನಡೆದು ಬರುವುದೇ
         ನಾಡೆನಿಸಿಕೊಳ್ಳುವುದು.
735. ಹಲವು ರೀತಿಯ ದುಷ್ಟ ಕೂಟಗಳು, ಕೇಡುಂಟು ಮಾಡುವ, ಒಳನಾಡಿನ ಹಗೆಯೂ, ಅರಸನನ್ನು ಭೀತಿಗೀಡು ಮಾಡುವ ಕೊಲೆ ಸಂಚಿನ
         ಗುಂಪ್ರಗಳೂ ಇಲ್ಲದಿರುವುದೇ ನಾಡೆನಿಸಿಕೊಳ್ಳುವುದು.
736. ಹಗೆಗಳಿಂದ ಕೇಡರಿಯದೆ, ಕೆಟ್ಟ ಕಾಲದಲ್ಲೂ ಏಳಿಗೆಯೂ ಕುಂದದಂತೆ ಇರುವ ನಾಡು, ನಾಡುಗಳಲ್ಲೆಲ್ಲಾ ಹಿರಿಮೆಯುಳ್ಳದು ಎಂದು
         (ಬಲ್ಲವರು) ಹೇಳುವರು.
737. ಹರಿಯುವ ತೊರೆಗಳಿಂದ ಮತ್ತು ಮಳೆಯಿಂದ ಉಂಟಾಗುವ ಎರಡು ಬಗೆಯ ನೀರಿನ ಸಂಪತ್ತೂ ಸ್ವಾಭಾವಿಕವಾಗಿ ವ್ಯಾಪಿಸಿರುವ
         ಮಲೆಗಳೂ, ಅಲ್ಲಿಂದ ಹರಿದು ಬರುವ ನದಿಯ ನೀರೂ ಬಲವಾದ ಕೋಟೆಯೂ ನಾಡಿಗೆ ಅವಶ್ಯಕವಾದ ಅಂಗಗಳೆನಿಸುವುವು.
738. ನೀರೋಗತನ, ಐಸಿರಿ, (ಸಮೃದ್ಧ) ಬೆಳೆ, ತೃಪ್ತಿಯ ಜೀವನ, (ಪ್ರಜಾ) ರಕ್ಷಣೆ ಈ ಐದು ನಾಡಿಗೆ ಅಲಂಕಾರ ಎಂದು ಹೇಳುವುದು.
739. ಪ್ರಯತ್ನವಿಲ್ಲದೆಯೇ ಸ್ವಾಭಾವಿಕವಾಗಿ ಸಿರಿಯನ್ನು ಬೆಳೆಸುವ ನಾಡು ನಾಡೆನ್ನುವರು. ಪ್ರಯತ್ನ ಮಾತ್ರದಿಂದ (ಶ್ರಮಪಟ್ಟು)
         ಅಭ್ಯುದಯವನ್ನು ಪಡೆಯುವ ನಾಡು ನಾಡಲ್ಲ.
740. ಮೇಲೆ ತಿಳಿಸಿದ ಎಲ್ಲಾ ಗುಣಗಳನ್ನು ಹೊಂದಿದ ಮೇಲೂ, ಆ ನಾಡಿನಲ್ಲಿ ಒಳ್ಳೆಯ ಪ್ರಭುತ್ವವಿಲ್ಲವಾದರೆ, ಅದು ವ್ಯರ್ಥವಾಗಿ
         ಹೋಗುವುದು.

ಅಧ್ಯಾಯ 75. ಕೋಟೆ

741. ಶತ್ರುವನ್ನು ಎದುರಿಸಿ ಹೋರಾಡುವವರಿಗೆ ಕೋಟೆಯೇ ಆಧಾರ; ಅದರಂತೆ, ಶತ್ರು ಅಂಜಿ, ತಮ್ಮ ರಕ್ಷಣೆ ಮಾಡೀಕೊಳ್ಳುವವರಿಗೂ ಅದೇ
         ಆಧಾರ.
