Thirukkural in Kannada
ತಿರುಕ್ಕುಱಳ್ (ಹೊಸಗನ್ನಡ ಅನುವಾದಗಳೊಂದಿಗೆ)
|
|
|
|
|
ಧರ್ಮ ಭಾಗ: ಅಧ್ಯಾಯ: 11-20
|
ಅಧ್ಯಾಯ 11. ಕೃತಜ್ಞತೆಯ ಅರಿಕೆ
|
|
|
|
101. ಬೇರೊಬ್ಬರಿಂದ ನಮಗೆ ಉಪಕಾರವಾಗದಿದ್ದರೂ ನಾವು ಅವರಿಗೆ ಮಾಡಿದ ಉಪಕಾರಕ್ಕೆ, ಭೂಲೋಕವಾಗಲಿ ದೇವಲೋಕವಾಗಲೀ ಪ್ರತಿಯಾಗಿ ಬೆಲೆ ಕಟ್ಟಲು ಸಾಧ್ಯವಿಲ್ಲ.
102. ಸಕಾಲದಲ್ಲಿ ಮಾಡಿದ ಉಪಕಾರ ಕಿರಿದಾಗಿದ್ದರೂ ಈ ಲೋಕದ ವಿಸ್ತಾರಕ್ಕಿಂತ ಮಿಗಿಲಾಗಿ ಹಿರಿದೆನಿಸಿಕೊಳ್ಳುತ್ತದೆ.
103. ಫಲವನಳೆಯದೆ ಮಾಡಿದ ಉಪಕಾರದ ಭಾವನೆಯನ್ನು ಅಳೆದರೆ, ಅದು ಕಡಲಿಗಿಂತ ಹಿರಿದಾಗುತ್ತದೆ.
104. ಒಂದು ಸಣ್ಣ ತೆನೆಯಷ್ಟು ಉಪಕಾರವೆಸಗಿದರೂ ಅದರ ಫಲವನ್ನರಿತವರು ಅದನ್ನು ಹನೆಮರದಷ್ಟು ದೊಡ್ಡದಾಗಿ ಭಾವಿಸುತ್ತಾರೆ.
105. ಉಪಕಾರಕ್ಕಾಗಿ ಪ್ರತಿ ಉಪಕಾರ ಮಾಡುವುದು ಉಪಕಾರವೆನಿಸುವುದಿಲ್ಲ; ಉಪಕಾರ ಹೊಂದಿದವರ ಅರ್ಹತೆಯೇ ಉಪಕಾರವನ್ನು ಅಳೆಯುವ ಮಾನದಂಡ
106. ಕುಂದಿಲ್ಲದವರ ಗೆಳೆತನವನ್ನು ಮರೆಯಲಾಗದು, ಕಷ್ಟಕಾಲದಲ್ಲಿ ನೆರವಾದವರನಂಟನ್ನು ತೊರೆಯಲಾಗದು.
107. ತಮ್ಮ ದುಃಖಗಳನ್ನು ದೂರಮಾಡಲು ನೆರವು ನೀಡಿದವರ ಸ್ನೇಹವನ್ನು ಏಳೇಳು ಜನ್ಮಗಳಲ್ಲೂ ನೆನೆಯುವರು.
108. ಮಾಡಿದ ಉಪಕಾರವನ್ನು ಮರೆಯುವುದು ಒಳಿತಲ್ಲ(ಧರ್ಮವಲ್ಲ) ; ಉಪಕಾರವಲ್ಲದುದನ್ನು (ಅಪಕಾರ) ಅಂದೇ ಮರೆಯುವದು ಲೇಸು.
109. ಮುಂಚೆ ಉಪಕಾರ ಮಾಡಿದವರು, ಮುಂದೆ ಕೊಲ್ಲುವಂಥ (ಕಡು) ಕಷ್ಟಗಳನ್ನು ತಂದೊಡ್ಡಿದರೂ ಅವರು ಹಿಂದೆ ಮಾಡಿದ ಒಂದೇ ಒಂದು ಉಪಕಾರವನ್ನು (ಒಳಿತನ್ನು) ನೆನೆದರೆ ಸಾಕು. ಕಷ್ಟಗಳು ಪರಿಹಾರವಾಗುತ್ತದೆ.
110. ಯಾವ ಅಧರ್ಮ ಕೆಲಸಗಳನ್ನು ಮಾಡಿದವರಿಗೂ ಉದ್ಧಾರದ ಹಾದಿಯುಂಟು. ಒಬ್ಬರು ಮಾಡಿದ ಉಪಕಾರವನ್ನು ನೆನೆಯದೆ ಅಪಕಾರ ಮಾಡುವವನಿಗೆ ಉದ್ಧಾರವೇ ಇಲ್ಲ.
|
|
|
|
ಅಧ್ಯಾಯ 12. ಸಮದರ್ಶಿತನ
|
|
|
|
111. ಸ್ನೇಹಿತರು. ಶತ್ರುಗಳು ಆಗಂತುಕರು ಎಂಬ ಆಯಾ ಪಕ್ಷಗಳ ಬಗ್ಗೆ ನಿಷ್ಪಕ್ಷಪಾತವಾಗಿ ಒಪ್ಪಿ ನಡೆದುಕೊಂಡರೆ ಅದೇ ಸಮದರ್ಶಿತನವೆಂಬ ನಡತೆ(ಧರ್ಮ)ಯೆನಿಸಿಕೊಳ್ಳುತ್ತದೆ.
