Thirukkural in Kannada
ತಿರುಕ್ಕುಱಳ್ (ಹೊಸಗನ್ನಡ ಅನುವಾದಗಳೊಂದಿಗೆ)
|
|
|
|
|
ಅರ್ಥ ಭಾಗ: ಅಧ್ಯಾಯ: 49-58
|
ಅಧ್ಯಾಯ 49. ಕಾಲ
ಪರಿಜ್ಞಾನ
|
|
|
|
481. ಕಾಗೆಯು (ತನಗಿಂತ ಬಲಶಾಲಿಯಾದ) ಗೂಬೆಯನ್ನು ಹಗಲು ವೇಳೆ ಗೆದ್ದುಬಿಡುತ್ತದೆ. ಅದೇ
ರೀತಿ ತಮ್ಮ ಶತ್ರುಗಳನ್ನು ಗೆಲ್ಲಬಯಸುವ ಅರಸರು ಸೂಕ್ತ ವೇಳೆಗಾಗಿ ಕಾಯಬೇಕು.
482. ಸೂಕ್ತ ಸಮಯವರಿತು ಕಾರ್ಯಸಾಧಿಸಲು ಯತ್ನಿಸಬೇಕು; ಅದೇ ಯಶಸ್ಸು ಜಾರಿಕೊಳ್ಳದಂತೆ
ಬಂಧಿಸುವ ಪಾಶವಾಗುವುದು.
483. ಸೂಕ್ತ ಕಾಲವನ್ನು ಅರಿತು, ತಕ್ಕ ಸಾಧನಗಳೊಂದಿಗೆ, ಕೈಗೊಂಡ ಕಾರ್ಯವನ್ನು ನಿರ್ವಹಿಸಿದಲ್ಲಿ,
ಅರಸನಾದವನಿಗೆ ಕಠಿಣವಾದ ಕಾರ್ಯವೆಂಬುದು ಉಂಟೆ?
484. ತಕ್ಕ ಕಾಲವನ್ನು ತಿಳಿದು, ತಕ್ಕ ಸ್ಥಳದಲ್ಲಿ ಕಾರ್ಯವನ್ನು ನಡೆಸಿದರೆ, ಲೋಕವೇ
ತನ್ನದಾಗಬೇಕೆಂದು ಬಯಸಿದರೂ ಅದು ಕೈಗೊಡುತ್ತದೆ.
485. ಲೋಕವನ್ನೇ ಜಯಿಸಲು ಇಚ್ಚಿಸುವವರು, ತಮ್ಮ ಮನಸ್ಸನ್ನು ಚಂಚಲ ಗೊಳಿಸದೆ, ತಕ್ಕ ವೇಳೆಯನ್ನು
ನಿರೀಕ್ಷಿಸುತ್ತ ಕಾಯುವರು.
486. ಹೋರಾಡಲು ಸಿದ್ದವಾಗ ತಗರು, ತಾಗುವುದಕ್ಕೆ ಮುಂಚೆ, ಹಿಂದ ಸರಿಯುವಂತೆ, ಶಕ್ತಿಯುಳ್ಳವನು
ಕಾಲವನ್ನು ನಿರೀಕ್ಷಿಸಿ ಅಡಗಿ ಕಾಯುತ್ತಾನೆ.
487. ಸೂಕ್ಷ್ಮವಾದ ಅರಿವುಳ್ಳವರು, (ಹಗೆಗಳು ಮಾಡಿದ ಕೆಡುಕಿಗೆ) ಒಡನೆಯೇ ಬಹಿರಂಗವಾಗಿ
ಕೋಪಿಸಿಕೊಳ್ಳದೆ, ತಕ್ಕ ಕಾಲವನ್ನು ಎದುರು ನೋಡುತ್ತ ಮನಸ್ಸಿನಲ್ಲೇ ಅದನ್ನು ಅಡಗಿಸಿಕೊಳ್ಳುವರು.
488. ಹಗೆಗಳನ್ನು ಕಂಡಾಗ, ತಾಳಿಕೊಂಡು ನಡೆಯಬೇಕು. ಆ ಹಗೆಗಳ ಅಂತ್ಯಕಾಲ ಬಂದಾಗ ಅವರ
ತಲೆ (ತಾನಾಗಿಯೇ) ಕೆಳಬಾಗುತ್ತದೆ.
489. ದುರ್ಲಭವಾದ ಕಾಲವು ಒದಗಿಬಂದಾಗ, ಅದರ ಲಾಭವನ್ನು ಪಡೆದುಕೊಂಡು ಮಾಡಲು ಅಸಾಧ್ಯವಾದ
ಕಾರ್ಯಗಳನ್ನೆಲ್ಲ ಮಾಡಿ ಮುಗಿಸಬೇಕು.
490. ತಾಳಿಕೊಂಡಿರಬೇಕಾದ ಸಮಯದಲ್ಲಿ ಕೊಕ್ಕರೆಯಂತೆ ಸಮಾಧಾನಿಯಾಗಿರ ಬೇಕು; ತನಗೆ ಅನುಕೂಲವಾದ
ಸಮಯ ಬಂದಾಗ, ಅದೇ ಕೊಕ್ಕರೆಯಂತೆ ಕುಕ್ಕಬೇಕು. (ಎದುರಿಸಬೇಕು)
|
|
|
|
ಅಧ್ಯಾಯ 50. ಸ್ಥಲಪರಿಜ್ಞಾನ
|
|
|
|
491. (ಶತ್ರುವನ್ನು) ಮುತ್ತುವುದಕ್ಕೆ ತಕ್ಕ ಸ್ಥಳವನ್ನು ಕಂಡುಕೊಳ್ಳದೆ (ಅರಸನಾದವನು)
ಅವನಿಗೆ ಎದುರಾಗಿ ಯಾವ ಕಾರ್ಯದಲ್ಲೂ ತೊಡಗಬಾರದು; ಹಗೆಯನ್ನು ನಿಂದಿಸಲೂ ಬಾರದು.