742. ಮಣಿಯಂತೆ ತಿಳಿಯಾದ ನೀರು, ಸಮತಟ್ಟಾದ ಭೂಮಿ, (ಹಬ್ಬಿರುವ) ಮಲೆ, ಸೂಗಸಾದ (ತಂಪಾದ) ನೆರಳುಳ್ಳ ಕಾಡು- ಇವುಗಳನ್ನು
         ಉಳ್ಳದೇ ಹೋಟೆಯೆನಿಸಿಕೊಳ್ಳುವುದು.
743. (ಹಗೆಗಳಿಂದ ನಾಶಪಡಿಸಲಾಗದಂತೆ) ಎತ್ತರ, ಅಗಲ, ದೃಢತೆ, ದುರ್ಗಮತೆಗಳೆಂಬ ನಾಲ್ಕೂ ಕೂಡಿರುವುದೇ ಕೋಟೆ ಎಂದು ಶಾಸ್ತ್ರ
         ಬಲ್ಲವರು ಹೇಳುವರು.
744. ಕಾವಲಿಡುವ ಜಾಗ ಕಿರಿಯದಾಗಿ, ಒಳೆ ವಿಸ್ತರಣ, ವಿಶಾಲ ಹರಹುಳ್ಳದಾಗಿ, ಮುತ್ತಿಗೆ ಹಾಕುವ ಕಡು ಹಗೆಗಳ ಶಕ್ತಿಯನ್ನು
         ನಾಶಪಡಿಸಬಲ್ಲುದೇ ಕೋಟೆ ಎನಿಸಿಕೊಳ್ಳುವುದು.
745. ಹಗೆಳಿಂತ ವಶಪಡಿಸಿಕೊಳ್ಳಲು ಅಸಾಧ್ಯವಾದುವಾಗಿ, ಆಹಾರವನ್ತುಗಳನ್ನು ಹೇರಳವಾಗಿ ಪಡೆದು, ತನ್ನೊಳಗೆ ನೆಲಸಿರುವವರನ್ನು ರಕ್ಷಿಸಿ
         ಸುಖವಾಗಿಡುವುದೇ ಕೋಟೆ ಎನಿಸಿಕೊಳ್ಳುವುದು.
746. ಒಳಗಿರುವವರಿಗೆ ಬೇಕಾದ ಎಲ್ಲಾ ಆವಶ್ಯವಾದ ವಸ್ತುಗಳನ್ನು ಪಡೆದು, ಶತ್ರುಗಳೊಡನೆ ಹೋರಾಡುವ ಸಮಯದಲ್ಲಿ ರಕ್ಷಿಸಬಲ್ಲ
         ಒಳ್ಳೆಯ ವೀರರನ್ನು ಹೊಂದಿರುವುದೇ ಕೋಟೆ ಎನಿಸಿಕೊಳ್ಳುವುದು.
747. ಮುತ್ತಿಗೆ ಹಾಕಿಯೂ, ಮುತ್ತಿಗೆ ಹಾಕದೆ ಮೇಲೆಬಿದ್ದು ಹೋರಾಟ ನಡೆಸಿಯೂ ವಂಚನೋಪಾಯಗಳಿಂದಲೂ ವಶಪಡಿಸಿಕೊಳ್ಳಲು"
         ದುಸ್ಸಾಧುಅವಾದುದೇ ಕೋಟೆ.
748. ಮುತ್ತಿಗೆ ಆಕುವುದರಲ್ಲಿ ಬಲಿಮೆಯನ್ನು ತೋರಿ ಸುತ್ತುವರಿದ ಹಗೆಗಳನ್ನು ಎದುರಿಸಿ ಬಳಗಿರುವರು, ನೆಲೆಯಾಗಿ ನಿಂತು ಹೋರಾಡಿ
         ಗೆಲ್ಲುವುದೇ ಕೋಟೆ.
749. ಯುದ್ಧ ಮುಖದಲ್ಲಿ ಶತ್ರುಗಳು ಸಾಯುವಂತೆ ಹೋರಾಟ ನಡೆಸುವುದರಿಂದ (ಒಳಗಿರಿವವರು) ಹಿರಿಮೆ ತೋರಿ, ಕೀರ್ತಿಶಾಲಿಗಳಾಗುವಂತೆ
         ಮಾಡುವುದೇ ಕೋಟೆ.