112. ಸಮದರ್ಶಿತನವುಳ್ಳವನ ಸಂಪತ್ತು (ಐಶ್ವರ್ಯ), ಅಳಿವಿಲ್ಲದೆ ಅವನ ವಂಶದವರಿಗೆಲ್ಲಾ ಆಧಾರವಾಗಿ ಒಳಿತನ್ನು ಉಂಟುಮಾಡುತ್ತದೆ.
113. ಸಮದರ್ಶಿತನವನ್ನು ತೊರೆದು ಉಂಟಾಗುವ ಸಂಪತ್ತು, (ಅದು ನಮಗೆ) ಒಳಿತನ್ನೇ ತಂದರೂ ಒಡನೆಯೇ ಕೈಬಿಡಬೇಕು.
114. ಸಮಭಾವವುಳ್ಳವರೆ, ಅಲ್ಲವೆ ಎಂಬುದನ್ನು ಅವರವರ ಮಕ್ಕಳ (ಸಂತತಿ) ಹಿನ್ನೆಲೆಯಿಂದ ತಿಳಿಯಬಹುದು.
115. ಬಡತನ, ಸಿರಿತನಗಳೆರಡೂ ಇಲ್ಲದಿರುವುದೇನಲ್ಲ, ಅವು ಅವರವರ ಕರ್ಮಫಲಗಳು; ಈ ಎರಡು ಸ್ಥಿತಿಗಳಲ್ಲೂ ಹೃದಯದಲ್ಲಿ ಸಮಭಾವದಿಂದ ನಡೆದುಕೊಂಡರೆ, ಸಂಪನ್ನರಾದವರಿಗೆ ಅದೇ ಅಲಂಕಾರವೆನಿಸಿಕೊಳ್ಳುವುದು.
116. ಸಮದರ್ಶಿತನವನ್ನು ಮರೆತು ಅಲ್ಲದುದನ್ನು ಮಾಡಿದರೆ ತಾನು ಕೆಡುತ್ತೇನೆ ಎಂಬುದನ್ನು ತನ್ನ ಮನಸ್ಸು ಅರಿಯಲಿ
117. ಸಮದರ್ಶಿಯಾಗಿ ಧರ್ಮದಿಂದ ಬಾಳಿದವನು, ಬಡತನದಲ್ಲಿ ಸಿಕ್ಕಿದರೂ ಅದನ್ನು ಕೇಡೆಂದು ಲೋಕ ಭಾವಿಸಿ ಅವನನ್ನು ಅಗೌರವಿಸುವುದಿಲ್ಲ.
118. ಮೊದಲೇ ತಾನು ಸಮನಾಗಿ ನಿಂತು, ಸರಿತೂಗುವ ತಕ್ಕಡಿ ಕೋಲಿನಂತೆ, ಒಂದು ಪಕ್ಕಕ್ಕೆ ಬಾಗದೆ ಸಮತೋಲವನ್ನು ತೋರಿಸುವುದು ತಿಳಿದವರಿಗೆ ಭೂಷಣ.
119. ಮನಸ್ಸು ಪಕ್ಷಪಾತವೆಳಸದಿರುವ ಸ್ಥಿತಿಯನ್ನು ಮುಟ್ಟಿದಮೇಲೆ, ನುಡಿಯಲ್ಲಿಯೂ ನೇರವಾಗಿರುವುದು ಸಮದರ್ಶಿತನವೆನಿಸಿಕೊಳ್ಳುವುದು.
120. ಪರರ ವಸ್ತುಗಳನ್ನು ತಮ್ಮ ವಸ್ತುಗಳಂತೆ ಪ್ರೀತಿಸಿ ಕಾಪಾಡಿದರೆ, ವಣಿಜರಿಗೆ ಅದೇ ನಿಜವಾದ ವ್ಯವಹಾರ ಧರ್ಮವೆನಿಸಿಕೊಳ್ಳುವುದು.
|
|
|
|
ಅಧ್ಯಾಯ 13. ಸಂಯಮ ಸಂಪನ್ನತೆ
|
|
|
|
121. ಸಂಯಮವು ಅಮರರ ನಡುವೆ ಒಯ್ದು ಸೇರಿಸುತ್ತದೆ; ಸಂಯಮರಾಹಿತ್ಯವು ನರಕದ ಕಾರಿರುಳಿನಲ್ಲಿ ತಳ್ಳುತ್ತದೆ.
122. ಸಂಯಮವನ್ನು ಸಂಪತ್ತಿನಂತೆ ಕಾಪಾಡಬೇಕು. ಅದಕ್ಕಿಂತ ಮಿಗಿಲಾದ ಸಂಪತ್ತು ಬಾಳಿನಲ್ಲಿ ಬೇರಿಲ್ಲ
123. ಅರಿಯಬೇಕಾದುದನ್ನು ಅರಿತು ನಲ್ವಟ್ಟೆಯಲ್ಲಿ ಸಂಯಮದಿಂದ ನಡೆದರೆ, ಸಂಯಮವು ಪ್ರತಿಯಾಗಿ ಅವನಿಗೆ ಕೀರ್ತಿಯನ್ನು ತರುತ್ತದೆ.
124. ತನ್ನ ನೆಲೆಯಲ್ಲಿ ಕದಲದೆ, ಸಂಯಮದಿಂದ ಬಾಳಿದರೆ ಅವನ ಬಾಳು ಪರ್ವತದ ಔನ್ನತ್ಯಕ್ಕಿಂತ ಹಿರಿದಾಗುತ್ತದೆ.