492. ಯುದ್ದಕುಶಲಿಗಳಾದ ಶಕ್ತಿವಂತರಿಗೂ, ಭದ್ರವಾದ ಕೋಟೆಯ ರಕ್ಷಣೆಯಿದ್ದರೆ, ಅದರಿಂದುಂಟಾಗುವ
ಲಾಭಗಳು ಹಲವು.
493. ತಕ್ಕ ಸ್ಥಳವನ್ನು ನೋಡಿ, ತಮ್ಮನ್ನು ಕಾದುಕೊಂಡು ಹಗೆಗಳನ್ನು ಎದುರಿಸಿ ಹೋರಾಡಿದರೆ,
ಶಕ್ತಿ ಇಲ್ಲದವರೂ ಶಕ್ತಿವಂತರಾಗಿ ಗೆಲ್ಲುವರು.
494. ತಕ್ಕ ಸ್ಥಳವನ್ನು ಅರಿತು (ಹಗೆಗಳನ್ನು) ಸಮೀಪಿಸಿ ಹೋರಾಡುವವರಾದರೆ, ಅವರನ್ನು
ಗೆಲ್ಲಲು ಬಗೆದು ಬಂದ ಹಗೆಗಳೂ ತಮ್ಮ ಆಲೋಚನೆಯನ್ನು ಕೈಬಿಡುವರು.
495. ಆಳವಾದ ಹೊನಲಿನಲ್ಲಿ (ನೀರಲ್ಲಿ) ಇತರ ಪ್ರಾಣಿಗಳನ್ನು ಗೆಲ್ಲುವ ಮೊಸಳಿ ಆ ಹೊನಲಿನಿಂದ
ತಪ್ಪಿ ಹೊರಬಂದರೆ, ಅದನ್ನು ಇತರ ಪ್ರಾಣಿಗಳು ಗೆದ್ದುಬಿಡುತ್ತವೆ.
496. ಬಲವಾದ ಚಕ್ರಗಳುಳ್ಳ ದೊಡ್ಡ ತೇರು ಕಡಲಿನಲ್ಲಿ ಓಡಲು ಸಾಧ್ಯವಿಲ್ಲ; ಕಡಲಿನಲ್ಲಿ
ಓಡುವ ನಾವೆಗಳೂ ನೆಲದಲ್ಲಿ ಓಡಲು ಸಾಧ್ಯವಿಲ್ಲ.
497. ದೋಷವಿಲ್ಲದೆ, ಆಲೋಚಿಸಿ, ತಕ್ಕ ಸ್ಥಳದಲ್ಲಿ ಮಾಡಬೇಕಾದ ಕೆಲಸವನ್ನು ಕೈಕೊಂಡರೆ.
ಧೈರ್ಯವೊಂದಲ್ಲದೆ ಬೇರೆ ಸಾಧನದ ಅಗತ್ಯವಿಲ್ಲ.
498. ಕಿರಿದಾದ ಪಡೆ ನಿಲ್ಲಬೇಕಾದ ಎಡೆಯಲ್ಲಿ ಹಿರಿದಾದ ಪಡೆ ಆಕ್ರಮಿಸಿದರೆ, ಆ ಪಡೆಯ
ಬಲ ನಾಶವಾಗುತ್ತದೆ.
499. ಹಗೆಗಳಿಗೆ ಕೋಟೆ ಮೊದಲಾದ ರಕ್ಷಣೆ, ಸೇನಾಬಲಗಳು ಇಲ್ಲವಾದರೂ ಅವರ ಸ್ವಂತ ನೆಲದಲ್ಲಿ
ಹೊಕ್ಕು ಅವರೊಂದಿಗೆ ಹೋರಾಡುವುದು ಅಸಾಧ್ಯ.
500. ವೀರಯೋಧನಂತಿರುವ ಧೈರ್ಯಶಾಲಿಯಾದ ಆನೆ ಕೂಡ ಕಾಲು ಹುಗಿಯುವ ಕೆಸರು ಮಣ್ಣಿನಲ್ಲಿ
ಸಿಕ್ಕಿಬಿದ್ದಾಗ, ನರಿಗಳು ಅದನ್ನು ಕೊಂದುಬಿಡುತ್ತದೆ.
|
|
|
|
ಅಧ್ಯಾಯ 51. ಅರಿತು
ನಂಬುವಬಗೆ
|
|
|
|
501. (ಒಬ್ಬನ) ಧಾರ್ಮಿಕ ನಡತೆ, ಧನಾಸಕ್ತಿ, ಕಾಮಾಸಕ್ತಿ, ಜೀವಭಯ- ಈ ನಾಲ್ಕು ಗುಣಗಳನ್ನು
ಶೋಧಿಸಿದ ತರುವಾಯವೇ ಅವನನ್ನು (ಮಂತ್ರಿ) ಕೆಲಸಕ್ಕೆ ಅರ್ಹನೆಂದು ತೀರ್ಮಾನಿಸಬೇಕು.
502. ಉತ್ತಮ ಕುಲದಲ್ಲಿ ಹುಟ್ಟಿ, ದೋಷಗಳನ್ನು ನೀಗಿಕೊಂಡು ನಿಂದಾತ್ಮಕ ಕಾರ್ಯಗಳನ್ನು
ಮಾಡಲಂಜುವ, ಲಜ್ಜೆಯುಳ್ಳವನನ್ನೇ ನಂಬಿ (ಒಂದು ಕೆಲಸಕ್ಕೆ) ತೀರ್ಮಾನಿಸಬೇಕು.
503. ದುರ್ಲಭ ಗ್ರಂಥಗಳನ್ನು ಓದಿ ತಿಳಿದು, ದೋಷಗಳನ್ನು ನಿವಾರಿಸಿಕೊಂಡವರನ್ನು ಪರೀಕ್ಷಿಸುವಾಗಲೂ
(ಅವರಲ್ಲಿ) ಅಜ್ಞಾನವಿಲ್ಲದಿರುವುದು ಅಪರೂಪವೆಂಬುದು ಕಂಡು ಬರುವುದು.