750. ಎಲ್ಲ ಬಗೆಯ ಹಿರಿಮೆಯನ್ನು ಹೊಂದಿದ್ದರೂ ಒಳಗಿರುವವರು ಕಾರ್ಯದಕ್ಷತೆಯ ಹಿರಿಮೆ ಕೋಟೆಯು ವ್ಯರ್ಥವೆನಿಸುವುದು.

ಅಧ್ಯಾಯ 76. ಸಿರಿಕೊಡಿಸುಅ ಬಗೆ.

751. ಹುರುಳಿಲ್ಲದವರನ್ನು ಗಣನೀಯರನ್ನಗಿ ಮಾಡುವುದು ಸಿರಿ; ಅದಕ್ಕಿಂತ ಮುಖ್ಯವಾದ ವಸ್ತು ಲೋಕದಲ್ಲಿ ಬೇರೆ ಇಲ್ಲ.
752. ಬಡವರನ್ನು (ಅವರಲ್ಲಿ ಒಳ್ಳೆಯ ಗುಣಗಳಿದ್ದರೂ) ಎಲ್ಲರೂ ಕೀಳಾಗಿ ನೋಡುವರು; ಸಿರಿವಂತರನ್ನು (ಅವರಲ್ಲಿ ಅವಗುಣಗಳಿದ್ದರೂ)
         ಎಲ್ಲರೂ ಸ್ತುತಿಸುವರು.
753. (ಒಬ್ಬನಲ್ಲಿರುವ) ಸಿರಿ ಎನ್ನುವ ನಂದದ ಬೆಳಕು, ಅವನು ನೆನೆದ ಪ್ರದೇಶವನ್ನೆಲ್ಲ ವ್ಯಾಪಿಸಿ, ಇರುವ ಕತ್ತಲನ್ನೆಲ್ಲ (ಆತಂಕಗಳನ್ನೆಲ್ಲ)
         ಹೋಗಲಾಡಿಸುತ್ತದೆ.
754. ಸರಿಯಾದ ಮಾರ್ಗವರಿತು, (ಇತರರಿಗೆ) ಕೆಡುಕುಂಟು ಮಾಡದೆ ಬಂದು ಸೇರಿದ ಸಿರಿಯು, (ಒಬ್ಬನಿಗೆ) ಸನ್ಮಾರ್ಗವನ್ನೂ ಸಂತೋಷವನ್ನು
         ಈಯುತ್ತದೆ.
755. (ಪ್ರಚೆಗಳಲ್ಲಿ) ದಯೆ, ಪ್ರೀತಿಗಳನ್ನು ತೋರದೆ, ಬರುವ ಸಿರಿ ಸಂಪತ್ತನ್ನು ಅರಸನಾದವನು ಸ್ವೀಕರಿಸದೆ ದೂರವಿಡಬೇಕು.
756. ಸಾರ್ವಜನಿಕೆ ಹಣ, ಸುಂಕ ರೂಪದಲ್ಲಿ ಬಂದ ಹಣ, ತನ್ನ ಶತ್ರುಗಳನ್ನು ಗೆದ್ದ ಮೇಲ್;ಎ ಅವರು, ಕಪ್ಪವಾಗಿಕೊಡುವ ಹಣ- ಇದು
         ಅರಸನ (ಅಧಿಕಾರಕ್ಕೆ ಸೇರಿದ) ಸೊತ್ತಾಗುವುದು.
757. ಕರುಣೆ ಎನ್ನುವುದು ಪ್ರೀತಿಯ ಕೂಸು ಇದ್ದಂತೆ; ಅದು ಬೆಳೆಯಬೇಕಾದರೆ ಸಿರಿಯೆನ್ನುವ ಅಕ್ಕರೆಯ ಪೋಷಣೆ ಬೇಕು.