125. ಅಡಗಿ ನಡೆಯುವುದರಿಂದ ಎಲ್ಲರಿಗೂ ಒಳ್ಳೆಯದೇ ; ಅದರಲ್ಲಿಯೂ ಶ್ರೀಮಂತರು ಅದರಿಂದ ಮತ್ತಷ್ಟು ಶ್ರೀಮಂತರಾಗುತ್ತಾರೆ.
126. ತನ್ನ ಒಂದು ಜನ್ಮದಲ್ಲಿ ಆಮೆಯಂತೆ ಐದು (ಇಂದ್ರಿಯ) ಗಳನ್ನು ಅಡಗಿಸಿ ಕೊಳ್ಳಲುಸಮರ್ಥನಾದರೆ,
ಏಳು ಜನ್ಮಗಳಲ್ಲಿಯೂ ಅದು ಅವನಿಗೆ ರಕ್ಷಣೆ ನೀಡುವುದು.
127. ಯಾವುದನ್ನು ಅಡಗಿಸಲು ಸಾಧ್ಯವಾಗದಿದ್ದರೂ ನಾಲಗೆಯನ್ನು ಅಡಗಿಸಿಡಬೇಕು. ಅದನ್ನು ಅಡಗಿಸಲಾಗದಿದ್ದರೆ ತನ್ನ ಮಾತಿನ ದೋಷದಲ್ಲಿ ಸಿಕ್ಕಿ ದಿಃಖದಲ್ಲಿ ಮುಳುಗಬೇಕಾಗುತ್ತದೆ.
128. ಒಂದೇ ಒಂದು ಕೆಟ್ಟ ಮಾತಿನಿಂದ ಬೇರೊಬ್ಬರನ್ನು ದುಃಖಕ್ಕೀಡು ಮಾಡಿದರೂ ಅವನು ಗಳಿಸಿದ ಫಲವೆಲ್ಲ ಅವರಿಂದ ನಾಶವಾಗಿ ಬಿಡುವುದು.
129. ಕಿಚ್ಚಿನಿಂದ ಸುಟ್ಟಹುಣ್ಣು ಮಾಯುವುದು. ಆದರೆ ನಾಲಗೆಯ ನುಡಿ ಕಿಚ್ಚಿನಿಂದಾದ ಹುಣ್ಣು ಮಾಯುವುದಿಲ್ಲ.
121.
ಕೋಪವನ್ನು ಅಡಗಿಸಿ ಕಾದು, ಕಲಿತರಿವಿನಿಂದ ನಿಗ್ರಹಿಸಿ ಬಾಳಿದರೆ ಅವನ ಹಾದಿಯಲ್ಲಿ ಧರ್ಮದೇವತೆಯು ನುಸುಳಿ ನಿರೀಕ್ಷಿಸುವಳು.
|
|
|
|
ಅಧ್ಯಾಯ 14. ನಡತೆಯುಳ್ಳವನಾಗಿರುವುದು
|
|
|
|
131. ನಡೆತೆಯೇ ಎಲ್ಲರಿಗೂ ಮೇಲ್ಮೆಯನ್ನು ತರುವುದರಿಂದ, ಅದನ್ನು(ನಡತೆಯನ್ನು) ಪ್ರಾಣಕ್ಕಿಂತ ಮೇಲಾಗಿ ಕಾಪಾಡಿಕೊಳ್ಳಬೇಕು.
132.
ಕಷ್ಟಪಟ್ಟಾದರೂ ನಡತೆಯನ್ನು ಕಾದುಕೊಳ್ಳಬೇಕು; ಹಲವು ಶಾಸ್ತ್ರಗಳನ್ನು ಶೋಧಿಸಿ ತಿಳಿದುಕೊಂಡರೂ ಅದೇ ಬಾಳಿನ ಆಧಾರವೆಂದು ಅರಿವಾಗುವುದು.
133.
ಒಳ್ಳೆಯ ನಡತೆಯನ್ನು ಹೊಂದಿರುವುದೇ ಸತ್ಕುಲ ಸಂಪನ್ನತೆ; ಕೆಟ್ಟ ನಡತೆ ಕೀಳು ಹುಟ್ಟಿಗೆ ಕಾರಣವಾಗುವುದು.
134.
ಬ್ರಾಹ್ಮಣನಾದವನು ಕಲಿತ ವೇದಗಳನ್ನು ಮುರೆತರೆ ಮತ್ತೆ ಓದಿ ಕಲಿತುಕೊಳ್ಳಬಹುದು. ಆದರೆ ಕುಲ ಭೂಷಣವಾದ ನಡತೆ ಕಿಟ್ಟಲ್ಲಿ ಅವನ ಹುಟ್ಟು ಕೆಡುತ್ತದೆ.
135.
ಅಸೂಯಾಪರನಿಗೆ ಐಶ್ವರ್ಯವಿಲ್ಲದಿರುವ ಹಾಗೆ ನಡತೆ ಇಲ್ಲದವನಿಗೆ ಉನ್ನತಿಯೂ ಇಲ್ಲ.
136.
ಕೆಟ್ಟನಡತೆಯಿಂದ ಕೇಡುಂಟಾಗುವುದನ್ನರಿತು, ದೃಢಮನಸ್ಕರಾದ ಜ್ಞಾನಿಗಳು ಧರ್ಮಮಾರ್ಗದಿಂದ ಹಿಂದೆಗೆಯುವುದಿಲ್ಲ
137.
ಉತ್ತಮ ನಡವಳಿಕೆಯಿಂದ ಮೇಲ್ಮೆಯನ್ನು ಹೊಂದುವರು; ಕೀಳು ನಡವಳಿಕೆಯಿಂದ ಹೊಂದಬಾರದ ನಿಂದೆಗೆ ಗುರಿಯಾಗುವರು
138.