504. (ಅರಸನಾದವನು) (ಒಬ್ಬನ) ಗುಣ, ದೋಷಗಳನ್ನು ಪರೀಕ್ಷಿಸಿ, ಅವನಲ್ಲಿ ಉಳಿದ ಗುಣಗಳೇನೆಂಬುದು
ವಿಚಾರಿಸಿ, ಅವುಗಳಿಂದ ಅರ್ಹತೆಯನ್ನು ಕುರಿತು ತೀರ್ಮಾನಕ್ಕೆ ಬರಬೇಕು.
505. ಒಬ್ಬನಲ್ಲಿರುವ ಹಿರಿಯ ಗುಣಗಳಿಗೂ, ಅಲ್ಪ ಗುಣಗಳಿಗೂ, ಅವನಿಗೆ ದತ್ತವಾಗಿ ಬಂದ
ಕರ್ಮವೇ ಒರೆಗಲ್ಲಾಗುವುದು.
506. ತಮ್ಮವರು ಎಂಬ ಸಂಬಂಧವೇ ಇಲ್ಲದಿರುವವರನ್ನು ಅರಸನಾದನು ನಂಬದೆ ದೂರವಿರಿಸಬೇಕು;
ಏಕೆಂದರೆ ಅಂಥವರು ಯಾರ ಅಂಕೆಯೂ ಇಲ್ಲದೆ ತಪ್ಪು ಮಾಡಲೂ ನಾಚುವುದಿಲ್ಲ.
507. ಪ್ರೀತಿ, ಪಕ್ಷಪಾತಗಳಿಂದ ಏನೂ ಅರಿಯದ ಮೂರ್ಖರನ್ನು ನಂಬಿ ಒಂದು ಕೆಲಸಕ್ಕೆ ಅರಿಸುವುದು,
ಮೂರ್ಖತನದ ಪರಮಾವಧಿಯೆನಿಸುತ್ತದೆ.
508. ಬೇರೊಬ್ಬನ ಬಗ್ಗೆ ಒಂದೂ ತಿಳಿಯದೆ ಒಂದು ಕೆಲಸಕ್ಕೆ ನಿರ್ಧರಿಸುವ ಅರಸನು, (ಅವನಿಗೆ
ಮಾತ್ರವಲ್ಲದೆ) ಅವನ ಸಂತತಿಗೂ ತೀರದ ದುಃಖವನ್ನು ತರುತ್ತಾನೆ.
509. ಅರಸನಾದವನು ಯಾರನ್ನೂ ಹಿನ್ನೆಲೆ ಅರಿಯದೆ ನಂಬಕೂಡದು. ಚೆನ್ನಾಗಿ ಪರಿಶೀಲಿಸಿದ
ಮೇಲೆ ಅವರಲ್ಲಿ ನಂಬತಕ್ಕ ಗುಣಗಳನ್ನು ಕಂಡು ನಂಬಬೇಕು.
510. (ಒಬ್ಬನನ್ನು) ತಿಳಿಯದೆ ನಂಬುವುದೂ, ನಂಬಿದ ಮೇಲೆ ಅವನನ್ನು ಸಂದೇಹಿಸುವುದೂ ಅರಸನಿಗೆ
ತೀರದ ದುಃಖವನ್ನು ಉಂಟುಮಾಡುತ್ತವೆ.
|
|
|
|
ಅಧ್ಯಾಯ 52. ಅರಿತು
ಕಾರ್ಯಕ್ಕೆ ನೇಮಿಸುವುದು
|
|
|
|
511. ಒಳ್ಳೆಯದನ್ನೂ ಕೆಟ್ಟದನ್ನೂ ವಿಚಾರಮಾಡಿ ಒಳ್ಳೆಯ ವಿಚಾರಗಳಲ್ಲಿ ಮಾತ್ರ ಅಭಿಲಾಷೆ
ತೋರುವವನನ್ನು (ಅರಸನ ಕಾರ್ಯಕ್ಕೆ ಸಹಾಯಕನಾಗಿ) ನೇಮಿಸಬೇಕು.
512. ಐಶ್ವರ್ಯ (ಹಣ) ಬರುವ ಮಾರ್ಗವನ್ನು ಹೆಚ್ಚಿಸಿ, ಅದನ್ನು ಅಭಿವೃದ್ದಿಪಡಿಸಿ, ಬರುವ
ಕಂಟಕಗಳನ್ನು ಪರಿಶೀಲಿಸಿ, ನೀಗಿಸಬಲ್ಲವನೆ ಕಾರ್ಯಮುಖನಾಗಬೇಕು.
513. ಪ್ರೀತಿ, ಅರಿವು, ದೃಢ ನಿರ್ಧಾರ, ಆಶೆ ಇಲ್ಲದಿರುವಿಕೆ- ಈ ನಾಲ್ಕು ಒಳ್ಳೆಯ ಗುಣಗಳು
ಇರುವವನಲ್ಲೇ (ಅರಸನಾದವನು) ನಂಬಿಕೆ ಇರಿಸಬೇಕು.
514. ಹಲವು ಬಗೆಯಿಂದ ಪರೀಕ್ಷಿಸಿ ನಂಬಿ, ಉದ್ಯೋಗಕ್ಕೆ ತೊಡಗಿಸಿದ ಮೇಲೂ ಕಾರ್ಯದ ಹಾದಿ
ತಪ್ಪಿಸುವ ಜನರು ಈ ಲೋಕದಲ್ಲಿ ಹಲವರಿದ್ದಾರೆ.
515. ಕೆಲಸವನ್ನು ಚೆನ್ನಾಗಿ ತಿಳಿದು ಸಮರ್ಥವಾಗಿ ಎದುರಿಸಬಲ್ಲವನಿಗಲ್ಲದೆ, ತನಗೆ ಬೇಕಾದವನೆಂದು
ಒಬ್ಬನನ್ನು ಆ ಕೆಲಸಕ್ಕೆ ನೇಮಿಸಬಾರದು.