758. ತನ್ನ ಕೈಯಲ್ಲಿ ಸಿರಿಯಿಟ್ಟುಕೊಂಡು ಒಬ್ಬನು ಒಂದು ಕೆಲಸವನ್ನು ಕೈಗೊಂಡರೆ ಬೆಟ್ಟವೆನ್ನೇರಿ ಆನೆಗಳ ಹೋರಾಟವನ್ನು ಕಂಡದೆ ಅದರ
         ಫಲವು ನಿಚ್ಚಳವಾಗಿರುತ್ತದೆ.
759. ಹಣವನ್ನು (ಹೇರಳವಾಗಿ) ಕೂಡಿಸಬೇಕು; ಅದು ಶತ್ರುಗಳ ಗರ್ವವನ್ನು ಕತ್ತರಿಸಿ ಹಾಕುವ ಆಯುಧ; ಅದಕ್ಕಿಂತ ಹಿರಿತವಾದ ಆಯುಧ ಬೇರೆ
         ಇಲ್ಲ.
760. ಒಳ್ಳೆಯ ಮಾರ್ಗದಲ್ಲಿ ವೃದ್ಧಿಯಾಗುವಂತೆ ಹಣವನ್ನು ಕೂಡಿಸಿಟ್ಟವರಿಗೆ ಊಳಿದ ಎರೆಡು ವಸ್ತುಗಳಾದ ಸದ್ಗುಣ ಮತ್ತು
         ಸಂತೋಷಗಳು ಏಕಕಾಲದಲ್ಲಿ ನೆನೆದಾಗ ಬರುವುವು.

ಅದ್ಗ್ಯಾಯ 77. ಪಡೆಗಳ ಹಿರಿಮೆ.

761. ಚತುರಂಗ ಬಲವನ್ನು ಕೂಡಿಕುಂಡು, ಗಾಯಗಳಿಗೆ ಅಂಜದೆ ಶತ್ರುಗಳೊಂದಿಗೆ ಹೋರಾಡಿ ಜಯ ತರುವಂಥ್ ಪಡೆಯು ಅರಸನ
         ಸೊತ್ತುಗಳಲ್ಲೆಲ್ಲಾ ಮಿಗಿಲಾದುದೆನಿಸುವುದು.
762. ತನ್ನ ಬಲ ಕುಂದಿ ಹೋರಾಟದಲ್ಲಿ ಅಳಿವು ಬಂದಾಗಲೂ, ಸಂಕಟಗಳಿಗೆ ಹೆದರದೆ ಅರಸನ ಬೆಂಗಾವಲಿಗೆ ನಿಲ್ಲುವ ಎದೆಗಾರಿಕೆ,
         ಪರಂಪರಾಗತವಾದ ಹಿರಿಮೆಯುಳ್ಳ ಪಡೆಗಲ್ಲದೆ ಬೇರೆ ಪಡೆಗಳಿಗೆ ಸಾಧ್ಯವಿಲ್ಲ.
763. ಇಲಿಗಳ ಸಮೂಹವು (ಶತ್ರುಸೇನೆ) ಭೋರ್ಗರೆವ ಕಡಲಿನಂತೆ ಗರ್ಜಿಸಿದರ ನಾಗರಹಾವಿಗೆ ಹಾನಿಯೇನು? ಆ ನಾಗರಹಾವು ಒಮ್ಮೆ ಉಸಿರು
         ಬಿಟ್ಟರೆ ಸಾಕು ಇಲಿಗಳೆಲ್ಲ ನಾಶವಾಗುವುದು.
764. ಯುದ್ಧ ಕಣದಲ್ಲಿ ಅಳಿವಿಲ್ಲದೆ, ಹಗೆಗಳ ವಂಚನೆಗೆ ತುತ್ತಾಗದೆ, ಪರಂಪರೆಯಿಂದ ಬಂದ ಪರಾಕ್ರಮವುಳ್ಳದೆ ಅರಸನ
         ಪಡೆಯೆನಿಸಿಕೊಳ್ಳುವುದು.
765. ಯಮನೇ ಕೋಪಗೊಂಡು ಮೇಲೆ ಬಿದ್ದರೂ, ಒಂದಾಗಿ ಕೂಡಿ ಎದುರಿಸಿ ನಿಲ್ಲುವ ಎದೆಗಾರಿಕೆಯುಳ್ಳದೇ ಪಡೆ ಎನಿಸಿಕೊಳ್ಳುವುದು.