ಉತ್ತಮವಾದ ನಡವಳಿಕೆ ಸುಖದ ಬಾಳಿಗೆ ಅಂಕುರವಾಗುವುದು; ಕೀಳು ನಡವಳಿಕೆ ಎಂದಿಗೂ ವ್ಯಸನವನ್ನು ತರುತ್ತದೆ
139.
ಉತ್ತಮ ನಡೆವಳಿಕೆಯುಳ್ಳವರು ಮರೆತೂ ಕೆಟ್ಟ ನುಡಿಗಳನ್ನು ಬಾಯಿಂದ ಆಡಲು ಅಸಮರ್ಥರಾಗುತ್ತಾರೆ.
140. ಲೋಕದೊಂದಿಗೆ ಸಮರಸವಾಗಿ ಬಾಳದವರು, ಹಲವನ್ನು ಕಲಿತೂ ಅಜ್ಞಾನಿಗಳಂತೆ ಇರುತ್ತಾರೆ
|
|
|
|
ಅಧ್ಯಾಯ 15. ಪರಸ್ತ್ರೀಯನ್ನು ಬಯಸದಿರುವುದು
|
|
|
|
141.
ಪರನ ಒಡವೆಯಾಗಿರುವ ಹೆಂಡತಿಯನ್ನು ಅಪೇಕ್ಷಿಸಿವುದು ತಿಳಿಗೇಡಿತನ; ಧರ್ಮ ಅರ್ಥಗಳನ್ನು ಬಲ್ಲವರಲ್ಲಿ ಈ ಗುಣವಿಲ್ಲ
142.
ಧರ್ಮವನ್ನು ಮೀರಿ ನಿಂತವರಲ್ಲಿ, ಪರನ ಹೆಂಡತಿಯನ್ನು ಬಯಸಿ ಬೇರೊಬ್ಬನ ಮನೆ ಬಾಗಿಲಲ್ಲಿ ನಿಂತವನಷ್ಟು ಮೂರ್ಖ ಬೇರೆ ಇಲ್ಲ.
143.
ನಂಬಿದವರ ಮಡದಿಯಲ್ಲಿ ಕೇಳೆಣಿಸಿ ನಡದುಕೊಳ್ಳುವವರು, ನಿಶ್ಚಯವಾಗಿ ಒದುಕ್ಕಿದ್ದೂ ಸತ್ತವರ ಹಾಗೆ.
144.
ಸ್ವಲ್ಪವೂ ವಿವೇಚಿಸದೆ ಪರರ ಹೆಂಡತಿಯನ್ನು ಸೇರುವವರು ಎಷ್ಟು ದೊಡ್ಡವರಾದರೇನು
145.
ಸುಲಭವಾಗಿ ಸಿಕ್ಕಿದಳೆಂದು ಪರಸತಿಯನ್ನು ಕೂಡುವವನು, ಯಾವಾಗಲೂ ಅಳಿಯದೆ ಉಳಿವ ನಿಂದೆಗೆ ಗುರಿಯಾಗುತ್ತಾನೆ.
146.
ಹಗೆ, ಪಾಪ, ಭೀತಿ, ನಿಂದೆ ಎಂಬ ನಾಲ್ಕೂ ಪರಸತಿಯನ್ನು ಕೂಡುವವನನ್ನು ಬಿಟ್ಟು ಹೋಗುವುದಿಲ್ಲ.
147.
ಧರ್ಮಮಾರ್ಗದಲ್ಲಿ ನಡೆವ ಗೃಹಸ್ಥನೆಂದರೆ, ಪರಸ್ತ್ರೀಯ ಅಂಗಲಾವಣ್ಯವನ್ನು ಬಯಸದಿರುವವನೇ
148.
ಪರರ ಹೆಂಡತಿಯನ್ನು ನೋಡದ ಹಿರಿಯ ಕೆಚ್ಚು, ನಂಪನ್ನರಿಗೆ ಧರ್ಮಮಾತ್ರವಲ್ಲದೆ ಪರಿಪೂರ್ಣ ನಡತೆಯೂ ಆಗುತ್ತದೆ
149.
ಭೀಕರ ಕಡಲು ಆದರಿಸಿದ ಈ ಲೋಕದಲ್ಲಿ ಕೀರ್ತಿಶಾಲಿಗಳು ಯಾರೆಂದರೆ, ಪರರ ಹಕ್ಕಿನ ಹೆಂಡತಿಯ ತೋಳ್ತೆಕ್ಕೆಯಲ್ಲಿ ಸೇರದವರು
150.
ಧರ್ಮದ ಎಲ್ಲೆಯನ್ನು ಮೀರಿ ಅಲ್ಲದ್ದನ್ನು ಮಾಡಿದರೂ ಪರಸ್ತ್ರೀಯ ಅಂಗಲಾವಣ್ಯವನ್ನು ಬಯಸದಿರುವುದು ಒಳ್ಳೆಯದು.
|
|
|
|
ಅಧ್ಯಾಯ 16. ಸಹನ ಶೀಲತೆ
|
|
|
|
151. ತನ್ನನ್ನು ಅಗೆಯುವವರನ್ನು
ತಾಳಿಕೊಂಡಿರುವ ನೆಲದಂತೆಯೇ (ಭೂಮಿಯಂತೆ) ತಮ್ಮನ್ನು ನಿಂದಿಸುವವರನ್ನು ತಾಳಿಕೊಂಡಿರುವುದೇ ಹಿರಿಮೆ.