516. ಕಾರ್ಯ ಮಾಡುವವನ (ಸ್ವಭಾವ) ವನ್ನು ಪರೀಕ್ಷಿಸಿ, ಕಾರ್ಯದ ಸ್ವಭಾವವನ್ನು ಪರೀಕ್ಷಿಸಿ,
ತಕ್ಕ ಕಾಲವನ್ನು ತಿಳಿದುಕೊಂಡು ಕಾರ್ಯೋನ್ಮುಖವಾಗಬೇಕು.
517. ಈ ಕಾರ್ಯವನ್ನು ಈ ಸಾಧನದಿಂದ ಇಂಥವನು ಮುಗಿಸಬಲ್ಲನು ಎಂಬುದನ್ನು ಪರಿಶೀಲಿಸಿದ
ಮೇಲೆ ಆ ಕೆಲಸವನ್ನು ಅವನಿಗೆ ಒಪ್ಪಿಸಬೇಕು.
518. (ಒಬ್ಬನನ್ನು) ಒಂದು ಕೆಲಸವನ್ನು ಮಾಡಲು ಯೋಗ್ಯನೆಂದು ಪರಿಶೀಲಿಸಿದ ಮೇಲೆ ಅವನನ್ನು
ಅದಕ್ಕೆ ಅರ್ಹನಾಗುವಂತೆ ಬೆಳೆಯಲು ಬಿಡಬೇಕು.
519. ಕೈಕೊಂಡ ಕೆಲಸದಲ್ಲಿ ಯಾವಾಗಲೂ ಪ್ರಯತ್ನ ಪಡುವವನ ಸ್ನೇಹವನ್ನು ತಪ್ಪಾಗಿ ತಿಳಿಯುವ
ಅರಸನನ್ನು ಸಿರಿಬಿಟ್ಟು ತೊಲಗುತ್ತದೆ.
520. ಕೆಲಸ ಮಾಡುವವನು ನೇರವಾಗಿರುವವರೆಗೆ ಲೋಕವೂ ನೇರವಾಗಿರುತ್ತದೆ; ಅರಸನಾದವನು ಯಾವಾಗಲೂ
ತನ್ನ ಸೇವಕರ ನಡವಳಿಕೆಯನ್ನು ಪರೀಕ್ಷಿಸಬೇಕು.
|
|
|
|
ಅಧ್ಯಾಯ 53. ಬಂಧುಗಳನ್ನು
ಆದರಿಸುವಿಕೆ
|
|
|
|
521. ಒಬ್ಬನ ಸಿರಿ ಅಳಿದ ಮೇಲೂ, ಅವನ ಹಳೆಯ ಸಂಬಂಧವನ್ನು ನೆನೆಸಿ ಕೊಂಡಾಡುವುದು ಬಂಧುಗಳಲ್ಲಿ
ಇರುತ್ತದೆ.
522. ಪ್ರೀತಿ ಅಳಿಯದ ಸಂಬಂಧವು (ಒಬ್ಬನಿಗೆ) ದೊರೆತರೆ, ಅದೇ ಅವನಿಗೆ ಮೇಲ್ಮೆಯುಳ್ಳ
ಭಾಗ್ಯವನ್ನು ತರುತ್ತದೆ.
523. (ಸಂಬಂಧಿಗಳೊಡನೆ) ನೆಕಟತೆಯನ್ನು ಹೊಂದದಿರುವವನ ಬಾಳ್ವೆ ಕರೆಯಿಲ್ಲದ ಕೊಳದಲ್ಲಿ
ನೀರು ತುಂಬಿ ಹರಿದಂತೆ.
524. ಸಿರಿವಂತನಾಗಿ ತಾನು ಪಡೆದ ಫಲವೆಂದರೆ, ಸಂಬಂಧಿಗಳಿಂದ ಸುತ್ತುವರಿದು ಬಾಳುವುದು.
525. ಕೊಡುಗೈ ದಾನ, ಸವಿ ಮಾತು- ಈ ಗುಣಗಳಿದ್ದರೆ, ಸಂಬಂಧಿಗಳು ಹೆಚ್ಚು ಹೆಚ್ಚಾಗಿ ಬಂದು
ಸುತ್ತುವರಿಯುವರು.
526. ಹೇರಳವಾಗಿ ಕೊಡುವವನೂ, ಕೋಪವನ್ನು ತೋರದವನೂ ಆಗಿದ್ದರೆ, ಅವನಂತೆ ಸಂಬಂಧಿಗಳ ಕೂಡ
ಬಾಳುವವರು ಲೋಕದಲ್ಲಿ ಇಲ್ಲ.
527. ಕಾಗೆಯು ಬಚ್ಚಿಟ್ಟುಕೊಳ್ಳದೆ ತನ್ನ ಬಳಗವನ್ನೆಲ್ಲ ಕರೆದು ಉಣ್ಣುತ್ತದೆ, ಐಶ್ವರ್ಯವೂ
ಅಂಥ ಸ್ವಭಾವವಿರುವವರಲ್ಲೇ ಇರುತ್ತದೆ.
528. ಅರಸನಾದವನು, ಎಲ್ಲರನ್ನೂ ಸಾಧಾರಣ ದೃಷ್ಟಿಯಲ್ಲಿ ನೋಡದೆ, ಅವರವರ ಅರ್ಹತೆಗನುಗುಣವಾಗಿ
ಆದರಿಸಿದರೆ, ಅದನ್ನು ನೋಡಿ ಮೆಚ್ಚಿ ಹಲವರು ಅವನ ಸುತ್ತ ಸೇರುತ್ತಾರೆ.