766. ಪರಾಕ್ರಮ, ಅಭಿಮಾನ, ತನ್ನ ಹಿಂದಿನ ವೀರರು ತುಳಿದ ಹಾದಿಯಲ್ಲಿ ಮುನ್ನುಗ್ಗುವ ನಡೆ, ಅರಸನ ವಿಶ್ವಾಸ ಮನ್ನುವ ನಾಲ್ಕು
         ಗುಣಗಳೇ ಪಡೆಗೆ ಬೆಂಗಾವಲಾಗುವುದು.
767. ತನ್ನ ಮೇಲೆ ಬೀಳಲು ಬಂದ ಹಗೆಗಳ ಪಡೆಯನ್ನು ಹಿಮ್ಮೆಟ್ಟಿಸುವ ನೆಲೆಯನ್ನು ತಿಳಿದುಕೊಂಡು, ಶತ್ರು ಪಡೆ ತನ್ನ ಬಳಿ ಸಾರುವ
         ಮುನ್ನವೇ ತಾನೇ ಮುನ್ನುಗ್ಗಿ ನಡೆಯುವುದು ಪಡೆ.
768. ಮೇಲೆ ಬಿದ್ದು ಹೋರಾಡುವ ಕೆಚ್ಚು, ಪರಾಕ್ರಮವೂ ಇಲ್ಲವಾದರೂ, ಪಡೆಯು ತಾನು ಯುದ್ಧವನ್ನು ಎದುರಿಸಲು ಮಾಡಿಕೊಳ್ಳುವ
         ಸಿದ್ಧತ್ರ್ಯಿಂದಲೇ ಹಿರಿಮೆಯನ್ನು ಪಡೆಯುವುದು.
769. (ಗಾತ್ರದಲ್ಲಿ) ಕಿರಿದಾಗಿರುವುದು, ಅನುಚಿತವಾದ ಕೋಪ ಮತ್ತು ಬಡತನ ಇವು ಇಲ್ಲವಾದಲ್ಲಿ ಪಡೆಯು ಯುದ್ಧದಲ್ಲಿ ಗೆಲ್ಲುತ್ತದೆ.
770. ಸ್ಥೈರ್ಯವುಳ್ಳ ವೀರರು ಹಲವು ಮುಂದಿ ಇದ್ದರೂ, ಸರಿಯಾದ ನಾಯಕರು ಇಲ್ಲವಾದಲೇ ಆ ಪಡೆಗೆ ಹಿರಿಮೆ ಇಲ್ಲವಾಗುವುದು.

ಅಧ್ಯಾಯ 78. ಪಡೆಯ ಕೆಚ್ಚು

771. ಹಗೆಗಳೇ, ತನ್ನ ನಾಯಕನ ಮುಂದೆ ಎದುರಿಸಿ ನಿಲ್ಲಬೇಡಿರಿ! ಹಾಗೆ ಮಾಡಿದವರನೇಕರು ಕಲ್ಲಾಗಿ ನಿಂತಿದ್ದಾರೆ.
772. ಕಾಡಿನಲ್ಲಿ ಮೊಲಕ್ಕೆ ಗುರಿತಾಗುವಂತೆ ಹೊಡೆದ ಅಂಬಿಗಿಂತ, ಆನೆಯ ಮೇಲೆ ಹೊಡೆದು ಗುರಿ ತಪ್ಪಿದ ಶೂಲವನ್ನು ಹೊದಿರುವುದೇ
         ಮೇಲು.
773. (ಹಗೆಯನ್ನು ಎದುರಿಸುವ) ವೀರತ್ವವನ್ನು ಅತಿದೊಡ್ಡ ಶೌರ್ಯ ಪ್ರದರ್ಶನವೆಂದು ಹೇಳುವರು. ಅದೇ ಹಗೆಗೆ ಆಪತ್ತು ಬಂದಾಗ
         ಉದಾರವಾಗಿ ನಡೆದುಕೊಳ್ಳುವುದು ಶೌರ್ಯದ ಪರಮಾವಧಿಯಾಗುವುದು.