152. ಕೆಟ್ಟ ನಡವಳಿಕೆಯನ್ನು
ನಾವು ಪ್ರತಿಭಟಿಸಲು ಸಾಧ್ಯವಿದ್ದರೂ ಅದನ್ನು ತಾಳಿಕೊಳ್ಳಬೇಕು; ತಾಳಿಕೊಳ್ಳುವುದಕ್ಕಿಂತ, ಮಿಗಿಲಾದ ಮನಸ್ಸಿನ ನೆಲೆಯೆಂದರೆ, ಆ ಕೆಟ್ಟ ನಡವಳಿಕೆಯನ್ನು ಮನಸ್ಸಿನಿಂದ ಪೂರ್ತಿಯಾಗಿ
ತೊಡೆದುಹಾಕುವುದು.
153. ಅತಿಥಿಗಳನ್ನು ಸತ್ಕಾರಮಾಡದೇ ಕಳಿಸುವುದು ದಾರಿದ್ರ್ಯದೊಳಗೆ ದಾರಿದ್ರ್ಯ
ಎನಿಸಿಕೊಳ್ಳುತ್ತದೆ; (ಅತೇ ರೀತಿ) ಅರಿವಿಲ್ಲದ ಮೂರ್ಖರನ್ನು ತಾಳಿಕೊಳ್ಳುವುದು ಬಲ್ಲಾಳ್ತನದಲ್ಲಿ ಬಲ್ಲಾಳ್ತನವೆನಿಸಿಕೊಳ್ಳುವುದು.
154. ಸಂಪನ್ನತೆಯ ತನ್ನಿಂದ ಅಗಲದಂತಿರಬೇಕಾದರೆ, ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು. (ಸಂಪನ್ನತೆಯೆಂದರೆ ಗುಣ ಮತ್ತು ಸಿರಿ ಎರಡಕ್ಕೂ ಇಲ್ಲ ಅನ್ವಯಿಸಬಹುದು)
155. ನೋವೆಣಿಸಿದವರನ್ನು ಲೋಕ ಒಂದು ವ್ಯಕ್ತಿಯಾಗಿ ಗಣಿಸುವುದಿಲ್ಲ; ಅದೇ ತಾಳ್ಮೆಯುಳ್ಳವರನ್ನು ಲೋಕವು ಬಂಗಾರದಂತೆ ಮನಸ್ಸಿನೊಳಗಿಟ್ಟುಕೊಂಡು
ಗೌರವಿಸುತ್ತದೆ.
156. ಕೇಡೆಣಿಸಿದವರಿಗೆ ಒಂದು ದಿನದ ಸುಖ ಮಾತ್ರ ದೊರೆಯುವುದು. ಆದರೆ ಅವರನ್ನು ತಾಳ್ಮೆಯಿಂದ ಕ್ಷಮಿಸುವವರಿಗೆ, (ಲೋಕವು) ಅಳಿಯುವವರೆಗೂ ಕೀರ್ತಿ ಲಭಿಸುವುದು.
157. ಬೇರೆಯುವರು ತನಗೆ ಕೆಟ್ಟದ್ದನ್ನು ಮಾಡಿದರೂ, ಅವರಿಗದರಿಂದುಂಟಾಗುವ ಕೇಡನ್ನು ನೆನೆದು ಮರುಕಪಟ್ಟು, ಅವರಿಗೆ ಅಧರ್ಮವೆಣಿಸದಿರುವುದೇ ಮೇಲನಿಸುತ್ತದೆ.
158. ಸೊಕ್ಕಿನಿಂದ ಕೆಟ್ಟದ್ದನ್ನು ಮಾಡಿದವರಿಗೆ, ತಮ್ಮಲ್ಲಿರುವ ತಕ್ಕ ನಡತೆಯಿಂದ ತಾಳಿಕೊಂಡು ಅವರನ್ನು ಗೆಲ್ಲಬೇಕು.
159. ತೊರೆದವರ (ಋಷಿಗಳ) ಹಾಗೆ ಶುದ್ದಿಯುಳ್ಳವರೆಂದರೆ, ಕೆಟ್ಟವರ ಬಾಯಿಂದ ಆಡುವ ಕೆಡು ನುಡಿಗಳನ್ನು ತಾಳಿಕೊಂಡು ಇರುವವರು.
160. ಉಪವಾಸ ವ್ರತಗಳನ್ನು ಆಚರಿಸಿ ತಾಳುವವರು ಹಿರಿಯುರು; ಆದರೆ ಕೆಟ್ಟವರಾಡುವ ಕೆಡು ನುಡಿಗಳನ್ನು ತಾಳಿಕೊಳ್ಳುವವರಿಗಿಂತ ಎರಡನೆಯವರು
ಅವರು.
|
|
|
|
ಅಧ್ಯಾಯ 17. ಅಸೂಯೆ
ಪಡದಿರುವುದು
|
|
|
|
161.
ಒಬ್ಬನ್ನು ತನ್ನ ಹೃದಯದಲ್ಲಿ ಅಸೂಯೆ ಇಲ್ಲದೆ ಬಾಳುವ
ಸ್ವಭಾವವನ್ನು ತನ್ನ ನಡತೆಯ ಮಾರ್ಗವಾಗಿ ಕೈಕೊಂಡು ಕಾಪಾಡಬೇಕು
162.