529. ಮೊದಲು ಸಮೀಪವರ್ತಿಗಳಾಗಿದ್ದು, ಕಾರಣಾಂತರದಿಂದ ಬೇರೆಯಾದವರು ಆ ಅತೃಪ್ತಿಯ ಕಾರಣವಿಲ್ಲವಾದಾಗ
ಮತ್ತೆ ಬಂದು ಸೇರುವರು.
530. ತನ್ನೋಡನಿದ್ದು ಬೇರೆಯಾಗಿ, ಯಾವುದೋ ಕಾರಣದಿಂದ ಮತ್ತೆ ಸೇರ ಬಂದವನನ್ನು ಅರಸನಾದವನು
ಸಹಾನುಭೂತಿಯಿಂದ ನೋಡಿ, ಆಲೋಚನೆ ಮಾಡಿ ಸ್ವೀಕರಿಸಬೇಕು
|
|
|
|
ಅಧ್ಯಾಯ 54. ಮರೆಯದಿರುವಿಕೆ
|
|
|
|
531. ಕಾಮಾದಿಗಳಿಂದುಂಟಾದ ಅತಿ ಆನಂದದಿಂದ ಬರುವ ಮರವೆ, ಅತಿ ಕೋಪದಿಂದ ಬರುವ ಮರವೆಗಿಂತ
ಕೆಟ್ಟದು.
532. ನಿತ್ಯದಾರಿದ್ರ್ಯ ಅರಿವನ್ನು ಕೊಲ್ಲುವಂತೆ ಮರವೆಯು ಒಬ್ಬನ ಕೀರ್ತಿಯನ್ನು ಕೆಡಿಸುತ್ತದೆ.
533. ಮರವೆಯ ವಶವಾದವರಿಗೆ ಕೀರ್ತಿಯಿಂದ ಬಾಳುವ ನೆಲೆ ಇಲ್ಲ. ಅದು ಲೋಕದಲ್ಲಿರುವ ಎಲ್ಲಾ
ವಿಚಾರಶೀಲರೂ ಒಪ್ಪುವಂಥ ನಂಬಿಕೆ.
534. (ಮನಸ್ಸಿನಲ್ಲಿ) ಅಂಜಿಕೆ ಇರುವವರಿಗೆ, ಕೋಟೆಯ ರಕ್ಷಣೆ ಇದ್ದರೂ ಫಲವಿಲ್ಲ. ಅದೇ
ರೀತಿ ಮರವೆಯ ವಶವಾದವರಿಗೆ (ಎಲ್ಲ ಅನುಕೂಲವಿದ್ದರೂ) ಫಲವಿಲ್ಲ.
535. ಮುಂದೆ ಬರಲಿರುವ ಸಂಕಟಗಳನ್ನು ತಿಳಿದು ಕಾಯ್ದುಕೊಳ್ಳದೆ ಮರೆತು ಬಿಡುವವನು. ಅವು
ಬಂದ ಮೇಲೆ ತನ್ನ ಸ್ಥಿತಿಯನ್ನು ನೆನೆದು ಪಶ್ಚಾತ್ತಾಪಪಡುವನು.
536. ಯಾರಲ್ಲೂ ಯಾವ ಕಾಲದಲ್ಲೂ ಮರವೆಯಿಂದ ಪರವಶವಾಗದಿರುವ ಸ್ಥಿತಿಯ ತಪ್ಪದೆ ಇದ್ದರೆ,
ಅದಕ್ಕೆ ಒಪ್ಪುವಂಥದು ಬೇರೆ ಇಲ್ಲ.
537. ಮರೆಯದಿರುವಿಕೆಯೆಂಬ ಸಾಧನದಿಂದ, ಕರ್ತವ್ಯಗಳನ್ನು ಪಟ್ಟು ಹಿಡಿದು ಮಾಡಿದರೆ, ಅಸಾಧ್ಯವೆಂದು
ಆಗದಿರುವ ಕಾರ್ಯ ಒಂದೂ ಇಲ್ಲ.
538. ತಿಳಿದವರು ಕೀರ್ತಿಸಿ ಹೇಳಿದ ಕಾರ್ಯಗಳನ್ನು ಸಾಧಿಸಿಮಾಡಿ ತೋರಿಸ ಬೇಕು; ಮಾಡದೆ
ಮರೆತುಬಿಟ್ಟರೆ, ಏಳು ಜನ್ಮಗಳಲ್ಲೂ ಒಳಿತಾಗುವುದಿಲ್ಲ.
539. (ಅರಸನಾದವನು) ತನ್ನ ಸಂತೋಷದಲ್ಲಿ ಮೈಮರೆತಿರುವಾಗ, ಆ ರೀತಿ ಮರೆತು ಕೆಟ್ಟವರನ್ನು
ನೆನೆದುಕೊಳ್ಳಬೇಕು.
540. (ಅರಸನಾದವನು) ಆಲೋಚಿಸಿದುದನ್ನು ಬಿಡದೆ, ಮತ್ತೆ ಮತ್ತೆನೆನೆದುಕೊಳ್ಳುತ್ತಿದ್ದರೆ,
ಅವನು ಬಯಸಿದುದನ್ನು ಪಡೆದುಕೊಳ್ಳುವುದು ಸುಲಭವಾಗುವುದು.
|
|
|
|
ಅಧ್ಯಾಯ 55. ನ್ಯಾಯಾಡಳಿತ
|
|
|
|
541.
ಯಾರೆಲ್ಲ
ಆಗಲಿ ತಪ್ಪು ಯಾವುದೆಂದು ಪರಿಶೀಲಿಸಿ, ಪಕ್ಷಪಾತವೆಣಿಸದೆ ವಿಚಾರಮಾಡಿ ನಡೆದುಕೊಳ್ಳುವುದೇ ನ್ಯಾಯವೆನಿಸುವುದು.
542.