774. ತನ್ನ ಕೈಯಲ್ಲಿದ್ದ ಶೂಲದಿಂದ ಎದುರಿಸಿ ಬಂದ ಆನೆಯನ್ನು ತಿವಿದು ಬೇರೊಂದು ಆನೆಯನ್ನು ತಿವಿಯಲು ಶೂಲಕ್ಕಾಗಿ ಅರಸುತ್ತ ಬಂದ
         ಯೋಧನು, ತನ್ನ ಮೈಮೇಲೆ ಶೂಲವೊಂದು ಬಂದು ನಾಟಲು, ಅದನ್ನು ಕಿತ್ತು ತೆಗೆಯುತ್ತ ಆನಂದಪಡುವನು.
775. ಹಗೆಗಳನ್ನು ಕೋಪದಿಂದ ಅಗಲಿಸಿ ನೋಡುವ ಕಣ್ಣು, ಅವರು ಶೂಲದಿಂದ ಇರಿಯುವಾಗ, ಆ ನೋವನ್ನು ತಾಳಲಾರದೆ, ಒಮ್ಮೆ ಮುಚ್ಚಿ
         ತರೆದರೆ, ಅದು ಶೂರರಾದವರಿಗೆ ಸೋಲಿನ ಸಮಾನವಲ್ಲವೆ?
776. ವೀರನಾದವನು, ತಾನು (ಯುದ್ಧದಲ್ಲಿ) ಕಳೆದ ದಿನಗಳ ಲೆಕ್ಕ ಇಟ್ಟು, ಅವುಗಳಲ್ಲಿ ತೀವ್ರವಾದ ಗಾಯಗಳನ್ನು ಹೊಂದದಿರುವ
         ದಿನಗಳೆಲ್ಲ ವ್ಯರ್ಥವಾಯಿತೆಂದು ಭಾವಿಸುತ್ತಾನೆ.
777. ಬಿರುಗಾಳಿಯಂತೆ ಭೂಮಿಯಲ್ಲಿ ವ್ಯಾಪಿಸುವ ಕೀರ್ತಿಯನ್ನು ಬಯಸಿ ಪ್ರಾಣವನ್ನು ಲೆಕ್ಕಿಸದ ವೀರರು, ಕಾಲಿಗೆ ಕಟ್ಟುವ ವೀರ ಕಡಗವು
         ಅವರಿಗೆ ಅಲಂಕಾರವಾಗಿ ಶೋಭಿಸುವುದು.
778. ಯುದ್ಧ ಸಂಭವಿಸಿದಾಗ ಪ್ರಾಣಕ್ಕೆ ಹೆದರದಿರುವ ಯೋಧರು, ತಮ್ಮ ಅರಸನು, ಕೋಪದಲ್ಲಿ ಯ್ಯುದ್ಧವನ್ನು ಹಿಂದೆಗೆದುಕೊಂಡರೂ,
         ತಮ್ಮ ಶೌರ್ಯದಲ್ಲಿ ಕುಂದುವುದಿಲ್ಲ.
779. ತಾವು ಕೈಗೊಂಡ ಪ್ರತಿಜ್ಞೆಯನ್ನು ತಪ್ಪದೆ ನಡಿಸಿ ಸಾಯಲು ಸಿದ್ಧರಾಗಿರುವವರನ್ನು ಅವರು ತಪ್ಪಿದರೆಂದು ಹೇಳಿ ದಂಡಿಸುವ ಹಕ್ಕು
         ಯಾರಿಗಿದೆ?
780. ಪೂರೆಯುವ ಅರಸರ ಕಣ್ಣುಗಳು ಕಂಬನಿಯಿಂದ ತುಂಬುವಂತೆ (ಯುದ್ಧದಲ್ಲಿ) ಸಾವನ್ನಪ್ಪುವುದಾದರೆ, ಅಂಥ ಸಾವನ್ನು ಭಿಕ್ಷೆಯೆತ್ತಿಯಾದರೂ ಪಡೆದುಕೊಳ್ಳಬೇಕು.

No comments:

Post a Comment