ಯಾರ ವಿಷಯದಲ್ಲಾಗಲೀ ಅಸೂಯೆ ಪಡದಿರಬೇಕು; (ತಾನು) ಹೊಂದತಕ್ಕ ಮೇಲಾದ ಪ್ರಯೋಜನಗಳಲ್ಲಿ ಅದಕ್ಕೆ ಸಮಾನವಾದುದು
ಬೇರೊಂದಿಲ್ಲ.
163.
ತನಗೆ ಧರ್ಮ, ಸಂಪದಗಳೆರಡೂ ಬೇಡವೆನ್ನುವವನೇ ಬೇರೊಬ್ಬರ ಸಿರಿಯನ್ನು ಕಂಡು ಸಂತೋಷಿಸದೆ ಕರುಬುತ್ತಾನೆ.
164.
ಕೀಳಾದ ಹಾದಿಯಿಂದ ಸಂಕಟಗಳೇರ್ಪಡುವುದನ್ನು ಅರಿತು ತಿಳಿದವರು ಅಸೂಯೆಯಿಂದ ಅಲ್ಲದುದನ್ನು ಮಾಡಲಾರರು.
165.
ಅಸೂಯಾಪರತೆಯುಳ್ಳವರಿಗೆ ಬೇರೆ ಹಗೆ ಇಲ್ಲದಿದ್ದರೂ ಅದೊಂದೇ ಸಾಕು ಕೇಡುಂಟು ಮಾಡಲು.
166.
ಪರರಿಗೆ (ಕೊಡುಗೈಯಿಂದ) ಕೊಡುವುದನ್ನು ಕಂಡು ಕರುಬುವನು, ಅವನ ಪರಿವಾರದೊಡನೆ ಹೊಟ್ಟೆ ಬಟ್ಟೆಗಿಲ್ಲದೆ ಕೆಡುತ್ತಾನೆ.
167.
ಅಸೂಯೆ ಉಳ್ಳವನನ್ನು ಲಕ್ಷ್ಮಿ ಸಹಿಸದೆ ಅವನನ್ನು ತನಕ್ಕ
ದರಿದ್ರ ಲಕ್ಷ್ಮಿಗೆ ತೋರಿಸಿ ಬಿಡುವಳು.
168.
ಅಸೂಯೆಯೆಂಬ ಪಾಪಿ (ತನಗೆ ಅವಕಾಶ ಕೊಟ್ಟವನ) ಸಿರಿಯನ್ನು ನಾಶ ಪಡಿಸುವುದಲ್ಲದೆ, ಅವನನ್ನು ಬೆಂಕಿಯಲ್ಲಿ (ನರಕದಲ್ಲಿ) ತಳ್ಳಿ ಬಿಡುವುದು.
169.
ಅಸೂಯೆಯುಳ್ಳವನ ಸಿರಿಯೂ ಒಳ್ಳೆಯವನ ಕೇಡೂ ಇವೆರಡೂ ವಿಚಾರಾರ್ಹವಾದುದು. (ಇವೆರಡೂ ವೈಪರೀತ್ಯಗಳಿಗೆ ಕಾರಣವೇನು ಎಂಬುದು ವಿಚಾರ ಮಾಡ ಬೇಕಾದ ಅಂಶ)
170.
ಅಸೂಯೆಯಿಂದ ಮೇಲ್ಮೆ ಪಡೆದವರೂ, ಅಸೂಯೆ ಇಲ್ಲದೆ ಮೇಲ್ಮೆಯನ್ನು ತೊರೆದವರೂ ಈ ಲೋಕದಲ್ಲಿಲ್ಲ.
|
|
|
|
ಅಧ್ಯಾಯ 18. ಲೋಭ
ಪಡದಿರುವುದು
|
|
|
|
171.
ಸಮಭಾವನೆಯಿಲ್ಲದೆ (ಇತರರಿಗೆ ಸೇರಿದ) ಒಳ್ಲೆಯ ವಸ್ತುಗಳನ್ನು ಕಂಡು ಲೋಭಿಸಿದರೆ ಕುಲವು ಕೆಡುವುದಲ್ಲದೆ, ಪಾಪ ಕಾರ್ಯಗಳೂ ಬಂದು ಸೇರುತ್ತದೆ.
172.
ಅಪಕೀರ್ತಿ ತರುವ ಕೆಲಸಕ್ಕೆ ನಾಚುವವರು ಅಧಿಕ ಫಲಗಳ ಆಶೆಗೆ
ನಿಂದೆ
ತರುವ ಕೆಲಸವನ್ನು ಮಾಡರು
173.
ಶಾಶ್ವತವಾದ ಹಿರಿಯ ಸುಖವನ್ನು ಬಯಸುವವರು, ಕ್ಷಣಿಕವಾದ ಅಲ್ಪ ಸಂತೋಷವನ್ನು ಬಯಸಿ ಅಧರ್ಮ ಕಾರ್ಯಗಳನ್ನು ಮಾಡರು
174.
ಇಂದ್ರಿಯಗಳನ್ನು ಗೆದ್ದ ಕೀಳುತನವಿಲ್ಲದೆ ಪೂರ್ಣ ದೃಷ್ಟಿಯುಳ್ಳವರು, ತಾವು ಏನೂ ಇಲ್ಲದವರೆಂದು ಇತರರ ಸಂಪತ್ತನ್ನು ಬಯಸಿ ಲೋಭತನವನ್ನು ತೋರಿಸರು.
175.
ಲೋಭದಿಂದ ಯಾರಿಗಾದರೂ ಕೆಟ್ಟುದನ್ನು ಮಾಡಿದರೆ ಸೂಕ್ಷ್ಮವಾಗಿಯೂ
ವ್ಯಾಪಕವಾಗಿಯೂ ಇರುವ ಅರಿವಿನಿಂದ ಪ್ರಯೋಜನವೇನು?