ಲೋಕದಲ್ಲಿರುವ
ಜೀವಿಗಳೆಲ್ಲ ಮಳೆಯನ್ನು ನಿರೀಕ್ಷಿಸಿ ಬಾಳುವರು; ಅದೇ ರೀತಿ ಪ್ರಜೆಗಳೆಲ್ಲಾ ಅರಸನ (ನ್ಯಾಯಪಾಲನೆಯ)
ರಾಜದಂಡವನ್ನು ನಿರೀಕ್ಷಿಸಿ ಬಾಳುವರು.
543.
ಬಾಹ್ಮಣರ
ವೇದಗಳಿಗೂ, ಧರ್ಮಕ್ಕೂ ಅಡಿಗಲ್ಲಾಗಿ ನಿಂತು (ಕಾಪಾಡುವುದು) ಅರಸನ ರಾಜದಂಡ.
544.
ಪ್ರಜೆಗಳನ್ನು
(ಪ್ರೀತಿಯಿಂದ) ತಪ್ಪಿಕೊಂಡು, ರಾಜದಂಡದಿಂದ ನ್ಯಾಯವನ್ನು ನಡೆಸುವ ಅರಸನ ಅಡಿಗಳನ್ನು ಲೋಕವೇ ತಬ್ಬಿಕೊಂಡು
ಬಾಳುವುದು.
545.
ನೀತಿಧರ್ಮಗಳಿನುಸಾರವಾಗಿ
ತನ್ನ ರಾಜದಂಡವನ್ನು ನಿರ್ವಿಹಿಸುವ ಅರಸನ ನಾಡಿನಲ್ಲಿ (ಸಕಾಲದಲ್ಲಿ) ಮಳೆಯೂ ಸಮೃದ್ದಿಯಾದ ಬೆಳೆಯೂ
ಒಟ್ಟಿಗೇ ನೆಲಸುತ್ತದೆ.
546.
ಅರಸನಿಗೆ
ಜಯಗಳಿಸಿ ತರುವುದು ಆಯುಧಗಳಲ್ಲ; ಪಕ್ಷಪಾತವಿಲ್ಲದ ಅವನ ರಾಜದಂಡದ ಬಲ.
547.
ಲೋಕವನ್ನೆಲ್ಲಾ
ಅರಸನು ಕಾಪಾಡುವನು; ನೀತಿಧರ್ಮ ಕೆಡದಂತೆ ಆಡಳಿತ ನಡೆಸುವವನಾದರೆ ಅರಸನನ್ನು ಆ ಧರ್ಮವೇ ಕಾಪಾಡುವುದು.
548.
ಭೋಳೇ
ಸ್ವಭಾವದಿಂದ, ವಿಚಾರ ಮಾಡದೆ, ನೀತಿ ಧರ್ಮವನ್ನು ನಡೆಸದಿರುವ ಅರಸನು, ಕೀಳು ಸ್ಥಿತಿಗೆ ಬಂದು ತಾನೇ
ಕೆಡುತ್ತಾನೆ.
549.
ಪ್ರಜೆಗಳನ್ನು
ಇತರರು ಬಾಧೆಪಡಿಸದಂತೆ ಕಾಪಾಡಿ ಅವರನ್ನು ಸಲಹಿ, ಅಪರಾಧಗಳಿಗೆ ತಕ್ಕ ದಂಡನೆ ವಿಧಿಸುವುದು ಅರಸನ
ಕರ್ತವ್ಯವೇ ಹೊರತು ಅದು ಅವನ ದೋಷದಲ್ಲ.
550.
ಅರಸನಾದವನು
ಕೆಡುಕನ್ನು ಮಾಡುವ ಪ್ರಜೆಗಳಿಗೆ ಕೋಲೆದಂಡನೆಯಿಂದ ದಂಡಿಸುವುದು, ಪಯಿರನ್ನು ಕಾಪಾಡಲು ಕೆಳೆಯನ್ನು
ನಿವಾರಿಸುವುದಕ್ಕೆ ಸಮಾನವಾದುದು.
|
|
|
|
ಅಧ್ಯಾಯ 56. ಕ್ರೂರಡಳಿತ
|
|
|
|
551.
ಪ್ರಜೆಗಳನ್ನು
ಹಿಂಸಿಸಿ ದಮನ ಮಾಡುತ್ತ, ಧರ್ಮವಲ್ಲದ ಕಾರ್ಯಗಳಲ್ಲಿ ತೊಡಗಿದ ಅರಸನು ಕೊಲೆಗಾರನಿಗಿಂತ ಕೀಳೆನಿಸಿಕೊಳ್ಳುತ್ತಾನೆ.
552.
ಆಡಳಿತ
ದಂಡವನ್ನೆತ್ತಿ ಪ್ರಜೆಗಳನ್ನು ಹಣ ಕೇಳುವ ಅರಸನು, ಹಾದಿಯಲ್ಲಿ ಆಯುಧ ತೋರಿಸಿ ಪಥಿಕರಿಂದ ಹಣ ಸುಲಿಯುವ
ದರೋಡೆಗಳ್ಳನನ್ನು ಹೋಲುತ್ತಾನೆ.
553.
ಪ್ರತಿನಿತ್ಯವೂ
ತನ್ನ ಆಡಳಿತದಲ್ಲಿರುವ ಒಳಿತುಕೆಡುಕುಗಳನ್ನು ವಿಚಾರಮಾಡಿ, ಧರ್ಮದಿಂದ ನಡೆದುಕೊಳ್ಳದ ಅರಸನು ದಿನದಿನವೂ
ತನ್ನ ನಾಡನ್ನು ಅವನತಿಗೆ ತರುವನು.
554.
ದುರಾಡಳಿತಗಾರನಾಗಿ,
ವಿಚಾರಮಾಡದೆ ದುಡುಕುವ ಅರಸನು, ತನ್ನ ಸಂಪತ್ತನ್ನು ಪ್ರಜೆಗಳನ್ನೂ ಒಟ್ಟಾಗಿ ಕಳೆದುಕೊಳ್ಳುವನು.
555.