176.
ದೈವಕೃಪಯನ್ನು ಬಯಸಿ ಧರ್ಮಮಾರ್ಗದಲ್ಲಿ ನಿಂತವನು, ಮತ್ತೊಬ್ಬನ ಸಂಪತ್ತನ್ನು ಲೋಭಿಸಿ ಹೊಲ್ಲ ವಿಚಾರಗಳನ್ನು ಮನದಲ್ಲಿ ಎಣಿಸಿದರೆ
ಒಡನೆಯೇ ಕೆಡುತ್ತಾನೆ.
177.
ಲೋಭದಿಂದ ದಕ್ಕುವ ಸಂಪತ್ತನ್ನು ಬಯಸದಿರು. ಬೆಳೆಯುವಾಗ ಆದರ ಫಲ (ಪರಿಣಾಮ) ಒಳ್ಳೆಯದಾಗುವುದಿಲ್ಲ.
178.
ಒಬ್ಬನ ಸಂಪತ್ತು ಅಳಿಯದಿರುವ ಮಾರ್ಗ ಯಾವುದೆಂದರೆ ಪರರ
ಕೈಯ ಸಂಪತ್ತನ್ನು ತಾನು ಬಯಸದಿರುವುದು.
179.
ಧರ್ಮಮಾರ್ಗವನ್ನು ತಿಳಿದು, ಲೋಭಕೊಳಗಾಗದೆ ಇರುವ, ವಿಚಾರ ಸಂಪನ್ನರನ್ನು ಸಮಯ ನೋಡಿ ಸಿರಿ (ಲಕ್ಷ್ಮಿ) ಯು ತಾನೆ ಬಂದು ಸೇರುವಳು.
180.
ತನ್ನ ಉನ್ನತಿಯನ್ನು ಎಣಿಸಿದೆ ಹೆರರ ಸಂಪತ್ತನ್ನು ಲೋಭಿಸಿದರೆ
ಅದು ಅಳಿವನ್ನು ತರುತ್ತದೆ; ಹಾಗೆ ಲೋಭಿಸದ ಹಿರಿಮೆಯ ಬಾಳು ಜಯವನ್ನು ತರುತ್ತದೆ.
|
|
|
|
ಅಧ್ಯಾಯ 19. ಚಾಡಿ
ಹೇಳದಿರುವುದು
|
|
|
|
181.
ಒಬ್ಬನು ಸತ್ಯವನ್ನು ನುಡಿಯದೆ ಪಾಪ ಕಾರ್ಯಗಳಲ್ಲಿ ತೊಡಗಿದ್ದರೂ
ಅವನು “ಹಿಂದಿನಿಂದ ಆಡಿಕೊಳ್ಳುವುದಿಲ್ಲ” ಎಂದು (ಬೇರೆಯವರಿಂದ) ಹೇಳಿಸಿಕೊಳ್ಳುವುದು ಒಳ್ಳೆಯದು.
182.
ಧರ್ಮವನ್ನು ಹಳಿದು ಪಾಪ ಕೃತ್ಯಗಳನ್ನು ಎಸಗುವುದಕ್ಕಿಂತ
ಕೆಟ್ಟದು, ಹಿಂದಿನಿಂದ ಹಳಿದು ಎದುರಿಗೆ ತೋರಿಸುವ ಕಪಟ ನಗೆ.
183.
ಹಿಂದಿನಿಂದ ಅಡಿಕೊಂಡು, ಸುಳ್ಳು ಹೇಳುತ್ತ ಉಸಿರಿಟ್ಟುಕೊಂಡು ಬಾಳುವುದಕ್ಕಿಂತ, ಸಾಯುವುದು ಧರ್ಮವು ಸಾರುವ ಸಿರಿಯನ್ನು ತರುತ್ತದೆ.
184.
ಕಣ್ಣೆದುರಿನಲ್ಲಿ ನಿಂತು ನಿರ್ದಾಕ್ಷಿಣ್ಯವಾಗಿ ಆಡಿದರೂ
ತಪ್ಪಲ್ಲ; ಹಿಂದಿನಿಂದ ವಿಚಾರಮಾಡದ ಮಾತುಗಳನ್ನು ಆಡಬಾರದು.
185.
ಮನಸ್ಸಿಲ್ಲದಿದ್ದರೂ ಧರ್ಮವನ್ನು ಹೊಗಳಿ ಆಡುವವನ ಪೊಳ್ಳುತನವು, ಅವನ ಹಿಂದಿನಿಂದ ಆಡಿಕೊಳ್ಳುವ ಕೀಳುಗುಣದಿಂದ ಬಯಲಾಗುತ್ತದೆ.
186.
ಪರನಿಂದೆ ಮಾಡುವವನ ದೋಷಗಳನ್ನೂ ಇತರರು ಸಮಯವರಿತು ಆಡಿ
ಅವನನ್ನು ನಿಂದೆಗೆ ಗುರಿಮಾಡುತ್ತಾರೆ.
187.
ಸ್ನೇಹದ ಮಾತುಗಳನ್ನಾಡಿ ಗೆಳೆತನವನ್ನು ಬೆಳಸಿಕೊಳ್ಳಲರಿಯದವರು, ಹಿಂದಿನಿಂದ ಭೇದದ ಮಾತುಗಳನ್ನಾಡಿ ಗೆಳೆಯರನ್ನು ಅಗಲಿಸುವರು
188.
ಸಮೀಪದ ಒಡನಾಡಿಗಳ (ಬಂಧುಗಳ) ದೋಷವನ್ನು ಹಿಂದಿನಿಂದ ಎತ್ತಿ ಆಡಿ, ಅಪಪ್ರಚಾರ ಮಡುವ ಗುಣವುಳ್ಳವರು ತಮಗೆ ಅಪರಿಚಿತರಾದ ವ್ಯಕ್ತಿಗಳ ಬಗ್ಗೆ
ಏನು ತಾನೆ ಮಾಡಲಾರರು.
189.
ಒಬ್ಬರನ್ನು ಹಿಂದಿನಿಂದ ಆಡಿಕೊಳ್ಳುವವನ ಭಾರವನ್ನು ಭೂಮಿಯು
“ಹೊರುವುದು ತನ್ನ ಧರ್ಮ” ವೆಂದು ತಿಳಿದು ತಾಳಿಕೊಳ್ಳುವುದಲ್ಲವೆ?
190.
ಪರರ ಕುಂದುಗಳನ್ನು ಕಾಣುವಂತೆ ತನ್ನ ಕುಂದುಗಳನ್ನೂ ಕಾಣಬಲ್ಲವನಾದರೆ
ನೆಲೆಯಾದ ಬಾಳಿಗೆ ಕೇಡುಂಟೆ?
|
|
|
|
ಅಧ್ಯಾಯ 20. ವ್ಯರ್ಥಾಲಾಪ
ಮಾಡದಿರುವುದು.
|
|
|
|
191. ಹಲವರು ಜುಗುಪ್ಸೆ ಪಡುವಂತೆ ಫಲವಿಲ್ಲದ ಮಾತುಗಳನ್ನಾಡುವವನನ್ನು ಎಲ್ಲರೂ ಹಗುರವಾಗಿ
ಕಾಣುತ್ತಾರೆ.
192. ಹಲವರ ಮುಂದೆ ಫಲವಿಲ್ಲದ ಮಾತುಗಳನ್ನಾಡುವುದು, ಗೆಳೆಯರಲ್ಲಿ ಅಹಿತವನ್ನು ಎಣಿಸುವುದಕ್ಕಿಂತ
ಕೆಟ್ಟದು.
193. ಒಬ್ಬನು ಫಲವಿಲ್ಲದ ವಿಷಯಗಳನ್ನು ವಿಸ್ತರಿಸಿ ಬಣ್ಣಕಟ್ಟಿ ಹೇಳುವುದರಿಂದ ಅವನು
ಅಸಭ್ಯನೆಂಬುದು ಲೋಕಕ್ಕೆ ಪ್ರಕಟವಾಗುವುದು.
194. ಗುಣವಿಲ್ಲದ ವ್ಯರ್ಥ ಮಾತುಗಳನ್ನು ಹಲವರ ಬಳಿ ಆಡುವುದರಿಂದ, (ಒಬ್ಬನನ್ನು) ಅಸಭ್ಯನನ್ನಾಗಿ
ಮಾಡಿ ಅವನನ್ನು ಶ್ರೇಯಸ್ಸಿನಿಂದ ದೊರಮಾಡುತ್ತದೆ.
195. ಒಳ್ಳೆಯ ಗುಣಶಾಲಿಗಳಾದವರು, ಫಲವಿಲ್ಲದ ಮಾತುಗಳನ್ನು ಆಡಿದರೆ, ಅವರ ಕೀರ್ತಿ, ಘನತೆಗಳು
ಅಳಿಯುವುದು.
196. ವ್ಯರ್ಥಾಲಾಪವನ್ನು ಹಲವು ಬಗೆಯಲ್ಲಿ ಮೆಚ್ಚಿ ಕೊಂಡಾಡುವವನನ್ನು ಮನುಷ್ಯ ಎಂದು
ಕರೆಯಲಾಗದು;ಅಂಥವನನ್ನು ಮಾನವ ಕುಲದಲ್ಲಿ ಕಾಣಿಸಿಕೊಂಡ ಚೊಳ್ಳು (ಹುರುಳಿಲ್ಲದವನು) ಎಂದು ಕರೆಯಬೇಕು.
197. ವಿಚಾರವಂತರು, ಹಿತವಲ್ಲದ ಮಾತುಗಳನ್ನು ಆಡಿದರೂ ಆಡಲಿ; ಫಲವಿಲ್ಲದ ಮಾತುಗಳನ್ನು
ಆಡದಿರುವುದು ಮೇಲು.
198. ಮಹೋನ್ನತ ಫಲಗಳನ್ನು ಅರಸುವ ಆಕಾಂಕ್ಷೆಯುಳ್ಳ ಅರಿವುಳ್ಳವರು, ಶ್ರೇಯಸ್ಸು ತಾರದ
ಮಾತುಗಳನ್ನು ಆಡರು.
199. ಅಜ್ಞಾನ, ಕಲಂಕಗಳಿಂದ ದೊರವಾದ ದೃಷ್ಟಿಯುಳ್ಳವರು ಒಮ್ಮೆ ಮೈಮರೆತೂ ಅರ್ಥವಿಲ್ಲದ
ಮಾತುಗಳನ್ನು ಆಡರು.
200. ಮಾತುಗಳಲ್ಲಿ ಫಲವಿರುವುದನ್ನೇ ಆಡಬೇಕು; ಫಲವಿರದ ಮಾತುಗಳನ್ನು ಆಡಲೇ ಕೂಡದು.
|
No comments:
Post a Comment