ಸಂಕಟಕ್ಕೊಳಗಾಗಿ
ಸಹಿಸಲಾರದೆ ಅಳುವ (ಪ್ರಜೆಗಳ) ಕಣ್ಣೀರಲ್ಲವೆ (ನೀತಿ ಪಾಲಿಸದ ಅರಸನ) ಸಿರಿಯನ್ನು ಕತ್ತರಿಸಿ ನಾಶಪಡಿಸುವ
ಗರಗಸ.
556.
ಅರಸರಿಗೆ
ಮನ್ನಣೆ ದೊರೆಯಲು ನ್ಯಾಯವಾದ ಆಳ್ವಿಕೆಯೇ ಕಾರಣವಾಗುವುದು; ಅದಿಲ್ಲವಾದರೆ ಅರಸರಿಗೆ ಕೀರ್ತಿನೆಲೆ
ಇಲ್ಲವಾಗಿ ಹೋಗುವುದು.
557.
ಮಳೆ
ಹನಿ ಇಲ್ಲವಾದರೆ ಲೋಕವು ಹಾನಿಗೊಳಗಾಗುವಂತೆ ಅರಸನ ಕರುಣೆ ಇಲ್ಲದೆ ನಾಡಿನ ಪ್ರಜೆಗಳೂ ಕಷ್ಟಪಡುತ್ತಾರೆ.
558.
ನೀತಿಧರ್ಮಗಳನ್ನು
ಪಾಲಿಸದಿರುವ ಅರಸನ, ರಾಜದಂಡದ ಕೆಳಗೆ ಆಶ್ರಯ ಪಡೆದರೆ, ಸಿರಿವಂತಿಕೆಗಿಂತ ಬಡತನವೇ ಮೇಲು ಎನಿಸಿಕೊಳ್ಳುತ್ತದೆ.
559.
ಅರಸನಾದವನು
ನೀತಿಧರ್ಮ ಉಲ್ಲಂಘಿಸಿ ಆಳ್ವಿಕೆ ನಡೆಸಿದರೆ, ಆ ನಾಡಿನಲ್ಲಿ ಮಳೆಗಾಲ ತಪ್ಪಿ, ಮೋಡಗಳು (ಚದುರಿ)
ಮಳೆ ಸುರಿಯಲು ನಿರಾಕರಿಸುತ್ತದೆ.
560.
ಕಾಯುವ
ಅರಸನು ರಕ್ಷಿಸದಿದ್ದರೆ, ಅವು ಹಾಲು ಕರೆಯುವುದಿಲ್ಲ; ಬ್ರಾಹ್ಮಣರೂ ಧರ್ಮಗ್ರಂಥಗಳನ್ನು ಮರೆಯುತ್ತಾರೆ.
|
|
|
|
ಅಧ್ಯಾಯ 57. ಭೀತಿ
ನಿವಾರಣಿ
|
|
|
|
561.
ಮಾಡಿದ
ಅಪರಾಧಗಳನ್ನು ತಕ್ಕ ರೀತಿಯಲ್ಲಿ ವಿಚಾರಿಸಿ, ಆ ಅಪರಾಧವನ್ನು ಮತ್ತೆ ಮಾಡದಂತೆ ಒಪ್ಪುವ ದಂಡನೆಯನ್ನು
ವಿಧಿಸುವವನೇ ಅರಸನೆನಿಸಿಕೊಳ್ಳುವನು.
562.
ತಮ್ಮ
ಸಿರಿಯು ನಿಡುಗಾಲ ನಾಶವಾಗದಂತೆ ಇರಲು ಬಯಸುವ ಅರಸರು (ದಂಡಿಸುವಾಗ) ಮೊದಲು ಕಟ್ಟುನಿಟ್ಟಾಗಿ ಇರುವಂತೆ
ತೋರಿಸಿ, ಅನಂತರ ಸೌಮ್ಯ ರೀತಿಯಲ್ಲಿ ಶಿಕ್ಷಿಸಬೇಕು.
563.
ಪ್ರಜೆಗಳು
ಭೀತಿಗೊಳ್ಳುವಂಥ ಕಾರ್ಯಗಳನ್ನು ಮಾಡಿ, ನೀತಿಭ್ರಷ್ಟ ಆಳರಸನೆನಿಸಿಕೊಂಡರೆ ಅವನು ನಿಶ್ಚಯವಾಗಿ ಒಡನೆಯೇ
ಕೆಡುತ್ತಾನೆ.
564.
ತನ್ನ
ಪ್ರಜೆಗಳ ಬಾಯಲ್ಲಿ ಕ್ರೂರಿ ಎಂದು ಕರೆಸಿಕೊಳ್ಳುವ ಅರಸನು ಬಾಳಿನಲ್ಲಿ ಹಿರಿಮೆಯನ್ನು ಕಳೆದುಕೊಂಡು,
ಒಡನೆಯೇ ನಾಶವಾಗುವನು.
565.
ಜನರಿಗೆ
ಕಾಣಲು ದುರ್ಲಭನಾಗಿ, ಸಿಡುಕು ಮೋರೆಯಿಂದ ಕೂಡಿದ ಅರಸನ ಹೇರಳವಾದ ಸಿರಿಯು, ದೆವ್ವ ಬಡಿದು ಕಾದೊಕೊಂಡಿರುವಂತೆ
ಇರುವುದು.
566.
(ಅರಸನು)
ಕಡುನುಡಿಯವನೂ ಕರುಣೆಯ ಕಣ್ಣು ಇಲ್ಲದವನೂ ಆದರೆ ಅವನ ನಿಡಿದಾದ ಐಶ್ವರ್ಯವು ನಿಡಿದಾಗಿ ನಿಲ್ಲದೆ
ಕೊಡಲೇ ನಾಶವಾಗುತ್ತದೆ.
567.
ಕಡು
ಮಾತೂ, ಕಟ್ಟಳೆ ಮೀರಿದ ದಣ್ಣನೆಯೂ, ಅರಸನ ಅಜೇಯ ಶಕ್ತಿಯನ್ನು ಕ್ಷಯಿಸುವಂತೆ ಮಾಡುವ ಅರವಾಗುತ್ತದೆ.
568.
(ಅರಸನಾದವನು)
ಮಂತ್ರಿಗಳೇ ಮೊದಲಾದ ತನಗೆ ಬೇಕಾದವರೊಡನೆ ಸೇರಿ ವಿಚಾರಮಾಡದೆ, ಕೆಲಸ ಕೆಟ್ಟಾಗ ಅವರ ಮೇಲೆ ಕೋಪಗೊಂಡು,
ಅಬ್ಬರಿಸಿದರೆ (ಚೀರಿದರೆ) ಅವನ ಸಿರಿಯು ಸೊರಗುತ್ತದೆ.
569.
ಮುಂಚಿತವಾಗಿ
ಕೋಟೆಯನ್ನು ಕಟ್ಟಿ ಬಲಪಡಿಸಿಕೊಳ್ಳಲಾರದ ಅರಸನು ಹೋರಾಟ ಬಂದ ಕಾಲದಲ್ಲಿ (ರಕ್ಷಣೆ ಇಲ್ಲದೆ) ಅಂಜಿ,
ಶೀಘ್ರವೇ ಅಳಿಯುತ್ತಾನೆ.
570.
ಕ್ರೂರ
ನೀತಿಯ ಆಳ್ವಿಕೆಯು, ಕಲಿಯದವರನ್ನು (ಧರ್ಮಗ್ರಂಥಗಳನ್ನು ಅರಿಯದವರನ್ನು) ತನಗೆ ಆಸರೆಯಾಗಿ ಮಾಡಿಕೊಳ್ಳುವುದು;
ಅದಕ್ಕಿಂತ ಹೆಚ್ಚು ಹೊರೆ ಭೂಮಿಗಿಲ್ಲ.
|
|
|
|
ಅಧ್ಯಾಯ 58. ಕರುಣೆಯ
ದೃಷ್ಟಿ
|
|
|
|
571.
ಕರುಣೆ
ಎನ್ನುವ ಅತಿಶಯವಾದ ಸೌಂದರ್ಯವು (ಆಭರಣವು) ಇರುವ ಕಾರಣದಿಂದಲೇ ಈ ಲೋಕವು ಅಳಿಯುದೆ ಉಳಿದುಕೊಂಡಿದೆ.
572.
ಕರುಣೆಯಿಂದಲೇ
ಲೋಕ ನಡೆಯುತ್ತಿದೆ. ಕರುಣೆಯಿಲ್ಲದವರು ಬದುಕಿರುವುದು ಭೂಮಿಗೆ ಹೊರೆಯಷ್ಟೇ ಹೊರತು ಬೇರೆ ಇಲ್ಲ.
573.
ಹಾಡಿನೊಂದಿಗೆ
ಸಮರಸವಿಲ್ಲವಾದರೆ ಆ ಸಂಗೀತದಿಂದ ಏನು ಫಲವಿದೆ? ಅದೇ ರೀತಿ ಕರುಣೆಯಿಲ್ಲದ ಕಣ್ಣು ಇದ್ದೂ ಏನು ಪ್ರಯೋಜನ?
574.
ತಕ್ಕ
ಪ್ರಮಾಣದಲ್ಲಿ ಕರುಣೆ ತೋರದ ಕಣ್ಣುಗಳು ಮುಖದಲ್ಲಿ ಇರುವಂತೆ ತೋರುವುದನ್ನು ಬಿಟ್ಟರೆ ಬೇರೇನು ಪ್ರಯೋಜನ
ನೀಡುತ್ತದೆ?
575.
ಕರುಣೆಯೇ
ಕಣ್ಣಿಗೆ ಅಲಂಕಾರ; ಅದಿಲ್ಲವಾದರೆ ಆ ಕಣ್ಣು ಹುಣ್ಣೆಂದು ಭಾವಿಸಲ್ಪಡುತ್ತದೆ.
576.
ಕಣ್ಣಿದ್ದೂ
ಕರುಣೆ ಇಲ್ಲದವರು, ಮಣ್ಣಿನಲ್ಲಿ ಚಲಿಸದೆ ನಿಂತ ಮರದ ಸಮಾನರು.
577.
ಕರುಣೆ
ಇಲ್ಲದವರು ಕಣ್ಣಿಲ್ಲದವರೆನಿಸಿಕೊಳ್ಳುವರು; ಕಣ್ಣುಳ್ಳವರು ಕರುಣೆಯಿಲ್ಲದವರಾಗಿರುವುದು ಸಾಧ್ಯವಿಲ್ಲ.
578.
ಕರ್ತವ್ಯಕ್ಕೆ
ಚ್ಯುತಿ ಬಾರದಂತೆ, ಕರುಣೆ ತೋರಬಲ್ಲ ಅರಸನಿಗೆ, ಈ ಲೋಕವನ್ನೇ ತನ್ನದಾಗಿ ಮಾಡಿಕೊಳ್ಳುವ ಹಕ್ಕು ಇರುತ್ತದೆ.
579.
ಶಿಕ್ಷಿಸಲು
ಅರ್ಹರಾಗಿದ್ದರೂ, ಕರುಣೆ ತೋರಿ, ಶಿಕ್ಷಿಸದೆ ಸಹನೆಯಿಂದ ಕಾಯುವ ಗುಣವೇ (ಎಲ್ಲಕ್ಕಿಂತ) ಹಿರಿದು.
580.
ಕರುಣೆಯುಳ್ಳ
ನಾಗರಿಕ ಗುಣವನ್ನು ಬಯಸುವವರು, ತಮಗೆ ಬೇಕಾದವರು ನಂಜು ನೀಡದರೂ ಅದನ್ನು ಕುಡಿದು ಶಾಂತವಾಗಿರುವರು.
|
No comments:
Post a Comment